ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಮೇಲ್ಮೈ ಜಲಮೂಲದಿಂದ ನೀರು ಪೂರೈಕೆ
ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ‘ಜಲಧಾರೆ’ ಯೋಜನೆ ಕುರಿತು ನಡೆದ ಸಭೆ.
ಬೆಂಗಳೂರು: ಮೇಲ್ಮೈ ಜಲಮೂಲಗಳಿಂದ ನೀರನ್ನು ಶುದ್ಧೀಕರಿಸಿ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ‘ಜಲಧಾರೆ’ ಯೋಜನೆ ಕುರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಿನ್ನೆ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.
ಈ ಯೋಜನೆಯನ್ನು ಮಾರ್ಪಡಿಸಿ, ಬೆಂಗಳೂರನ್ನು ಹೊರತುಪಡಿಸಿ, ಉಳಿದ ನಗರ ಪ್ರದೇಶಗಳನ್ನು ಸೇರ್ಪಡೆಗೊಳಿಸುವುದು ಸೂಕ್ತ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ನಗರಾಭಿವೃದ್ಧಿ ಇಲಾಖೆಯವರು ಯೋಜನೆಯ ರೂಪುರೇಷೆ, ಅನುಷ್ಠಾನ ಹಾಗೂ ನಿರ್ವಹಣೆ ಕುರಿತು ಚರ್ಚಿಸಿ, ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು. ಇದರೊಂದಿಗೆ ಯೋಜನೆಯ ಸ್ವರೂಪ, ಸಂಪನ್ಮೂಲ ವ್ಯವಸ್ಥೆ ಕುರಿತು ಸಹ ಚರ್ಚಿಸಲಾಯಿತು.
ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಕೃಷ್ಣಬೈರೇಗೌಡ, ಜಲಸಂಪನ್ಮೂಲ ಹಾಗೂ ಉನ್ನತ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಸುಬ್ರಮಣ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ನಗರಾಭಿವೃದಿ ಇಲಾಖೆ ಕಾರ್ಯದರ್ಶಿ ಅಜುಂ ಪರ್ವೇಜ್, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಏಕ್‍ರೂಪ್ ಕೌರ್ ಮತ್ತಿತರರು ಹಾಜರಿದ್ದರು.