ಜಗತ್ತಿಗೆ ವಕ್ಕರಿಸಿದ ಕೊರೊನಾ ಮಹಾಮಾರಿ ಅದೆಷ್ಟೋ ಪ್ರಾಣವನ್ನು ಪಡೆದುಕೊಂಡಿದೆ. ದೇಶದಲ್ಲಿಯೂ ಈ ಸಾಂಕ್ರಾಮಿಕ ರೋಗ ತನ್ನ ಅಟ್ಟಹಾಸವನ್ನು ಮೆರೆದಿದ್ದು, ವೈದ್ಯರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಅದೆಷ್ಟೋ ಜನರನ್ನು ಕಾಪಾಡಿದ್ದಾರೆ. ಇದೀಗ ಅಂತಹದ್ದೇ ವೈದ್ಯರ ಸಾಲಿಗೆ ಕರ್ನಾಟಕದ ಚಿಕ್ಕಮಗಳೂರು ಮೂಲದ ವೈದ್ಯರೊಬ್ಬರು ಸೇರಿದ್ದಾರೆ. ಇವರು ಇಟಲಿಯಲ್ಲಿ ಕೊರೊನಾ ವಿರುದ್ಧ ಹೋರಾಡಿ, ಜನಸೇವೆಗೈದ ಹೆಮ್ಮೆಯ ಕನ್ನಡಿಗ. 


COMMERCIAL BREAK
SCROLL TO CONTINUE READING

ಕಣ್ಣಮುಂದೆಯೇ ಕೊರೊನಾಗೆ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿರುವುದನ್ನು ನೋಡಿದ್ದಾರೆ. ಅಷ್ಟೇ ಅಲ್ಲದೆ, ಪ್ರೀತಿ ಪಾತ್ರರು ಕೋವಿಡ್‌ ಮಹಾಮಾರಿಯಿಂದ ಸಾವನ್ನಪ್ಪಿದ ಸುದ್ದಿ ತಿಳಿದಾಗಲೂ, ನೋವನ್ನು ತೋರ್ಪಡಿಸದೆ ಇತರರ ರಕ್ಷಣೆಯಲ್ಲಿ ತೊಡಗಿದ್ದಾರೆ. ಚಿಕ್ಕಮಗಳೂರಿನ ಚಿಕ್ಕಬಾನೂರಿನ ಹೇಮೇಗೌಡ ರುದ್ರಪ್ಪ ಎಂಬವರೇ ಈ ಸೇವೆಗೈಯುತ್ತಿರುವ ಹೆಮ್ಮೆಯ ಕನ್ನಡಿಗ. ಇಟಲಿಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲೆಂದೇ ತೆರೆಯಲಾಗಿದ್ದ ಪ್ರತ್ಯೇಕವಾದ ವಾರ್ಡ್‌ನಲ್ಲಿ ಹೇಮೇಗೌಡರವರು ಸೇವೆ ಸಲ್ಲಿಸುತ್ತಿದ್ದರು. 


ಇದನ್ನೂ ಓದಿ: ಅಮರನಾಥ ಮೇಘಸ್ಫೋಟ: ಕನ್ನಡಿಗರ ರಕ್ಷಣೆಗಾಗಿ ರಾಜ್ಯ ಸರ್ಕಾರದಿಂದ ಸಹಾಯವಾಣಿ


ಹೇಮೇಗೌಡ ಅವರು ಈ ಬಗ್ಗೆ ಮಾತನಾಡಿದ್ದು, "ನಮ್ಮ ತಂಡವು ಪ್ರತಿದಿನ ಸುಮಾರು 30 ಕೋವಿಡ್ ಪಾಸಿಟಿವ್ ರೋಗಿಗಳ ಆರೋಗ್ಯದ ಬಗ್ಗೆ ನಿಗಾ ವಹಿಸಿ, ಅವರನ್ನು ಕಾಪಾಡಲೆಂದು ಹೋರಾಡುತ್ತಿತ್ತು. ಕಷ್ಟದಲ್ಲಿರುವ ಜನರನ್ನು ಬಿಡುವುದು ಹೇಗೆ? ಎಂಬ ಪ್ರಶ್ನೆ ಎದ್ದಿತ್ತು. ಹೀಗಾಗಿ ಇವರನ್ನು ಕಾಪಾಡಲೆಂದು ನನ್ನಲ್ಲೇ ನಾನು ಪ್ರತಿಜ್ಞೆ ಮಾಡಿಕೊಂಡೆ" ಎಂದು ಹೇಳಿದರು.


ಸಿಕ್ಕಿಂ ಮಣಿಪಾಲ್ ವಿಶ್ವವಿದ್ಯಾನಿಲಯದಿಂದ ಕ್ಲಿನಿಕಲ್ ರಿಸರ್ಚ್ ಮತ್ತು ರೆಗ್ಯುಲೇಟರಿ ಅಫೇರ್ಸ್‌ನಲ್ಲಿ ಪದವೀಧರರಾಗಿರುವ ಹೇಮೇಗೌಡ 2010 ರಲ್ಲಿ ಸಂಶೋಧನಾ ಕಾರ್ಯಗಳನ್ನು ಮುಂದುವರಿಸಲು ಇಟಲಿಗೆ ತೆರಳಿದರು. ಇನ್ನು ಮಾರ್ಚ್‌ನಲ್ಲಿ ಕೋವಿಡ್ ಬಿಕ್ಕಟ್ಟು ಹೆಚ್ಚಾಗುತ್ತಿದ್ದಂತೆ, ಕೋವಿಡ್ ವಾರ್ಡ್‌ನಲ್ಲಿ ಪೂರ್ಣ ಸಮಯದ ನರ್ಸ್‌ ಆಗಿ ಸೇರಿಕೊಂಡು ಅಲ್ಲಿ ಸೇವೆ ಸಲ್ಲಿಸಲು ಮುಂದಾದರು. 


ಹೇಮೇಗೌಡರವರು ಮಾರ್ಚ್ ಆರಂಭದಲ್ಲಿ ಸೋಂಕಿನ 3 ಮತ್ತು 4 ನೇ ಹಂತದ ರೋಗಿಗಳನ್ನು ನೋಡಿಕೊಳ್ಳುವ ಕೆಲಸ ಮಾಡಿದ್ದಾರೆ. "ಹೆಚ್ಚಿನ ರೋಗಿಗಳಿಗೆ ಉಸಿರಾಟದಲ್ಲಿ ತೀವ್ರ ತೊಂದರೆ ಇತ್ತು. ನಾವು ಆಕ್ಸಿಜನ್‌ ಮಾಸ್ಕ್‌ಗಳನ್ನು ಬಳಸಬೇಕಾಗಿತ್ತು. ಅನೇಕರನ್ನು ವೆಂಟಿಲೇಟರ್‌ಗಳಲ್ಲಿ ಇರಿಸಲಾಯಿತು. ಆ ಸಂದರ್ಭದಲ್ಲಿ ನಾವು ಸಮಯದ ವಿರುದ್ಧ ಹೋರಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನನ್ನ ಕಣ್ಣ ಮುಂದೆ ಇಲ್ಲಿಯವರೆಗೆ ಸುಮಾರು 200 ಸಾವುಗಳು ಸಂಭವಿಸಿವೆ" ಎಂದು ನೋವಿನಿಂದ ಹೇಳಿಕೊಳ್ಳುತ್ತಾರೆ ಹೇಮೇಗೌಡರವರು. 


ಹೇಮೇಗೌಡ ಮತ್ತು ಅವರ ಸಹೋದ್ಯೋಗಿಗಳು ಮೂರು ಪದರಗಳ ಪಿಪಿಇ ಕಿಟ್‌ಗಳನ್ನು ಧರಿಸಿ ಸೇವೆ ಮಾಡಿದರೂ ಸಹ ಕೆಲವರಿಗೆ ಕೊರೊನಾ ಸೋಂಕು ತಗುಲಿತ್ತು. 


"ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿದರೂ ಕೆಲವರು ಅದಕ್ಕೆ ಪೂರಕವಾಗಿ ಸ್ಪಂದಿಸುತ್ತಿರಲಿಲ್ಲ. ಅನೇಕರು ಚಿಕಿತ್ಸೆ ಫಲಕಾರಿಯಾಗದೆ ಬಲಿಯಾಗುತ್ತಿದ್ದರು. ಈ ಸಂದರ್ಭದಲ್ಲಿ ನನಗೆ ದುಃಖ ತಂದ ವಿಚಾರವೆಂದರೆ, ಮೃತರ ಕುಟುಂಬಗಳಿಗೆ ವಿಡಿಯೋ ಕರೆ ಮಾಡುವ ಮೂಲಕ ಕೊನೆಯ ಬಾರಿಗೆ ಮೃತರನ್ನು ತೋರಿಸುವುದು" ಎಂದು ನೋವಿನಿಂದ ಹೇಳಿಕೊಂಡರು. 


ಇದನ್ನೂ ಓದಿ: ಬೆಳಗಿನ ಉಪಾಹಾರದಲ್ಲಿ ಈ ಆಹಾರಗಳನ್ನು ಸೇವಿಸಿದರೆ ಅನಾರೋಗ್ಯ ಕಟ್ಟಿಟ್ಟಬುತ್ತಿ!


ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಈ ಕನ್ನಡಿಗ ಕೊನೆಯವರೆಗೂ ಹೋರಾಡಲು ಸಂಕಲ್ಪ ಮಾಡಿದ್ದು, ಆಸ್ಪತ್ರೆಯಿಂದ ವೈರಸ್‌ನಿಂದ ಮುಕ್ತವಾಗಿ ಹೊರನಡೆಯುವ ಪ್ರತಿಯೊಬ್ಬ ರೋಗಿಗೂ ಜೀವನದಲ್ಲಿ ಉತ್ತಮ ಕೆಲಸ ಮಾಡುವಂತೆ ಹುರಿದುಂಬಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಅದಷ್ಟೇ ಅಲ್ಲದೆ, ಈ ಕಾರ್ಯ ಪೂರ್ಣಗೊಂಡ ಬಳಿಕವೇ ತಾನು ಕರ್ನಾಟಕಕ್ಕೆ ಬರುತ್ತೇನೆ ಶಪಥ ಮಾಡಿದ್ದಾರೆ. 


ಬಿಎಸ್‌ವೈ ಮೆಚ್ಚುಗೆ: 
ವಿಶ್ವ ಶುಶ್ರೂಷಕರ ದಿನಾಚರಣೆಯಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಮೇಗೌಡರವರಿಗೆ ಕರೆ ಮಾಡಿ ಆರೋಗ್ಯದ ಬಗ್ಗೆ ಮತ್ತು ಅವರ ಸೇವೆಯ ಬಗ್ಗೆ ಮಾತನಾಡಿದ್ದರು. ಜೊತೆಗೆ ಇಟಲಿಯಲ್ಲಿ ಕೋವಿಡ್ 19 ರೋಗಿಗಳನ್ನು ಕಾಪಾಡಲೆಂದು ಸೇವೆ ಸಲ್ಲಿಸಿದ್ದಕ್ಕಾಗಿ ಮಾಜಿ ಸಿಎಂ ಪ್ರಾಮಾಣಿಕ ಗೌರವವನ್ನು ಸಲ್ಲಿಸಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.