ಕುಮಾರಸ್ವಾಮಿ ಹೆಸರಿನ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದ ಯಡಿಯೂರಪ್ಪ !
ಬೆಂಗಳೂರು: ವಿಶ್ವಾಸಮತ ಮತ್ತು ಸ್ಪೀಕರ್ ಆಯ್ಕೆ ನಿಮಿತ್ತ ಆರಂಭವಾದ ಇಂದಿನ ಕಲಾಪ ಹಲವಾರು ಹಾಸ್ಯ ಪ್ರಸಂಗಗಳಿಗೆ ಕಾರಣವಾಯಿತು.
ಯಡಿಯೂರಪ್ಪನವರು ಇಂದು ಭಾಷಣದವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಎಂದು ಹೇಳುವ ಬದಲು ಬಾಯಿತಪ್ಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದಾಗ ಸದನವಿಡಿ ನಗೆಗಡಲಲ್ಲಿ ತೇಲಿತು .ಆಗ ತಕ್ಷಣ ಸರಿಪಡಿಸಿಕೊಂಡು ಮಾತನಾಡಿದ ಯಡಿಯೂರಪ್ಪನವರು "ಕ್ಷಮೆಯಿರಲಿ ಈಗಲೂ ಸಿದ್ದರಾಮಯ್ಯ ಹೆಸರೇ ಬರುತ್ತಿದೆ. ನಿಮ್ಮ ಪಕ್ಷದವರು ನಿಮ್ಮನ್ನು ಮರೆಯಬಹುದು. ಆದರೆ ನನಗೆ ಸ್ವಲ್ಪ ಸಮಯಬೇಕು. ಕುಮಾರಸ್ವಾಮಿ ಹೆಸರನ್ನು ಪದೇ ಪದೇ ಹೇಳಿ ಅಭ್ಯಾಸ ಮಾಡಿಕೊಳ್ಳುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಪರ ಬ್ಯಾಟಿಂಗ್ ಬೀಸಿದ ಯಡಿಯೂರಪ್ಪ" ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಸೋನಿಯಾ, ರಾಹುಲ್ ಗಾಂಧಿಯವರಿಗಿದ್ದ ಗೌರವ, ಸಿದ್ದರಾಮಯ್ಯನವರಿಗಿಲ್ಲ. ಕಾರ್ಯಕ್ರಮದ ದಿನ ಸಿದ್ದರಾಮಯ್ಯನವರು ಮೂಲೆಗುಂಪಾಗಿದ್ದರು ಎಂದರು.
ಇನ್ನು ಮುಂದುವರೆದು "ಸಿದ್ದರಾಮಯ್ಯ ಅವರನ್ನು ಹೊಗಳಿ ನನಗೇನು ಆಗಬೇಕಿಲ್ಲ. ಸಿದ್ದರಾಮಯ್ಯನವರಿಗೆ ಯಾವುದೇ ಕಾರಣದಿಂದ ನಿಮಗೆ ಬಹುಮತ ಬರದೆ ಇರಬಹುದು. ಆದರೆ ಕಾಂಗ್ರೆಸ್ ಹೈಕಮಾಂಡ್ ನಿಮ್ಮನ್ನು ಹೇಗೆ ನಡೆಸಿಕೊಂಡಿದೆ. ನಾಡಿನ ಜನತೆಗೆ ದ್ರೋಹ ಮಾಡಿದ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲು ಹೊರಟಿದ್ದೀರಿ. ನಮ್ಮ ಹೋರಾಟ ಕಾಂಗ್ರೆಸಿನ ವಿರುದ್ಧ ಅಲ್ಲ, ಅಪ್ಪ ಮಕ್ಕಳ ವಿರುದ್ಧ " ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ದ ಯಡಿಯೂರಪ್ಪ ಚಾಟಿ ಬಿಸಿದರು.