ಬೆಂಗಳೂರು: ದೌರ್ಜನ್ಯಕ್ಕೊಳಗಾಗಿರುವ ಮಹಿಳೆಯರಿಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮಾಲೋಚನೆ ಸೇರಿದಂತೆ ಅಗತ್ಯ ನೆರವು ಒದಗಿಸುತ್ತಿರುವ ಸಾಂತ್ವನ ಯೋಜನೆಯನ್ನು ಮುಂದುವರೆಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಸೂಚಿಸಿದರು.


COMMERCIAL BREAK
SCROLL TO CONTINUE READING

ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ಒನ್ ಸ್ಟಾಪ್ ಕೇಂದ್ರಗಳನ್ನು ಪ್ರಾರಂಭಿಸಿರುವುದರಿಂದ ಸಾಂತ್ವನ ಯೋಜನೆಯನ್ನು ಸ್ಥಗಿತಗೊಳಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಆದರೆ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸಾಂತ್ವನ ಯೋಜನೆ ನೆರವು ನೀಡುತ್ತಿರುವುದರಿಂದ ಈ ಯೋಜನೆಯನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.


ಇದೇ ವೇಳೆ ಹಿಂದೆ ಸರ್ಕಾರದಲ್ಲಿ ಭಾರೀ ಜನಮನ್ನಣೆಗೆ ಪಾತ್ರವಾಗಿದ್ದ ಭಾಗ್ಯಲಕ್ಷ್ಮಿ ಯೋಜನೆಯನ್ನು ಅಂಚೆ ಇಲಾಖೆ ಜೊತೆ ಒಪ್ಪಂದ ಮಾಡಿಕೊಂಡು ಸುಕನ್ಯಾ ಸಮೃದ್ಧಿ ಯೋಜನೆಯಡಿ ಅನುಷ್ಠಾನಗೊಳಿಸುವಂತೆ ಸೂಚಿಸಲಾಗಿದೆ ಎಂದರು.


ಕೋವಿಡ್ 19 (Covid-19) ಹಿನ್ನೆಲೆಯಲ್ಲಿ ಉಂಟಾದ ಲಾಕ್‍ಡೌನ್ (Lockdown) ಸಂದರ್ಭದಲ್ಲಿ ಇಲಾಖೆಯು ಆಹಾರ ಧಾನ್ಯಗಳನ್ನು ಪ್ರತಿ ಫಲಾನುಭವಿಗಳ ಮನೆ ಬಾಗಿಲಿಗೆ ವಿತರಿಸಿದೆ. ಇದೇ ಅವಧಿಯಲ್ಲಿ 278 ಬಾಲ್ಯ ವಿವಾಹಗಳನ್ನು ತಡೆಹಿಡಿಯಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಮಾಸ್ಕ್ ಗಳನ್ನು ಹೊಲಿದು ವಿತರಿಸಿದ್ದಾರೆ ಎಂದು  ಸಚಿವರಾದ ಶಶಿಕಲಾ ಜೊಲ್ಲೆ  ಮಾಹಿತಿ ನೀಡಿದರು.  


ಸಭೆಯಲ್ಲಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ನಿರ್ದೇಶಕ ಕೆ.ಎ.ದಯಾನಂದ್ , ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಉಪಸ್ಥಿತರಿದ್ದರು.