BY Vijayendra : ಬಿ.ವೈ. ವಿಜಯೇಂದ್ರನಿಗೆ ರಾಜ್ಯ ಬಿಜೆಪಿ ಸಾರಥ್ಯ..! ಮರಳಿ ಅರಳುತ್ತಾ ಕಮಲ

Fri, 10 Nov 2023-7:57 pm,

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತು ಮನೆ ದಾರಿ ಹಿಡಿಯುವಂತಾಗಿತ್ತು. ಪಕ್ಷದ ಹಿರಿಯ ನಾಯಕರಾದ ಜಗದೀಶ್‌ ಶೆಟ್ಟರ್‌, ಸವದಿ ʼಕೈʼ ಸೇರಿ ಬಿಜೆಪಿ ವಿರುದ್ಧವೇ ಹರಿಹಾಯ್ದಿದ್ದರು.   ಪಕ್ಷದ ಸೋಲಿನ ಹೊಣೆ ಹೊತ್ತ ನಳೀನ್ ಕುಮಾರ್ ಕಟೀಲ್ ರಾಜೀನಾಮೆ ನೀಡಿದ್ದರು. ಬಳಿಕ ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಬಿದ್ದಿತ್ತು. ಇದೇ ವಿಚಾರವಾಗಿ ಕಾಂಗ್ರೆಸ್‌ ಕಮಲಪಾಳಯದ ವಿರುದ್ಧ ಆಗಾಗ ವ್ಯಂಗ್ಯವಾಡುತ್ತಿತ್ತು. 

ಸಧ್ಯ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಸೋತು ಬಾಡಿರುವ ಕಮಲಕ್ಕೆ ವಿಜಯೇಂದ್ರ ನೀರು ಹಾಕಿ ಪೋಷಿಸಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗುವಂತೆ ಮಾಡುವ ಬಹು ದೊಡ್ಡ ಜವಾಬ್ದಾರಿ ಹೊತ್ತಿದ್ದಾರೆ.

ರಾಜ್ಯ ರಾಜಕಾರಣದಿಂದ ದೂರ ಉಳಿದಿದ್ದರೂ ಸಹ ಬಿಎಸ್‌ ಯಡಿಯೂರಪ್ಪ ಅವರ ಪ್ರಾಭಲ್ಯ ಅರಿತುಕೊಂಡ ಬಿಜೆಪಿ ಹೈಕಮಾಂಡ್‌ ಅವರ ಪುತ್ರನಿಗೆ ಮಣೆ ಹಾಕಿದೆ. ರಾಜ್ಯ ರಾಜಕೀಯದಲ್ಲಿ ಲಿಂಗಾಯತ ಪ್ರಬಲ ನಾಯಕ ಬಿಎಸ್ ಯಡಿಯೂರಪ್ಪ ಎಂದು ಕೊನೆಗೂ ಕಮಲ ನಾಯಕರಿಗೆ ಅರ್ಥವಾದಂತಿದೆ.

ಇದರಿಂದಾಗಿ ಕೊನೆಗೂ ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತ ಮತ ಬ್ಯಾಂಕಿನತ್ತ ಗಮನ ಕೇಂದ್ರ ಗಮನಹರಿಸಿದೆ.

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ಸ್ಥಾನಕ್ಕೆ ಮೊದಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ಸಿಟಿ ರವಿ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೆಸರು ಕೇಳಿ ಬಂದಿತ್ತು. ಆದ್ರೆ ಅಂತಿಮವಾಗಿ ಬಿಎಸ್‌ವೈ​ ಪುತ್ರನಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದ್ದು, ಇದು ಪಕ್ಷದ ನಾಯಕರಲ್ಲಿ ಯಾವ ರೀತಿಯ ಭಾವನೆ ಮೂಡಿಸುತ್ತೆ ಅಂತ ಕಾಯ್ದು ನೋಡಬೇಕಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link