ವಿಶ್ವಕಪ್ ಫೈನಲ್’ಗೆ ಭಾರತದ ಪ್ಲೇಯಿಂಗ್ 11 ಪ್ರಕಟಿಸಿದ ರೋಹಿತ್ ಶರ್ಮಾ! ಈ ಆಟಗಾರರಿಗೆ ಖಚಿತ ಸ್ಥಾನ ಎಂದ ನಾಯಕ
ಇದೀಗ ಟೀಂ ಇಂಡಿಯಾ ನವೆಂಬರ್ 19ರಂದು ತನ್ನ ಅಂತಿಮ ಹಣಾಹಣಿಯಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಪಂದ್ಯ ಅಹಮದಾಬಾದ್’ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಈ ಅಮೋಘ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಪ್ಲೇಯಿಂಗ್ 11 ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
“ನಾವು ಏನನ್ನೂ ನಿರ್ಧರಿಸಿಲ್ಲ. ಎಲ್ಲರಿಗೂ ಫೈನಲ್ ಆಡುವ ಅವಕಾಶವಿದೆ. ಆದರೆ 12 ರಿಂದ 13 ಆಟಗಾರರು ನಮಗಾಗಿ ಸಿದ್ಧರಾಗಿದ್ದಾರೆ. ಅದರಲ್ಲಿ 11 ಆಟಗಾರರನ್ನು ಆಯ್ಕೆ ಮಾಡುತ್ತೇವೆ. ಎಲ್ಲಾ ಆಟಗಾರರು ಸಿದ್ಧರಾಗಿರಬೇಕು ಎಂದು ನಾನು ಬಯಸುತ್ತೇನೆ” ಎಂದಿದ್ದಾರೆ. ಈ ಹೇಳಿಕೆ ಮೂಲಕ ತಂಡದಲ್ಲಿ ಕೊಂಚ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದೆನಿಸುತ್ತಿದೆ.
“ಈ ದಿನಕ್ಕಾಗಿ ನಾವು ಈಗಾಗಲೇ ಸಿದ್ಧರಾಗಿದ್ದೇವೆ. ಟಿ20 ವಿಶ್ವಕಪ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್’ನ ಫೈನಲ್’ಗಳನ್ನು ಆಡಿದ್ದೇವೆ. ಎಲ್ಲಾ ಮೂರು ಸ್ವರೂಪಗಳಲ್ಲಿ ನಾವು ಸರಿಯಾದ ಆಟಗಾರರನ್ನು ಆಯ್ಕೆಮಾಡುವುದರ ಮೇಲೆ ಮಾತ್ರ ಗಮನಹರಿಸುತ್ತೇವೆ. ಕಳೆದ ಎರಡೂವರೆ ವರ್ಷಗಳಿಂದ ಇದನ್ನೇ ಮಾಡುತ್ತಿದ್ದೇವೆ. ಎಲ್ಲರಿಗೂ ಅವರವರ ಪಾತ್ರಗಳನ್ನು ಸ್ಪಷ್ಟವಾಗಿ ಹೇಳಿದ್ದೇವೆ. ಇದು ನಮಗೂ ಸಹಾಯ ಮಾಡಿದೆ. ಫೈನಲ್’ನಲ್ಲೂ ನಾವು ಉತ್ತಮ ಪ್ರದರ್ಶನ ನೀಡುತ್ತೇವೆ ಎಂದು ಭಾವಿಸುತ್ತೇವೆ” ಎಂದಿದ್ದಾರೆ.
ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಶ್ಲಾಘಿಸಿದ ರೋಹಿತ್ ಶರ್ಮಾ, 'ಇದುವರೆಗಿನ ನಮ್ಮ ಪಯಣದಲ್ಲಿ ರಾಹುಲ್ ದ್ರಾವಿಡ್ ಪಾತ್ರ ಬಹಳ ವಿಶೇಷವಾಗಿದೆ. ನಾನು ಏನನ್ನಾದರೂ ಯೋಚಿಸಿದರೆ, ಒಪ್ಪಿಕೊಳ್ಳುವುದು ಅವರ ಕೆಲಸ. ರಾಹುಲ್ ಅವರು ತಮ್ಮ ವೃತ್ತಿ ಜೀವನದಲ್ಲಿ ಕ್ರಿಕೆಟ್ ಆಡಿದ ರೀತಿ ಮತ್ತು ಇಲ್ಲಿರುವ ರೀತಿ ತದ್ವಿರುದ್ಧ. ನಮಗೆ ಅತ್ಯಂತ ವಿಶೇಷವಾದ ವಿಷಯವೆಂದರೆ ಅವರು ನಮ್ಮನ್ನು ಸಂಪೂರ್ಣವಾಗಿ ಸ್ವತಂತ್ರನಾಗಿ ಬಿಡುತ್ತಾರೆ” ಎಂದು ಹೇಳಿದ್ದಾರೆ.
ರೋಹಿತ್ ಶರ್ಮಾ ನೀಡಿದ ಹೇಳಿಕೆ ಅನುಸಾರ ಭಾರತದ ಸಂಭಾವ್ಯ ಪ್ಲೇಯಿಂಗ್ 11 ಬಳಗ ಹೀಗಿದೆ. ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.