'ಆಯುಷ್ಮಾನ್‌ ಭಾರತ' ಯೋಜನೆ ಘೋಷಿಸಿದ ಪ್ರಧಾನಿ ಮೋದಿ

ಈ ಯೋಜನೆಯಡಿಯಲ್ಲಿ ಎಲ್ಲಾ ಆಸ್ಪತ್ರೆಗಳಲ್ಲಿ ರೂ. 5 ಲಕ್ಷದವರೆಗೆ ಉಚಿತ ಚಿಕಿತ್ಸೆ ದೊರೆಯಲಿದೆ. 

Last Updated : Aug 15, 2018, 09:26 AM IST
'ಆಯುಷ್ಮಾನ್‌ ಭಾರತ' ಯೋಜನೆ ಘೋಷಿಸಿದ ಪ್ರಧಾನಿ ಮೋದಿ title=

ನವದೆಹಲಿ: ಭಾರತವು 72ನೇ ಸ್ವಾತಂತ್ರ್ಯ ದಿನ ಆಚರಿಸುತ್ತಿದ್ದು, ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ, ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ವಾಕಾಂಕ್ಷೆಯ ಹತ್ತು ಕೋಟಿ ಕುಟುಂಬಗಳಿಗೆ ವಿಮಾ ಯೋಜನೆ ಕಲ್ಪಿಸುವ 'ಆಯುಷ್ಮಾನ್‌ ಭಾರತ' ಯೋಜನೆಯನ್ನು ಘೋಶಿಸಿದರು. ಪಂಡಿತ್‌ ದೀನ್‌ ದಯಾಳ್‌ ಅವರ ಹುಟ್ಟು ಹಬ್ಬದ ಪ್ರಯುಕ್ತ ಸೆಪ್ಟೆಂಬರ್ 25ರಂದು ಜನ ಆರೋಗ್ಯ ಯೋಜನೆ ಜಾರಿಯಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಏನಿದು 'ಆಯುಷ್ಮಾನ್‌ ಭಾರತ' ಯೋಜನೆ:
ಇದು ಪ್ರಧಾನಿ ನರೇಂದ್ರ ಮೋದಿ ಅವರ ಮಹಾತ್ವಾಕಾಂಕ್ಷೆಯ ಆರೋಗ್ಯ ವಿಮೆ ಯೋಜನೆಯಾಗಿದೆ. 10 ಕೋಟಿ ಕುಟುಂಬಕ್ಕೆ ಅನುಕೂಲವಾಗಲಿರುವ ಈ ಯೋಜನೆಯಲ್ಲಿ ಪ್ರತಿ ಕುಟುಂಬ ವಾರ್ಷಿಕವಾಗಿ ರೂ. 5 ಲಕ್ಷ ಅರೋಗ್ಯ ವಿಮೆ ಪಡೆಯಲಿದೆ. 

ದೇಶಾದ್ಯಂತ ಈ ಯೋಜನೆ ಅನ್ವಯವಾಗಲಿದ್ದು, 11 ರಾಜ್ಯಗಳ 70-80 ಜಿಲ್ಲೆಗಳಲ್ಲಿ ಯೋಜನೆಯ ಸೇವೆಗಳು ಲಭ್ಯವಾಗಲಿವೆ. ಯೋಜನೆಯಲ್ಲಿ 100 ಆಸ್ಪತ್ರೆಗಳಿದ್ದು, ಇದರಲ್ಲಿ ಬಹುತೇಕ ಆಸ್ಪತ್ರೆಗಳು ಸರ್ಕಾರಿ ವಲಯದ್ದಾಗಿರುತ್ತವೆ. ಈ ಯೋಜನೆಯಡಿಯಲ್ಲಿ ಯಾವುದೇ ಸರ್ಕಾರಿ ಅಥವಾ ಸರ್ಕಾರದಿಂದ ನೊಂದಾಯಿಸಲ್ಪಟ್ಟ ಖಾಸಗಿ ಆಸ್ಪತ್ರೆಗಳಲ್ಲಿ ರೂ. 5 ಲಕ್ಷದವರೆಗೆ ಉಚಿತ ಚಿಕಿತ್ಸೆ ದೊರೆಯಲಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಸ್ವಾಸ್ಥ್ಯ ವಿಮೆ ಯೋಜನೆ ಮತ್ತು ಹಿರಿಯ ನಾಗರಿಕರ ಆರೋಗ್ಯ ವಿಮೆ ಯೋಜನೆಗಳನ್ನೂ ವಿಲೀನಗೊಳಿಸಲಾಗುತ್ತದೆ.

ಈ ಯೋಜನೆಯಿಂದ ಯಾರೊಬ್ಬರೂ ಹೊರಗುಳಿಯಬಾರದು ಎಂದು ಕುಟುಂಬದ ಗಾತ್ರ ಮತ್ತು ವಯಸ್ಸಿಗೆ ಯಾವುದೇ ಮಿತಿ ಹೇರಿಲ್ಲ . ಈ ಯೋಜನೆಯಡಿ ಆಸ್ಪತ್ರೆ ಸೇರುವ ಮುನ್ನ ಮತ್ತು ಆನಂತರ ವೆಚ್ಚಗಳನ್ನೂ ಸಹ ಭರಿಸಲಾಗುವುದು. ವಿಮೆ ಪಡೆದ ದಿನದಿಂದಲೇ ಎಲ್ಲಾ ಪೂರ್ವನಿರ್ಧರಿತ ಕಾಯಿಲೆಗಳಿಗೂ ಚಿಕಿತ್ಸೆ ಪಡೆಯಬಹುದಾಗಿದೆ. ಫಲಾನುಭವಿಗಳಿಗೆ ಆಸ್ಪತ್ರೆಗೆ ಸಂಚರಿಸಲು ನಿಗದಿತ ಪ್ರಯಾಣ ಭತ್ಯೆಯನ್ನೂ ಸಹ ನೀಡಲಾಗುವುದು. ಈ ಯೋಜನೆಯಡಿ ಎಲ್ಲ ವಿಧವಾದ ದ್ವಿತೀಯ ಆರೋಗ್ಯ ಚಿಕಿತ್ಸೆ ಮತ್ತು ಎಲ್ಲ ತೃತೀಯ ಆರೋಗ್ಯ ಸುರಕ್ಷಾ ಚಿಕಿತ್ಸೆಗಳನ್ನು ನೀಡಲಾಗುವುದು. 

Trending News