₹100 ಕೋಟಿ ಕ್ಲಬ್ ಸೇರಲು `777 ಚಾರ್ಲಿ` ದಾಪುಗಾಲು..! ಹೇಗಿದೆ ರಕ್ಷಿತ್ ಶೆಟ್ಟಿ ಸಿನಿಮಾ ಹವಾ..?
ಕರ್ನಾಟಕ ರತ್ನ ಅಪ್ಪು ಅಭಿನಯದ 'ಜೇಮ್ಸ್' ಚಿತ್ರ ದೊಡ್ಡ ಹಿಟ್ ಕಂಡ ಬಳಿಕ 'ಕೆಜಿಎಫ್' ಸಾವಿರ ಕೋಟಿ ಕ್ಲಬ್ ಉಡೀಸ್ ಮಾಡಿ ಹೊಸ ಇತಿಹಾಸ ಬರೆದಿತ್ತು. ಇದೀಗ '777 ಚಾರ್ಲಿ' ಕೂಡ ₹100 ಕೋಟಿ ಕ್ಲಬ್ ಸೇರಲು ದಾಪುಗಾಲು ಇಡುತ್ತಿದ್ದು, ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಮತ್ತೊಂದು ದಾಖಲೆ ಬರೆಯುವ ಎಲ್ಲಾ ನಿರೀಕ್ಷೆಗಳು ದಟ್ಟವಾಗಿವೆ.
ಸ್ಯಾಂಡಲ್ವುಡ್ನಲ್ಲಿ 'ಕೊರೊನಾ' ಗ್ರಹಣ ತೊಲಗಿ, ಹೊಸ ಮನ್ವಂತರ ಆರಂಭವಾಗಿದೆ. ಹೀಗಾಗಿ ಬಹುನಿರೀಕ್ಷಿತ ಸಾಲು ಸಾಲು ಕನ್ನಡ ಸಿನಿಮಾಗಳು ರಿಲೀಸ್ಗೆ ರೆಡಿಯಾಗಿವೆ.
'777 ಚಾರ್ಲಿ' ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿತ್ತು. ಇದೀಗ ಆ ಕುತೂಹಲವೇ ಸಿನಿಮಾಗೆ ದೊಡ್ಡ ಗೆಲುವು ತಂದುಕೊಟ್ಟಿದೆ.
'ಸಿಂಪಲ್ಲಾಗಿ ಒಂದು ಲವ್ ಸ್ಟೋರಿ' ಸಿನಿಮಾ ಹಿಟ್ ಆದ ಬಳಿಕ ರಕ್ಷಿತ್ ಶೆಟ್ಟಿ ಹಿಂದಿರುಗಿ ನೋಡಲೇ ಇಲ್ಲ. ಆದರೆ 'ಅವನೇ ಶ್ರೀಮನ್ನಾರಾಯಣ' ಸೋಲಿನ ಬಳಿಕ ರಕ್ಷಿತ್ ಗೆಲುವಿನ ನಿರೀಕ್ಷೆಯಲ್ಲಿದ್ದರು. '777 ಚಾರ್ಲಿ' ಶೂಟಿಂಗ್ ಶುರು ಆದಾಗಿನಿಂದಲೂ ದೊಡ್ಡ ಸದ್ದು ಮಾಡುತ್ತಿತ್ತು.
ಕನ್ನಡದಲ್ಲಿ ಡಿಫರೆಂಟ್, ಡಿಫರೆಂಟ್ ಸಿನಿಮಾಗಳನ್ನ ತೆರೆಗೆ ತರುವಲ್ಲಿ ರಕ್ಷಿತ್ ಶೆಟ್ಟಿ ಹೆಸರುವಾಸಿ. ಹೀಗೆ ಡಿಫರೆಂಟ್ ಸ್ಟೋರಿಗಳ ಮೂಲಕ ಕನ್ನಡ ಸಿನಿಮಾ ಜಗತ್ತಿನಲ್ಲಿ ಸಂಚಲನ ಸೃಷ್ಟಿಸುತ್ತಿರುವ ರಕ್ಷಿತ್ ಶೆಟ್ಟಿ, ಈ ಬಾರಿ ಪಪ್ಪಿಯ ಕಥೆ ಹೇಳಿದ್ದರು. ಪ್ರೀತಿ, ಕಂಬನಿ, ಭಾವನೆಗಳ ಬೆಸುಗೆಯೇ '777 ಚಾರ್ಲಿ' ಆಗಿತ್ತು. ಈ ಮೂಲಕ '777 ಚಾರ್ಲಿ' ದಾಖಲೆಗಳ ಮೇಲೆ ದಾಖಲೆ ಬರೆದಿತ್ತು. ಇದೀಗ ಬಾಕ್ಸ್ ಆಫಿಸ್ ವಿಚಾರದಲ್ಲೂ '777 ಚಾರ್ಲಿ' ದೊಡ್ಡ ದಾಖಲೆ ನಿರ್ಮಿಸಿದೆ.