ನವದೆಹಲಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಬಗ್ಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ತಪ್ಪಿತಸ್ಥರು ಯಾರೇ ಆದರೂ ಕಠಿಣ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಗಾಗಿ ದೆಹಲಿಗೆ ಆಗಮಿಸಿರುವ ಹೆಚ್.ಡಿ.ಕುಮಾರಸ್ವಾಮಿ ಅವರು, ಸುದ್ದಿಗಾರ ಪ್ರಶ್ನೆಗೆ ಉತ್ತರಿಸುತ್ತಾ, "ಈ ಬಗ್ಗೆ ನಾನು ಏನನ್ನೂ ಹೇಳಲು ಇಷ್ಟ ಪಡುವುದಿಲ್ಲ. ಅದು, ಪ್ರಮೋದ್ ಮುತಾಲಿಕ್ ಆಗಿರಲಿ ಅಥವಾ ಇನ್ಯಾರೇ ಇರಲಿ, ಕಾನೂನಿನ ವಿರುದ್ಧವಾಗಿ, ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವ ಮತ್ತು ಬೆಂಬಲ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದರು.



ಭಾನುವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರವಧಿಯಲ್ಲಿ ಮಹಾರಾಷ್ಟ್ರದಲ್ಲಿ ಇಬ್ಬರು ಮತ್ತು ಕರ್ನಾಟಕದಲ್ಲಿ ಇಬ್ಬರು ಪತ್ರಕರ್ತರ ಹತ್ಯೆಯಾಗಿದೆ. ಆದರೆ ಈ ಬಗ್ಗೆ ಯಾರೂ ಚಕಾರ ಎತ್ತಲಿಲ್ಲ. ಆದರೀಗ ಗೌರಿ ಹತ್ಯೆಗೆ ಕೇಂದ್ರದ ಬಿಜೆಪಿ ಸರ್ಕಾರವನ್ನು ದೂಷಿಸುತ್ತಿದ್ದಾರೆ. ಪ್ರಧಾನಿ ಮೋದಿಗೂ, ಗೌರಿ ಲಂಕೇಶ್ ಹತ್ಯೆಗೂ ಏನು ಸಂಬಂಧ? ಹತ್ಯೆ ನಡೆದಿರುವುದು ಕರ್ನಾಟಕದಲ್ಲಿ. ಇಲ್ಲಿ ರಾಜ್ಯ ಸರ್ಕಾರ ಏನು ಸತ್ತಿತ್ತೆ? ಎಲ್ಲರೂ ಮೋದಿ ಈ ಹತ್ಯೆ ಸಂಬಂಧ ಪ್ರತಿಕ್ರಿಯಿಸಲಿ ಎಂದು ಕಾಯುತ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ ಒಂದು ನಾಯಿ ಸತ್ತರೂ ಅದಕ್ಕೆ ಪ್ರಧಾನಿ ಮೋದಿ ಹೊಣೆಯೇ? ಎಂದು ಹೇಳುವ ಮೂಲಕ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಒಂದು ನಾಯಿಯ ಸಾವಿಗೆ ಹೋಲಿಸಿದ್ದರು.