ನೀರಿನ ಸುಸ್ಥಿರ ನಿರ್ವಹಣೆ ಕುರಿತು ಸಿಎಂ ಜೊತೆ ಚರ್ಚಿಸಿದ ಜಲತಜ್ಞ ರಾಜೇಂದ್ರ ಸಿಂಗ್
ಸತತ ಬರಗಾಲ ಎದುರಿಸುತ್ತಿರುವ ರಾಜ್ಯದಲ್ಲಿ ಸುಸ್ಥಿರ ಜಲ ನಿರ್ವಹಣೆಗೆ ಒತ್ತು ನೀಡುವ ಅಗತ್ಯವಿದೆ.
ಬೆಂಗಳೂರು: ರೇಮನ್ ಮ್ಯಾಗಸೆಸ್ ಪ್ರಶಸ್ತಿ ಪುರಸ್ಕೃತ ಜಲತಜ್ಞ ರಾಜೇಂದ್ರ ಸಿಂಗ್ ಮತ್ತು ಅವರ ತಂಡದವರು ಭಾನುವಾರ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ನೀರಿನ ಸುಸ್ಥಿರ ನಿರ್ವಹಣೆ ಕುರಿತು ಚರ್ಚಿಸಿದರು.
ಸತತ ಬರಗಾಲ ಎದುರಿಸುತ್ತಿರುವ ರಾಜ್ಯದಲ್ಲಿ ಸುಸ್ಥಿರ ಜಲ ನಿರ್ವಹಣೆಗೆ ಒತ್ತು ನೀಡುವ ಅಗತ್ಯವಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ನಾಗರಿಕ ಸಮಾಜದಲ್ಲಿ ರೈತರು, ವಿದ್ಯಾರ್ಥಿಗಳು, ಕೈಗಾರಿಕೋದ್ಯಮಿಗಳು ಮತ್ತು ಇತರರು,ಜಲ ಸಾಕ್ಷರರಾಗುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ಸಿಂಗ್ ಅವರ ಅಭಿಪ್ರಾಯಗಳನ್ನು ಅನುಮೋದಿಸಿದ 75 ಲಕ್ಷ ಜನರನ್ನು ಸಮುದಾಯ ಕೃಷಿಯಲ್ಲಿ ತೊಡಗಿಸಲು ಚಿಂತನೆ ನಡೆಸಲಾಗಿದೆ ಎಂದು ವಿವರಿಸಿದರು.
ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು ರಾಜ್ಯದ ಜಲ ಸಂಪನ್ಮೂಲದ ವೈಜ್ಞಾನಿಕ ಬಳಕೆ ಸರ್ಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಜಲ ಸಾಕ್ಷರತೆ ಕಾರ್ಯಕ್ರಮಕ್ಕೆ ಸರ್ಕಾರ ಸಕಾರಾತ್ಮಕ ವಾಗಿ ಚಿಂತನೆ ನಡೆಸಿದೆ ಎಂದು ನುಡಿದರು.
ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶ್ ಮೂರ್ತಿ, ಚಿತ್ರನಿರ್ದೇಶಕ ಎನ್.ಆರ್. ನಂಜುಂಡೇಗೌಡ ಹಾಗೂ ವಿಜಯಪುರದ ರೈತ ಮುಖಂಡ ಅಪ್ಪಾಸಾಹೇಬ್ ಯರ್ನಾಳ ಉಪಸ್ಥಿತರಿದ್ದರು.