ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ವಿಧಾನಸಭೆಯಲ್ಲಿ ನಡೆಯುತ್ತಿರುವ ವಿಶ್ವಾಸಮತ ಯಾಚನೆ ಬಗೆಗಿನ ಚರ್ಚೆ ಇನ್ನು ಕೆಲವೇ ಕ್ಷಣಗಳಲ್ಲಿ ಅಂತ್ಯವಾಗಲಿದೆ. ಇದಕ್ಕೂ ಮುನ್ನ ಸದನದಲ್ಲಿ ಮಾತನಾಡಿದ ಸಿಎಲ್ಪಿ ನಾಯಕ ಸಿದ್ದರಾಮಯ್ಯ ಅವರು,  ಬಿಜೆಪಿಯ ಆಪರೇಶನ್ ಕಮಲದ ಬಗ್ಗೆ ಪ್ರಸ್ತಾಪಿಸಿ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.


COMMERCIAL BREAK
SCROLL TO CONTINUE READING

ಈ ಹಿಂದೆಯೂ ಬಿಜೆಪಿಯವರೇ ಕುದುರೆ ವ್ಯಾಪಾರ ಮಾಡಿದ್ದು. ಆ ಬಗ್ಗೆ ಯಡಿಯೂರಪ್ಪ ಅವರೇ ಮಾತನಾಡಿದ್ದ ಆಡಿಯೋ ಒಂದು ಸುದ್ದಿಯಾಗಿತ್ತು. ಮೊದಲಿಗೆ ಆ ಧ್ವನಿ ನನ್ನದಲ್ಲ ಎಂದಿದ್ದ ಯಡಿಯೂರಪ್ಪನವರು ಅದು ಮಿಮಿಕ್ರಿ ಅಂತಲೂ ಸಹ ಹೇಳಿಲ್ಲ. ಬಳಿಕ ತಮ್ಮದೇ ಧ್ವನಿ ಎಂದು ಒಪ್ಪಿಕೊಂಡಿದ್ದರು. ಹೋಲ್ಸೇಲ್, ರಿಟೇಲ್ ಮಾಡೋದು ತಪ್ಪಲ್ವೇ? ಇವೆಲ್ಲಾ ಪ್ರಜಾಪ್ರಭುತ್ವಕ್ಕೆ ಮಾರಕವಲ್ವೇ? ಬೆಕ್ಕು ಕಣ್ಮುಚ್ಚಿ ಹಾಲು ಕುಡಿದ್ರೆ ಗೊತ್ತಾಗಲ್ವೇ? ನೇರವಾಗಿ ನಾವೇ ಕುದುರೆ ವ್ಯಾಪಾರ ಮಾಡಿದ್ದು ಅಂತ ಹೇಳಿ. ಯಡಿಯೂರಪ್ಪನವರೇ, ಕುದುರೆಗಳನ್ನು ಕಟ್ಕೊಂಡು ಸರ್ಕಾರ ರಚನೆ ಮಾಡಲು ಆಗಲ್ಲ" ಎಂದು ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಹೇಳಿದರು.


ಅಯಾರಾಮ್ ಗಯಾರಾಮ್ ಕಥೆ ಹೇಳಿದ ಸಿದ್ದರಾಮಯ್ಯ
ಇದೇ ವೇಳೆ 1967ರಲ್ಲಿ ಗಯಾಲಾಲ್ 3 ಬಾರಿ ಪಕ್ಷಾಂತರ ಮಾಡಿದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಒಂದೇ ದಿನ ಶಾಸಕ  ಗಯಾಲಾಲ್ ಪಕ್ಷಾಂತರವಾದರು. ಅದೇ ಆಯಾರಾಮ್, ಗಯಾರಾಮ್ ಗಾದೆ. ಆಗಲೇ ಈ ಪ್ರಸಿದ್ಧ ಗಾದೆ ಚಾಲ್ತಿಗೆ ಬಂದಿದ್ದು ಎಂದು ಸಿದ್ದರಾಮಯ್ಯ ಹೇಳಿದರು.


ಪಕ್ಷಾಂತರದ ಬಗ್ಗೆ ಸಿದ್ದರಾಮಯ್ಯ ಮಾತು
ರಾಜ್ಯದಲ್ಲಿ ನಡೆದ ಮೊದಲ 4 ಚುನಾವಣೆಗಳಲ್ಲಿ ಪಕ್ಷಾಂತರ ಇರಲಿಲ್ಲ. ಆಗ ಕಾಂಗ್ರೆಸ್ ಸರ್ಕಾರವೇ ರಚನೆಯಾಗುತ್ತಿತ್ತು. ಆದರೆ ಆ ಬಳಿಕ ಹೆಚ್ಚಾದ ಪಕ್ಷಾಂತರದಿಂದಾಗಿ ಪಕ್ಷಾಂತರವಾದ 210 ಶಾಸಕರು ಸಚಿವರಾದರು. ಇದು ಹೀಗೆ ಮುಂದುವರೆದರೆ ರಾಜಕೀಯ ಅಧೋಗತಿಗೆ ತಲುಪುತ್ತದೆ. ಇದಕ್ಕೆ ಕಡಿವಾಣ ಹಾಕಲೇಬೇಕು. ಪಕ್ಷಾಂತರ ಪಿಡುಗು ನಿವಾರಣೆಯಾಗಲೇಬೇಕು ಎಂದು ಸಿದ್ದರಾಮಯ್ಯ ಸದನದಲ್ಲಿ ಹೇಳಿದರು.