ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಪುತ್ರ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‍ ಅವರಿಗೆ ಸೇರಿದ ರೈಸ್ ಮಿಲ್​ನಲ್ಲಿ ವನ್ಯ‌ಜೀವಿಗಳು ಪತ್ತೆಯಾಗಿವೆ. ದಾವಣಗೆರೆಯ ಬಂಬೂಬಜಾರ್ ರಸ್ತೆಯಲ್ಲಿರುವ ಕಲ್ಲೇಶ್ವರ ರೈಸ್ ಮಿಲ್​ ಮೇಲೆ ಬುಧವಾರ ಬೆಂಗಳೂರು ಸಿಸಿಬಿ ಹಾಗೂ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದ್ದರು. ಪರಿಶೀಲನೆ ವೇಳೆ 29ಕ್ಕೂ ಹೆಚ್ಚು ವನ್ಯ ಜೀವಿಗಳು ಪತ್ತೆಯಾಗಿವೆ.


COMMERCIAL BREAK
SCROLL TO CONTINUE READING

ಎಸ್‌.ಎಸ್‌.ಮಲ್ಲಿಕಾರ್ಜುನ್‌ ಒಡೆತನದ ಕಲ್ಲೇಶ್ವರ ಮಿಲ್‌ ಹಿಂಭಾಗದ ಫಾರ್ಮ್‌ ಹೌಸ್‌ ಮೇಲೆ ನಡೆದಿದ್ದ ದಾಳಿ ವೇಳೆ 7 ಚುಕ್ಕೆ ಜಿಂಕೆಗಳು, 10 ಕೃಷ್ಣಮೃಗಗಳು, 7 ಕಾಡುಹಂದಿಗಳು, 3 ಮುಂಗುಸಿಗಳು, 2 ನರಿಗಳು ಸಿಕ್ಕಿವೆ. ಅವುಗಳನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.


ಇದನ್ನೂ ಓದಿ: "ತಾಕತ್ತಿದ್ದರೆ ಭೂತಾನ್‌ ಅಡಿಕೆ ಆಮದನ್ನು ವಿರೋಧಿಸುವ ಧೈರ್ಯ ತೋರಲಿ": ಬ್ರಿಜೇಶ್‌ ಕಾಳಪ್ಪ 


ಹೆಬ್ಬಾಳದಲ್ಲಿ ಡಿ.18ರಂದು ಜಿಂಕೆ ಚರ್ಮ, ಕೊಂಬು, ಮೂಳೆ ಮಾರಾಟ ಮಾಡಲು ಯತ್ನಿಸಿದ್ದ ಸೆಂಥಿಲ್‌ ಎಂಬಾತನನ್ನು ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದರು. ದಾವಣಗೆರೆಯಿಂದ ಚರ್ಮ ತಂದಿರುವುದಾಗಿ ಆತ ಬಾಯ್ಬಿಟ್ಟಿದ್ದ. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಜೀವಂತ ವನ್ಯಪ್ರಾಣಿಗಳು ಸಿಕ್ಕಿವೆ ಎಂದು ಹೇಳಲಾಗಿದೆ.   


ಸದ್ಯ ಸೆಂಥಿಲ್‌ನನ್ನು ಸಿಸಿಬಿ ಪೊಲೀಸರು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಫಾರ್ಮ್‌ನಲ್ಲಿದ್ದ ಕಾರ್ಮಿಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಮುಂದಿನ ಕ್ರಮಕ್ಕೆ ಪ್ರಕರಣವನ್ನು ಸ್ಥಳೀಯ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು. ಶೀಘ್ರವೇ ವಿಶೇಷ ತನಿಖಾಧಿಕಾರಿ ನೇಮಿಸಿ ಪ್ರಕರಣದ ತನಿಖೆ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: Congress MLAs: ನಾಯಕರ ವಿರುದ್ಧವೇ ಅಸಮಾಧಾನಗೊಂಡ ಕಾಂಗ್ರೆಸ್ ಶಾಸಕರು: ಭಿನ್ನಮತ ಶಮನವೇ ದೊಡ್ಡ ಸವಾಲು


ವನ್ಯಜೀವಿಗಳನ್ನು ಸಾಕಲು ಪರವಾನಗಿ


ಪರವಾನಗಿ ಪಡೆದೇ ನಾವು ವನ್ಯಜೀವಿಗಳನ್ನು ಸಾಕುತ್ತಿದ್ದೇವು ಎಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಆಪ್ತರು ಮಾಹಿತಿ ನೀಡಿದ್ದಾರೆ. 2000ರಿಂದಲೇ ನಮ್ಮ ಫಾರ್ಮ್‌ ಹೌಸ್‌ನಲ್ಲಿ ಜಿಂಕೆ ಸಾಕುತ್ತಿದ್ದೇವು. ಇವುಗಳನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಕಾನೂನು ಬಾಹಿರವಾಗಿ ಪ್ರಾಣಿಗಳ ಚರ್ಮ, ಕೊಂಬು ಮಾರಾಟ ಮಾಡಿದ್ದಾನೆ. ಪರವಾನಗಿ ಪಡೆದು ಸಾಕುತ್ತಿದ್ದ ನಾಲ್ಕೈದು ಜಿಂಕೆಗಳು ಮರಿ ಹಾಕಿದ್ದರಿಂದ ಇವುಗಳ ಸಂಖ್ಯೆ ಈಗ ಹೆಚ್ಚಾಗಿದೆ. ಇತ್ತಿಚೆಗೆ ಜನಿಸಿದ ಮರಿಗಳ ಸಾಕುವ ಪರವಾನಗಿ ಪಡೆಯಬೇಕಿದೆ. ಕಾನೂನು ಪ್ರಕಾರವೇ ನಾವು ಸಾಕುತ್ತಿದ್ದೇವೆ ಎಂದು ಎಸ್‌.ಎಸ್‌. ಮಲ್ಲಿಕಾರ್ಜುನ್‌ ಆಪ್ತರಿಂದ ಮಾಹಿತಿ ದೊರೆತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.