5G ಬಳಕೆದಾರರೇ ಎಚ್ಚರಿಕೆ! ಈ ಸೇವೆ ದುಬಾರಿಯಾಗಬಹುದೇ..?
ದೇಶದಲ್ಲಿ 5G ಸೇವೆ ಆರಂಭವಾಗಿ ಬಹಳ ದಿನಗಳಾಗಿವೆ. ಟೆಲಿಕಾಂ ಕಂಪನಿಗಳಿಂದ ಜನರಿಗೆ 5G ಸೇವೆಯನ್ನೂ ನೀಡಲಾಗುತ್ತಿದೆ. ಇದರ ಹೊರತಾಗಿಯೂ ಟೆಲಿಕಾಂ ಕಂಪನಿಗಳು ತಮ್ಮ ಆದಾಯ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಈಗ ದೇಶದಲ್ಲಿ 5G ಅತ್ಯಂತ ವೇಗವಾಗಿ ವಿಸ್ತರಿಸಿದೆ ಆದರೆ ಕಂಪನಿಗಳು ಅದರ ಲಾಭವನ್ನು ಪಡೆಯುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಳ್ಲಿ 5G ಸೇವೆ ದುಬಾರಿಯಾಗಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ?
ಇಂದು ಭಾರತದಲ್ಲಿ ಬಹುತೇಕ ಜನರು ಸ್ಮಾರ್ಟ್‌ಫೋನ್ ಹೊಂದಿದ್ದು, ವೇಗದ ಇಂಟರ್ನೆಟ್ ಸಹ ಬಳಸುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ವಿಶ್ವದಲ್ಲೇ ಅತ್ಯಂತ ವೇಗವಾಗಿ ಭಾರತದಲ್ಲಿ 5G ನೆಟ್‌ವರ್ಕ್‌ನ ವಿಸ್ತರಣೆಯಾಗುತ್ತಿದೆ. ಆದರೆ ಇದರ ಆದಾಯವು ಹೆಚ್ಚುತ್ತಿಲ್ಲ. ಟೆಲಿಕಾಂ ನೆಟ್‌ವರ್ಕ್ ಬ್ಯಾಂಡ್‌ವಿಡ್ತ್‌ನ ಶೇ.80ರಷ್ಟು ಸೇವೆ ಒದಗಿಸುವ ಘಟಕಗಳು ಆದಾಯವನ್ನು ಪಾವತಿಸುತ್ತಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
‘ಇಂಡಿಯಾ ಮೊಬೈಲ್ ಕಾಂಗ್ರೆಸ್’ ಸಂದರ್ಭದಲ್ಲಿ ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (COAI) ಡೈರೆಕ್ಟರ್ ಜನರಲ್ ಎಸ್‌ಪಿ ಕೊಚ್ಚರ್ ಮಾತನಾಡಿ, ‘ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಹೊರೆಯಾಗಲು ಬಯಸುವುದಿಲ್ಲ. ಆದರೆ ನೆಟ್‌ವರ್ಕ್‌ನಲ್ಲಿ ಮಾಡುವ ಹೂಡಿಕೆಯ ವೆಚ್ಚವನ್ನು ಯಾರಾದರೂ ಭರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
‘5G ಯ ರೋಲ್‌ಔಟ್ ತುಂಬಾ ಚೆನ್ನಾಗಿದೆ’ ಎಂದು ಕೊಚ್ಚರ್ ಅಭಿಪ್ರಾಯಪಟ್ಟಿದ್ದಾರೆ. 5Gಯ ವೇಗದ ವಿಸ್ತರಣೆಯೊಂದಿಗೆ ವಿಶ್ವ ದಾಖಲೆಯನ್ನು ರಚಿಸಲಾಗಿದೆ. ಇದರ ಹೊರತಾಗಿಯೂ ಟೆಲಿಕಾಂ ಉದ್ಯಮದ ಆದಾಯವು ವಾಸ್ತವವಾಗಿ ಹೆಚ್ಚಿಲ್ಲ. ಈ ಜಾಲಗಳನ್ನು ಪ್ರಾರಂಭಿಸಲು ಭಾರೀ ಬಂಡವಾಳ ವೆಚ್ಚ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
‘5G ಸೇವೆ ಪ್ರಾರಂಭಿಸುವ ಖಾಸಗಿ ಕಂಪನಿಗಳು ಖಂಡಿತವಾಗಿಯೂ ಅದರ ಮೇಲೆ ಆದಾಯವನ್ನು ನಿರೀಕ್ಷಿಸುತ್ತವೆ. ದುರದೃಷ್ಟವಶಾತ್ ಇದು ಇರಬೇಕಾದಷ್ಟು ಅಲ್ಲ. 5G ವಿಸ್ತರಣೆಗಾಗಿ ಶೇ.80ರಷ್ಟು ಟೆಲಿಕಾಂ ನೆಟ್‌ವರ್ಕ್ ಬ್ಯಾಂಡ್‌ವಿಡ್ತ್ ಅನ್ನು ಬಳಸುತ್ತಿರುವ ನಾಲ್ಕೈದು ದೊಡ್ಡ ಘಟಕಗಳು ಮುಂದೆ ಬಂದವು. ಆದರೆ ಆದಾಯವನ್ನು ಪಾವತಿಸುತ್ತಿಲ್ಲ’ವೆಂದು ಕೊಚ್ಚರ್ ಹೇಳಿದ್ದಾರೆ.