ಉಪ ಚುನಾವಣೆ: ಎಲ್ಲಿ ಯಾರಿಗೆ ಮುನ್ನಡೆ?
ಮಧ್ಯಾಹ್ನ 12 ಗಂಟೆಯೊಳಗೆ ಎಲ್ಲಾ ಕ್ಷೇತ್ರಗಳ ಅಂತಿಮ ಫಲಿತಾಂಶ ಹೊರಬೀಳಲಿದೆ.
ಬೆಂಗಳೂರು: ಕರ್ನಾಟಕದಲ್ಲಿ ಎರಡು ವಿಧಾನಸಭೆ ಮತ್ತು ಮೂರು ಲೋಕಸಭೆ ಚುನಾವಣೆಗೆ ನಡೆದ ಚುನಾವಣೆಯ ಮತಎಣಿಕೆ ಕಾರ್ಯ ಇಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದೆ.
ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಭಾರೀ ಮುನ್ನಡೆ ಸಾಧಿಸಿದ್ದಾರೆ. ಆರನೇ ಸುತ್ತಿನ ಮತ ಎಣಿಕೆ ಬಳಿಕವೂ ಒಂದು ಲಕ್ಷ ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಜೆ.ಶಾಂತ ಹಿನ್ನಡೆ ಸಾಧಿಸಿದ್ದಾರೆ.
ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ ಎರಡು ಲಕ್ಷ ಮತಗಳನ್ನು ಪಡೆದು ಮುನ್ನಡೆ ಕಾಯ್ದುಕೊಂಡಿದ್ದಾರೆ. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹಿನ್ನಡೆ ಸಾಧಿಸಿದ್ದಾರೆ.
ಮಂಡ್ಯದಲ್ಲಿ ಜೆಡಿಎಸ್ - ಕಾಂಗ್ರೆಸ್ ಅಭ್ಯರ್ಥಿ ಎಲ್. ಆರ್. ಶಿವರಾಮೇಗೌಡ 66079 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದರೆ, ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಹಿನ್ನಡೆ ಅನುಭವಿಸಿದ್ದಾರೆ.
ರಾಮನಗರದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಮುನ್ನಡೆ ಕಾಯ್ದುಕೊಂಡಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೊನೆ ಎರಡು ದಿನದಲ್ಲಿ ಕಾಂಗ್ರೇಸ್ ಸೇರಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದ ಎಲ್. ಚಂದ್ರಶೇಖರ್ ಅವರಿಗೆ 1811 ಮತಗಳು ಬಿದ್ದಿವೆ.
ಜಮಖಂಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮೇಗೌಡ ಮುನ್ನಡೆ ಸಾಧಿಸಿದ್ದು, ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣೀ ಹಿನ್ನಡೆ ಅನುಭವಿಸಿದ್ದಾರೆ.
ಮಧ್ಯಾಹ್ನ 12 ಗಂಟೆಯೊಳಗೆ ಎಲ್ಲಾ ಕ್ಷೇತ್ರಗಳ ಅಂತಿಮ ಫಲಿತಾಂಶ ಹೊರಬೀಳಲಿದೆ.