Akshaya Tritiya 2024: ಅಕ್ಷಯ ತೃತೀಯದಂದು ಈ 5 ಕೆಲಸ ಮಾಡಿದರೆ ಲಕ್ಷ್ಮಿ ಕೃಪೆ, ಕೈ ತುಂಬಾ ಹಣ
ಹಿಂದೂ ಧರ್ಮದಲ್ಲಿ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಅಕ್ಷಯ ಎಂದರೆ ಅಂತ್ಯವಿಲ್ಲದ್ದು ಎಂದರ್ಥ.
2024ರಲ್ಲಿ ಮೇ 10ರ ಶುಕ್ರವಾರದಂದು ಅಕ್ಷಯ ತೃತೀಯವನ್ನು ಆಚರಿಸಲಾಗುವುದು. ಈ ದಿನ ಮನೆಗೆ ಕೆಲವು ವಸ್ತುಗಳನ್ನು ತರುವುದರಿಂದ, ತಾಯಿ ಲಕ್ಷ್ಮಿಗೆ ಸಂಬಂಧಿಸಿದ ಕೆಲವು ಕೆಲಸಗಳನ್ನು ಮಾಡುವುದರಿಂದ ಅದೃಷ್ಟ ಖುಲಾಯಿಸುತ್ತದೆ ಎಂಬ ನಂಬಿಕೆ ಇದೆ. ಅಂತಹ ಕೆಲಸಗಳು ಯಾವುವೆಂದರೆ...
ಅಕ್ಷಯ ತೃತೀಯ ದಿನದಂದು ಮನೆಯ ಮುಖ್ಯ ದ್ವಾರಕ್ಕೆ ಮಾವಿನ ಎಲೆಗಳಿಂದ ತೋರಣವನ್ನು ಕಟ್ಟಿ. ಅಂತಹ ಮನೆಗೆ ಲಕ್ಷ್ಮಿ ಪ್ರವೇಶವಾಗಲಿದ್ದು ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ.
ಅಕ್ಷಯ ತೃತೀಯದಂದು ಪೂರ್ಣ ವಿಧಿ-ವಿಧಾನಗಳಿಂದ ತಾಯಿ ಲಕ್ಷ್ಮಿಯನ್ನು ಪೂಜಿಸಬೇಕು. ಲಕ್ಷ್ಮೀದೇವಿಯೊಂದಿಗೆ ಭಗವಾನ್ ವಿಷ್ಣುವನ್ನು ಪೂಜಿಸುವುದರಿಂದ ಲಕ್ಷ್ಮಿ ಪ್ರಸನ್ನಳಾಗಿ ಭಕ್ತರ ಇಷ್ಟಾರ್ಥವನ್ನು ಈಡೇರಿಸುತ್ತಾಳೆ ಎಂಬ ನಂಬಿಕೆಯಿದೆ.
ಅಕ್ಷಯ ತೃತೀಯ ದಿನದಂದು ನೀರು ತುಂಬಿದ ಕಲಶವನ್ನು ದಾನ ಮಾಡುವುದನ್ನು ಅತ್ಯಂತ ಮಂಗಳಕರ ಕೆಲಸ ಎಂದು ನಂಬಲಾಗಿದೆ. ಇದಕ್ಕಾಗಿ, ಮನೆಯಲ್ಲಿ ಕಲಶವನ್ನು ಸ್ಥಾಪಿಸಿ. ಅದರಲ್ಲಿ ನೀರು ತುಂಬಿ ಸ್ವಲ್ಪ ಗಂಗಾಜಲವನ್ನು ಬೆರೆಸಿ, ಆ ಕಲಶವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ನಿರ್ಗತಿಕರಿಗೆ ದಾನ ಮಾಡಿ. ಇದರಿಂದ ಆರ್ಥಿಕ ಬಿಕ್ಕಟ್ಟಿನಿಂದ ಪರಿಹಾರ ದೊರೆಯುತ್ತದೆ.
ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಖರೀದಿಸುವುದನ್ನು ಮಂಗಳಕರ ಎಂದು ಭಾವಿಸಲಾಗಿದೆ. ಈ ದಿನ ನಿಮ್ಮ ಕೈಲಾದ ಮಟ್ಟಿಗೆ ಚಿನ್ನ ಖರೀದಿಸಿ ಮನೆಯ ಉತ್ತರ ದಿಕ್ಕಿನಲ್ಲಿ ಆ ಚಿನ್ನವನ್ನು ಇಡುವುದರಿಂದ ಜೀವನದಲ್ಲಿ ಎದುರಾಗಿರುವ ಸಂಕಷ್ಟಗಳು ದೂರವಾಗಿ, ಪ್ರಗತಿಯ ಹಾದಿ ತೆರೆಯುತ್ತದೆ ಎಂಬ ನಂಬಿಕೆ ಇದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯ ದಿನದಂದು ಅರಳಿ, ಮಾವು, ಬೇವು, ಆಲದ ಅಥವಾ ಯಾವುದೇ ರೀತಿಯ ಹಣ್ಣಿನ ಸಸಿಯನ್ನು ನೆಡುವುದನ್ನು ಅತ್ಯಂತ ಪುಣ್ಯದ ಕೆಲಸ ಎಂದು ಹೇಳಲಾಗುತ್ತದೆ. ಇದರಿಂದ ತಾಯಿ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಬಹುದು ಎಂಬ ನಂಬಿಕೆಯೂ ಇದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.