ಬೆಂಗಳೂರು: ಬೆಂಗಳೂರು ನಗರವನ್ನು ನಾಲ್ಕು ತಿಂಗಳಲ್ಲಿ ವೈಫೈ‌ ನಗರವನ್ನಾಗಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.


COMMERCIAL BREAK
SCROLL TO CONTINUE READING

ಮಹಾಲಕ್ಷ್ಮಿ ಲೇಔಟ್‌ನ ಕಮಲಮ್ಮನ ಗುಂಡಿ ಆಟದ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ನಗರದೆಲ್ಲೆಡೆ ವೈಫೈ ಹಾಕುವ ಕೆಲಸ‌ ಮಾಡಲಾಗುತ್ತಿದ್ದು, ಈ ಸಂಬಂಧ ಬಿಬಿಎಂಪಿ‌ ಆಯುಕ್ತರು ಹಲವು ಸಭೆ ನಡೆಸಿದ್ದಾರೆ. ಇನ್ನು ನಾಲ್ಕು ತಿಂಗಳಲ್ಲಿ ಎಲ್ಲೆಡೆ ವೈಫೈ ಸೌಲಭ್ಯ‌ ಒದಗಿಸಿಕೊಡಲಾಗುವುದು. ಈ ಮೂಲಕ ವಿಶ್ವದಲ್ಲೇ ಮೊದಲ ವೈಫೈ ನಗರವಾಗಲಿದೆ ಎಂದು ಹೇಳಿದರು.


ಗಾರ್ಡನ್‌ ಸಿಟಿ:
ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಬೆಂಗಳೂರನ್ನು ಗತಕಾಲದ ವೈಭವಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಶಪತ ಮಾಡಿದ್ದೇವೆ. ಬೆಂಗಳೂರು ಹಿಂದೆ ಗಾರ್ಡನ್ ಸಿಟಿಯಾಗಿತ್ತು. ಆಧುನಿಕತೆ ಬಂದ ಮೇಲೆ ಜನಸಂಖ್ಯೆ ಜಾಸ್ತಿಯಾಗಿದೆ. ಇದರಿಂದ ಗತಕಾಲದ ವೈಭವ ಕಳೆದು ಹೋಗಿದೆ. ಹೀಗಾಗಿ ನಗರವನ್ನು ಅಭಿವೃದ್ಧಿ ಮಾಡುವ ಜೊತೆಗೆ ಗಾರ್ಡನ್‌ ಸಿಟಿ ಎಂಬ ಹೆಗ್ಗಳಿಕೆ ತರಲಾಗುವುದು. 


ನಗರದ ಅಭಿವೃದ್ಧಿ ನಮ್ಮ ಗುರಿ:
ನಮ್ಮ‌ ಸರ್ಕಾರದ ಗುರಿ ಎಂದರೆ ನಗರವನ್ನು ಅಭಿವೃದ್ದಿ ಮಾಡುವುದು. ಪಕ್ಷಾತೀತವಾಗಿ ಬೆಂಗಳೂರನ್ನು ಅಭಿವೃದ್ಧಿ ಮಾಡಲು ಕ್ರಮ ಕೈಗೊಂಡಿದ್ದೇವೆ. ಕಳೆದ ಸರಕಾರದಲ್ಲಿ ಬಿಬಿಎಂಪಿಗೆ 7 ಸಾವಿರ ಕೋಟಿ ರೂ. ನೀಡಲಾಗಿತ್ತು. 
ಈ ಬಾರಿ 8.015 ಕೋಟಿ ರೂ. ಹಣವನ್ನು ಬಿಬಿಎಂಪಿಗೆ ಮಂಜೂರು ಮಾಡಲಾಗಿದೆ. ಮುಂದಿನ 5 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹಣವನ್ನು ನಗರದ ಅಭಿವೃದ್ಧಿಗಾಗಿ ಖರ್ಚು ಮಾಡಲಿದ್ದೇವೆ‌ ಎಂದರು. 


ಜೊತೆಗೆ ನಗರದ ನಾಲ್ಕು ದಿಕ್ಕಿನಲ್ಲಿ 25 ಸಾವಿರ ಕೋಟಿ ರೂ.ನಲ್ಲಿ ಎರಡು ಎಲಿವೇಟೆಡ್‌ ಕಾರಿಡಾರ್‌ ಮಾಡಲಾಗುತ್ತಿದೆ. ಮೆಟ್ರೋ ಕೂಡ ವರ್ಷದಲ್ಲಿ 80 ಕೋಟಿ ರೂ. ಲಾಭ ಮಾಡಿದೆ. ಇನ್ನು ಆರು ತಿಂಗಳಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದ ವರೆಗಿನ ಮೆಟ್ರೋ ಎರಡನೇ ಹಂತ ಪೂರ್ಣಗೊಳ್ಳಲಿದೆ ಎಂದರು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೂಡ ಉಪಸ್ಥಿತರಿದ್ದರು.