ಯೋಗ ದಿನಕ್ಕೆ ಅರಮನೆ ನಗರಿ ಸರ್ವಸಜ್ಜು.. ಪಿಎಂ ಆಗಮನ ಹಿನ್ನೆಲೆ ಮೈಸೂರಲ್ಲಿ ಹೈ ಅಲರ್ಟ್
Yoga Day 2022: ಸಾಂಸ್ಕೃತಿಕ ನಗರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದು, ಜೂನ್ 20-21ರಂದು ಮೈಸೂರು ಪ್ರವಾಸ ಕೈಗೊಂಡಿದ್ದಾರೆ. ಮೈಸೂರು ಅರಮನೆ ಆವರಣದಲ್ಲಿ ಹೆಚ್ಚಿನ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಮೈಸೂರು: ವಿಶ್ವ ಯೋಗ ದಿನಾಚರಣೆಗೆ ಅರಮನೆ ನಗರಿ ಮೈಸೂರು ಸಕಲ ರೀತಿಯಲ್ಲೂ ಸಜ್ಜಾಗಿದೆ. ವಿಶ್ವ ವಿಖ್ಯಾತ ಅರಮನೆ ಆವರಣದಲ್ಲಿ ಯೋಗ ದಿನಾಚರಣೆ ಹಿನ್ನೆಲೆ ಮೈಸೂರು ಪ್ಯಾಲೇಸ್‌ನ ಪೂರ್ವ ದಿಕ್ಕಿನಲ್ಲಿ ಭವ್ಯ ವೇದಿಕೆ ನಿರ್ಮಾಣ ಮಾಡಲಾಗಿದೆ. ಜಯ ಮಾರ್ತಾಂಡ ದ್ವಾರದ ಬಳಿ ಭವ್ಯ ವೇದಿಕೆ ನಿರ್ಮಾಣವಾಗಿದ್ದು, ಅರಮನೆ ಆವರಣದ ಬಹುತೇಕ ಕಡೆ LED ಪರದೆಗಳ ಅಳವಡಿಕೆ ಮಾಡಲಾಗಿದೆ. ಅರಮನೆ ಬಳಿ ಸಾರ್ವಜನಿಕರಿಗೆ ಮೊಬೈಲ್ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಮೈಸೂರು ಅರಮನೆ ಆವರಣದಲ್ಲಿ ಹೆಚ್ಚಿನ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈ ಬಗ್ಗೆ ಸಚಿವ ಎಸ್.ಟಿ.ಸೋಮಶೇಖರ್ ಸಿದ್ಧತೆಗಳನ್ನ ಪರಿಶೀಲಿಸಿದ್ದಾರೆ.
ಇದನ್ನೂ ಓದಿ: "ಕರ್ನಾಟಕ ರಾಜ್ಯಕ್ಕೆ ಹೋಗುತ್ತಿರುವೆ": ಕನ್ನಡದಲ್ಲಿ ಪ್ರಧಾನಿ ಮೋದಿ ಟ್ವೀಟ್
ಮೈಸೂರಲ್ಲಿ ಹೈ ಅಲರ್ಟ್:
ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಧಾನಿ ಆಗಮಿಸಲಿದ್ದು, ಮೋದಿ ವಾಸ್ತವ್ಯಕ್ಕೆ ಸ್ಟಾರ್ ಹೋಟೆಲ್ ಸಜ್ಜಾಗಿದೆ. ಶನಿವಾರದಿಂದ ರಾಡಿಸನ್ ಬ್ಲೂ ಪ್ಲಾಜಾ ಹೋಟೆಲ್‌ನ ಬುಕ್ಕಿಂಗ್ ಸ್ಟಾಪ್ ಮಾಡಲಾಗಿದ್ದು, ಇಡೀ ಹೋಟೆಲ್ ಅನ್ನು ಭದ್ರತಾ ಪಡೆ ಖಾಲಿ ಮಾಡಿಸುತ್ತಿದೆ. ಹೋಟೆಲ್‌ನ ಇತರೆ ಗ್ರಾಹಕರಿಗೆ ಬೇರೆ ಹೋಟೆಲ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಇನ್ನು ಈ ಬಾರಿ ಭದ್ರತಾ ಪಡೆ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದು, ಇಡೀ ಹೋಟೆಲ್ ಅನ್ನು SPG ಸಿಬ್ಬಂದಿ ಆವರಿಸಿದ್ದಾರೆ. ರಾಡಿಸನ್ ಬ್ಲೂ ಬಳಿ ಡಾಗ್ ಸ್ಕ್ವಾಡ್ & ಬಾಂಬ್ ಸ್ಕ್ವಾಡ್ ಬಂದಿಳಿದಿದ್ದು, 6 ತಂಡಗಳ 50 ಸಿಬ್ಬಂದಿಯಿಂದ ಇಡೀ ಕಟ್ಟಡದ ಹೊರ ಭಾಗದಲ್ಲಿ ತಪಾಸಣೆ ನಡೆಯುತ್ತಿದೆ. ಅಲ್ಲದೇ, ಹೋಟೆಲ್ ಮುಂಭಾಗದ ರಸ್ತೆಗಳ ಸಿಂಗಾರ ಕಾರ್ಯ ನಡೆಯುತ್ತಿದ್ದು, ರಸ್ತೆಯ ಇಕ್ಕೆಲಗಳನ್ನ ಸ್ವಚ್ಛ ಮಾಡುವಲ್ಲಿ ಪೌರಕಾರ್ಮಿಕರು ನಿರತರಾಗಿದ್ದಾರೆ.
ಪರಿಸರ ಪ್ರೇಮಿಗಳ ಬೇಸರ:
ಸಾಂಸ್ಕೃತಿಕ ನಗರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದು, ಜೂನ್ 20-21ರಂದು ಮೈಸೂರು ಪ್ರವಾಸ ಕೈಗೊಂಡಿದ್ದಾರೆ. ಪ್ರಧಾನಿ ಮೋದಿ ಸಾಗಲಿರುವ ಮಾರ್ಗದಲ್ಲಿ ಬಿಗಿ ಭದ್ರತೆ ಮಾಡಲಾಗುತ್ತಿದ್ದು, ಮೈಸೂರಿನ ಅಂದ ಹೆಚ್ಚಿಸಲು ಸ್ಥಳೀಯ ಆಡಳಿತ ಮುಂದಾಗಿದೆ. ಮೈಸೂರಿನಲ್ಲಿ ಗುಂಡಿ ಬಿದ್ದಿದ್ದ ರಸ್ತೆಗಳಿಗೆ ಡಾಂಬರೀಕರಣ, ಡಿವೈಡರ್‌ಗೆ ಸುಣ್ಣ-ಬಣ್ಣ ಬಳಿಯಲಾಗಿದ್ದು, ಮೋದಿ ಸ್ವಾಗತಿಸುವ ಭರದಲ್ಲಿ ಮರಗಳ ಮಾರಣಹೋಮ ನಡೆದಿದೆ ಎಂಬ ಆರೋಪವು ಕೇಳಿ ಬರುತ್ತಿದೆ. ಸ್ವಚ್ಛತೆ ನೆಪದಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ರಸ್ತೆ ಬದಿಯಲ್ಲಿ ಬೆಳೆದು ನಿಂತಿದ್ದ ಮರಗಳಿಗೆ ಕೊಡಲಿಯೇಟು ಬಿದ್ದಿದೆ ಎನ್ನಲಾಗ್ತಿದೆ. ಬೃಹದಾಕಾರದ ಮರಗಳ ಹನನ ತಿಳಿದು ಪರಿಸರ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಅರಮನೆಗೆ ಪ್ರವಾಸಿಗರ ಪ್ರವೇಶ ನಿರ್ಬಂಧ:
ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಮೈಸೂರು ಅಂಬಾವಿಲಾಸ ಅರಮನೆಗೆ 3 ದಿನ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಜೂನ್ 19 ರಿಂದ ಜೂನ್ 21ರವರೆಗೆ ಅರಮನೆಗೆ ನಿರ್ಬಂಧ ವಿಧಿಸಿ ಅರಮನೆ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ. ಜೂನ್ 21ರಂದು ಅರಮನೆ ಆವರಣದಲ್ಲಿ ವಿಶ್ವ ಯೋಗ ಕಾರ್ಯಕ್ರಮ ನಡೆಯಲಿದ್ದು, ಅರಮನೆಯಲ್ಲಿ ಕಾಮಗಾರಿ ಹಿನ್ನೆಲೆ 3 ದಿನ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇನ್ನ ಜೂನ್ 21ರ ಮಧ್ಯಾಹ್ನ 12 ಗಂಟೆಯವರೆಗೂ ಅರಮನೆಗೆ ನಿರ್ಬಂಧ ಹೇರಲಾಗಿದ್ದು, ಇಂದಿನಿಂದ ಜೂನ್ 22ರವರೆಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನೂ ರದ್ದು ಮಾಡಲಾಗಿದೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮನ ಹಿನ್ನೆಲೆ, ಈ ರಸ್ತೆಗಳಲ್ಲಿ ಸಚಾರ ನಿಷೇಧ
ವಿಶ್ವಯೋಗ ದಿನಾಚರಣೆಯಲ್ಲಿ ಪಿಎಂ ಭಾಗಿ:
ಜೂನ್ 21 ರಂದು ವಿಶ್ವಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ಭದ್ರತಾ ಕಾರ್ಯಾಚರಣೆ ಚುರುಕುಗೊಂಡಿದ್ದು, ಪ್ರಧಾನಿ ಮೋದಿ ಸಂಚರಿಸುವ ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಲಾಗುತ್ತಿದೆ. ಮರದ ಪೋಲ್‌ಗಳ ಮೂಲಕ ನಗರದ 100 ಅಡಿ ರಸ್ತೆ, ಏರ್ ಪೋರ್ಟ್ ರಸ್ತೆ, ಅರಮನೆ ಮುಂಭಾಗ, ಚಾಮುಂಡಿ ಬೆಟ್ಟದ ರಸ್ತೆಗಳಲ್ಲಿ ಸುಮಾರು 30 ಕಿ.ಮೀ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತ್ತಿದೆ. ಪ್ರಧಾನಿ ಮೋದಿ ಸಂಚರಿಸುವ ವೇಳೆ ಈ ರಸ್ತೆಗಳು ಸಂಪೂರ್ಣ ಬಂದ್ ಆಗಲಿವೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.