ಹಾಸನ: ಆನೆ ಗಣತಿಯಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ಜಿಲ್ಲೆಯಲ್ಲಿ 64 ಕಾಡಾನೆಗಳ ಸಂತತಿ ಹೆಚ್ಚಳವಾಗಿದೆ. ಆದರೆ ಜಿಲ್ಲೆಯಲ್ಲಿ ಕಳೆದ ಒಂದೇ ತಿಂಗಳಲ್ಲಿ 4 ಹಾಗೂ 10 ವರ್ಷದಲ್ಲಿ ಒಟ್ಟು 38 ಕಾಡಾನೆಗಳು ಸಾವನ್ನಪ್ಪಿದ್ದು, ಬೇಸರ ಮೂಡಿಸಿದೆ.


COMMERCIAL BREAK
SCROLL TO CONTINUE READING

ಗಜಪಡೆ ಹಾವಳಿಯಿಂದ ಅಮಾಯಕರ ಪ್ರಾಣ ಹಾನಿಯಾಗುತ್ತಿದ್ದರೆ, ಅಪಾರ ಪ್ರಮಾಣದ ಬೆಳೆ ನಾಶವಾಗಿ ರೈತರು ಕಂಗಾಲಾಗಿ ಹೋಗಿದ್ದಾರೆ. ಮಡಿಕೇರಿ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಡಾನೆಗಳು ಜಿಲ್ಲೆಗೆ ಆಗಮಿಸುತ್ತಿವೆ. ಇದರ ಜೊತೆಗೆ ವರ್ಷದಿಂದ ವರ್ಷಕ್ಕೆ ಕಾಡಾನೆಗಳ ಸಂತತಿಯೂ ಹೆಚ್ಚುತ್ತಲೇ ಇದೆ. ಆದರೆ ಈ ನಡುವೆ ಅನೇಕ ಕಾರಣಗಳಿಂದ ಕಾಡಾನೆಗಳು ಕೂಡ ಸಾವನ್ನಪ್ಪುತ್ತಿರುವುದು ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.


ಸಕಲೇಶಪುರ, ಆಲೂರು ತಾಲೂಕುಗಳಿಗೆ ಸೀಮಿತವಾಗಿದ್ದ ಕಾಡಾನೆ ಸಮಸ್ಯೆ ಇದೀಗ ಬೇಲೂರು ತಾಲೂಕಿಗೂ ವ್ಯಾಪಿಸಿದೆ. ಕಳೆದ 20 ವರ್ಷಗಳಲ್ಲಿ 78 ಮಂದಿ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರೆ, ಕೋಟ್ಯಂತರ ರೂ. ಮೌಲ್ಯದ ಬೆಳೆ ನಾಶವಾಗಿದೆ. ರಾಜ್ಯ ಸರ್ಕಾರ ನೀಡುತ್ತಿರುವ ಪರಿಹಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗುತ್ತಿದೆ. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಬಂದ್, ಪ್ರತಿಭಟನೆ, ರಸ್ತೆ ತಡೆ, ಸಚಿವರಿಗೆ ಘೇರಾವ್ ಹಾಕಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಇದುವರೆಗೂ ಆಡಳಿತ ನಡೆಸಿದ ಯಾವುದೇ ಸರ್ಕಾರಗಳು ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ಸಂಪೂರ್ಣ ವಿಫಲವಾಗಿವೆ. ಕಾಡಾನೆ ಕಾಟದಿಂದ ಮಲೆನಾಡು ಭಾಗದ ಜನ ಹೈರಾಣಾಗಿ ಹೋಗಿದ್ದಾರೆ. ಈ ಎಲ್ಲಾ ಸಮಸ್ಯೆಗಳ ನಡುವೆ ಕಾಡಾನೆ ಮರಿಗಳು, ಗರ್ಭಿಣಿ ಆನೆಗಳು ಸಾವನ್ನಪ್ಪುತ್ತಿರುವುದು ಜನರಲ್ಲಿ ಸಹಜವಾಗಿಯೇ ಮರುಕ ತರಿಸುತ್ತಿದೆ.


ಇದನ್ನೂ ಓದಿ: Gruha Lakshmi: ರಾಜ್ಯದ ಗೃಹಿಣಿಯರಿಗೆ ಗುಡ್‌ ನ್ಯೂಸ್..ಈ ದಿನದಂದು ನಿಮ್ಮ ಖಾತೆಗೆ ಜಮಾ ಆಗಲಿದೆ 2000!


ಒಂದೇ ತಿಂಗಳಲ್ಲಿ 4 ಕಾಡಾನೆ ಸಾವು: ಒಂದೆಡೆ ಮಾನವನ ಪ್ರಾಣ ಹಾನಿಯಾದರೆ, ಇನ್ನೊಂದೆಡೆ ಕಳೆದ 10 ವರ್ಷದಲ್ಲಿ 38 ಕಾಡಾನೆಗಳು ಸಾವನ್ನಪ್ಪಿವೆ. ಕಳೆದ 1 ತಿಂಗಳಲ್ಲಿ ಮರಿಯಾನೆಗಳು ಸೇರಿ 4 ಕಾಡಾನೆಗಳು ಮೃತಪಟ್ಟಿವೆ. ಜು.1ರಂದು ಸಕಲೇಶಪುರ ತಾಲೂಕಿನ ಮಠಸಾಗರ ಬಳಿ ಕಾಂತಿ ಹೆಸರಿನ ಕಾಡಾನೆ ಅನಾರೋಗ್ಯದಿಂದ ಸಾವನ್ನಪ್ಪಿತ್ತು. ಈ ಆನೆಗೆ ರೆಡಿಯೋ ಕಾಲರ್ ಅಳವಡಿಸಿದ ನಂತರ ಕಾಡಾನೆ ಹಿಂಡಿನೊಂದಿಗೆ ಸೇರದೆ ಒಂಟಿಯಾಗಿದ್ದು, ತೀವ್ರ ಅನಾರೋಗ್ಯದಿಂದ ಸಾವನ್ನಪ್ಪಿತ್ತು. ಜು.28ರಂದು ಕೆಂಪುಹೊಳೆಯಲ್ಲಿ ಆಗತಾನೆ ಜನಿಸಿದ್ದ ಕಾಡಾನೆ ಶವ ತೇಲಿ ಬಂದಿತ್ತು. ಇದಾದ ನಂತರ ಜು.31ರಂದು ಸಕಲೇಶಪುರ ತಾಲೂಕಿನ ಉದೇವಾರ ಗ್ರಾಮದಲ್ಲಿ ಗರ್ಭಿಣಿ ಕಾಡಾನೆಯೊಂದು ಅಸುನೀಗಿತ್ತು. ಹೊಟ್ಟೆಯಲ್ಲಿ ಮರಿ ಸಾವನ್ನಪ್ಪಿದ್ದರಿಂದ ಗರ್ಭಿಣಿ ಕಾಡಾನೆ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಆ.5 ರಂದು ತಾಯಿಯಿಂದ ಬೇರ್ಪಟ್ಟಿದ್ದ ಹೆಣ್ಣು ಮರಿಯಾನೆ ಬೇಲೂರು ತಾಲೂಕಿನ ಮಲಸವಾರ ಬಳಿಯ ಕಾಫಿ ತೋಟದಲ್ಲಿ ಮೃತಪಟ್ಟಿತ್ತು. ಒಂದರ ಹಿಂದೆ ಒಂದು ಕಾಡಾನೆಗಳು ಸಾವಿಗೀಡಾಗುತ್ತಿರುವುದು ಪರಿಸರ ಪ್ರೇಮಿಗಳಿಗೆ ಬೇಸರ ವ್ಯಕ್ತಪಡಿಸಿದ್ದಾರೆ.


ಶಾಶ್ವತ ಪರಿಹಾರಕ್ಕಿಲ್ಲ ಕ್ರಮ: ಕಾಡಾನೆ ಉಪಟಳಕ್ಕೆ ಸರ್ಕಾರ ಶಾಶ್ವತ ಪರಿಹಾರ ಕಂಡುಹಿಡಿಯುವ ಬದಲು, ತಾತ್ಕಾಲಿಕ ತಡೆಯೊಡ್ಡುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಆದರೆ ಇದರಿಂದ ಸ್ಥಳೀಯರಿಗೆ ಅನುಕೂಲವಾಗುತ್ತಿದೆಯೇ ಹೊರತು ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವಾಗಿದೆ. ಆದ್ದರಿಂದ ಈಗಾಗಲೇ ಪ್ರಗತಿಯಲ್ಲಿರುವ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಹಾಗೂ ಕಾಡಾನೆಗಳನ್ನು ಹಿಡಿದು ಸಂಪೂರ್ಣ ಸ್ಥಳಾಂತರ ಮಾಡಬೇಕು, ಇಲ್ಲವಾದಲ್ಲಿ ಆನೆ ಕಾರಿಡಾರ್ ನಿರ್ಮಾಣ ಮಾಡಬೇಕು ಎಂಬುದು ಮಲೆನಾಡು ಭಾಗದ ಜನರ ಒತ್ತಾಯವಾಗಿದೆ.


ಪ್ರಯೋಜನವಿಲ್ಲದ ಟಾಸ್ಕ್‍ಫೋರ್ಸ್: ಕಾಡಾನೆಗಳಿಂದ ಜನರಿಗೆ, ಜನರಿಂದ ಆನೆಗಳಿಗೆ ತೊಂದರೆಯಾಗುವುದನ್ನು ತಪ್ಪಿಸಲು ಕಳೆದ ಡಿಸೆಂಬರ್ ತಿಂಗಳಿನಿಂದ ಜಿಲ್ಲಾ ಕಾಡಾನೆ ಕಾರ್ಯಪಡೆ ರಚಿಸಲಾಗಿದೆ. ಆದರೆ ಈ ಟಾಸ್ಕ್‍ಫೋರ್ಸ್ ಜನರ ಬಗ್ಗೆ ಗಮನ ಹರಿಸುತ್ತಿಲ್ಲ, ಕಾಡಾನೆಗಳ ಮೇಲೂ ನಿಗಾ ಇಡುತ್ತಿಲ್ಲ. ಟಾಸ್ಕ್‍ಫೋರ್ಸ್‍ನಲ್ಲಿ ಒಬ್ಬ ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, 4 ಮಂದಿ ಉಪವಲಯ ಅರಣ್ಯಾಧಿಕಾರಿ, 8 ಜನ ಅರಣ್ಯ ರಕ್ಷಕರು, 32 ಜನ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದರ ಕೇಂದ್ರ ಸಕಲೇಶಪುರದಲ್ಲಿದ್ದು, ಕಂಟ್ರೋಲ್ ರೂಂ ಸಹ ತೆರೆಯಲಾಗಿದೆ.


ಇದನ್ನೂ ಓದಿ: Indira Canteen: ಗೃಹ ಸಚಿವರ ಕ್ಷೇತ್ರದಲ್ಲೇ ಕಾಂಗ್ರೆಸ್ ಕನಸಿನ ಯೋಜನೆಗೆ ಬೀಗ


ಇದಲ್ಲದೆ ಆನೆ ಹಿಮ್ಮೆಟ್ಟಿಸುವ ಕಾರ್ಯಪಡೆ ರಚಿಸಿದ್ದು, ಇದರಲ್ಲಿ 88 ಜನರಿದ್ದು 10 ತಂಡ ಸಕಲೇಶಪುರದಲ್ಲಿ, 5 ತಂಡ ಯಸಳೂರು, ಆಲೂರು ಬೇಲೂರಿನಲ್ಲಿ ತಲಾ 2 ತಂಡಗಳು ಕಾರ್ಯನಿರ್ವಹಿಸುತ್ತಿವೆ. ಇದರ ಜೊತೆಗೆ ರ‍್ಯಾಪಿಡ್ ರೆಸ್ಪಾನ್ಸ್ ಟೀಂ ರಚಿಸಲಾಗಿದ್ದು, ಇದದಲ್ಲಿ 20 ಜನರಿದ್ದು ಆಲೂರು, ಸಕಲೇಶಪುರ ತಲಾ 2 ತಂಡ, ಬೇಲೂರು ತಾಲೂಕಿನಲ್ಲಿ 1 ತಂಡ ಕಾರ್ಯನಿರ್ವಹಿಸುತ್ತಿದೆ. ಇಷ್ಟು ಜನರಿದ್ದರೂ ಕಾಡಾನೆಗಳ ರಕ್ಷಣೆಯೂ ಆಗುತ್ತಿಲ್ಲ. ಇತ್ತ ಜನರಿಗೂ ಯಾವುದೇ ರೀತಿಯಲ್ಲೂ ಪ್ರಯೋಜನವಾಗುತ್ತಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.