Cervical Cancer: ನಟಿ ಪೂನಂ ಪಾಂಡೆ ಸಾವಿಗೆ ಕಾರಣವಾದ ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವೇನು?

Fri, 02 Feb 2024-6:21 pm,

ಬಾಲಿವುಡ್‌ನ ಮಾದಕ ನಟ ಪೂನಂ ಪಾಂಡೆ(೩೨) ಗರ್ಭಕಂಠದ ಕ್ಯಾನ್ಸರ್‌ನಿಂದ ಚಿಕ್ಕ ವಯಸ್ಸಿನಲ್ಲಿಯೇ ಸಾವನ್ನಪ್ಪಿದ್ದಾರೆ. ಪ್ರತಿವರ್ಷ ಪ್ರಪಂಚದಾದ್ಯಂತ 6ಲಕ್ಷಕ್ಕೂ ಹೆಚ್ಚು ಮಂದಿ ಈ ಮಾರಕ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆಂದು ವರದಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಮಹಿಳೆಯರನ್ನು ಅತಿಹೆಚ್ಚು ಕಾಡುತ್ತಿರುವ ಕ್ಯಾನ್ಸರ್‌ಗಳ ಪೈಕಿ ಗರ್ಭಕಂಠದ ಕ್ಯಾನ್ಸರ್‌ಗೆ 4ನೇ ಸ್ಥಾನವಿದೆ. ಈ ಕ್ಯಾನ್ಸರ್‌ನಿಂದ​ ಭಾರತದಲ್ಲಿ ಪ್ರತಿ ೮ ನಿಮಿಷಕ್ಕೆ ಒಬ್ಬ ಮಹಿಳೆ ಬಲಿಯಾಗುತ್ತಿದ್ದಾಳಂತೆ. ಗರ್ಭಕಂಠದಲ್ಲಿನ ಕೋಶಗಳ ಅಸಹಜ ಬೆಳವಣಿಗೆಯೇ ಈ ಕ್ಯಾನ್ಸರ್‌ಗೆ ಪ್ರಮುಖ ಕಾರಣ. ಇದು ಗರ್ಭಕೋಶದಿಂದ ಯೋನಿವರೆಗೆ ಹರಡುತ್ತದಂತೆ.

ವರದಿಯ ಪ್ರಕಾರ ವಿಶ್ವದಾದ್ಯಂತ ಸುಮಾರು 6 ಲಕ್ಷಕ್ಕೂ ಹೆಚ್ಚು ಮಹಿಳೆಯರು ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಸುಮಾರು 3ಲಕ್ಷಕ್ಕೂ ಅಧಿಕ ಮಂದಿ ಇದರಿಂದ ಸಾವನ್ನಪ್ಪುತ್ತಿದ್ದಾರಂತೆ. ಆರಂಭಿಕ ಹಂತದಲ್ಲಿ ಗರ್ಭಕಂಠದ ಕ್ಯಾನ್ಸರ್‌ ಪತ್ತೆಯಾದರೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಮೊದಲ ಹಂತದಲ್ಲಿ ಸೂಕ್ತ ಚಿಕಿತ್ಸೆ ಪಡೆದು ನಂತರದ ಹಂತದಲ್ಲಿ ಚಿಕಿತ್ಸೆ ಮುಂದುವರಿಸಿದರೆ ಈ ಕಾಯಿಲೆಯನ್ನು ಗುಣಪಡಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಹ್ಯೂಮನ್‌ ಪ್ಯಾಪಿಲೋಮ ವೈರಸ್ ಅಥವಾ ಎಚ್‌ಪಿವಿ(HPV) ಶೇ.99ರಷ್ಟು ಗರ್ಭಕಂಠದ ಕ್ಯಾನ್ಸರ್‌ ಪ್ರಕರಣಗಳಿಗೆ ಕಾರಣವಾಗಿದೆ. ಇದು ಸಾಮಾನ್ಯವಾಗಿ ಲೈಂಗಿಕವಾಗಿ ಹರಡುವ ಸೋಂಕು. ಇದು ಗಂಟಲು, ಜನನಾಂಗ ಹಾಗೂ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಲೈಂಗಿಕವಾಗಿ ಸಕ್ರಿಯವಾಗಿರುವವರು ಈ ಸೋಂಕಿಗೆ ತುತ್ತಾಗುತ್ತಾರೆ. ಆದರೆ ಇದರ ರೋಗಲಕ್ಷಣಗಳು ಮೇಲ್ನೋಟಕ್ಕೆ ಅರಿವಿಗೆ ಬರುವುದಿಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. 

ಬಹುತೇಕ ವೇಳೆ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಉತ್ತಮವಾಗಿದ್ದರೆ, ಸೋಂಕನ್ನು ದೇಹದಿಂದ ಹೊರ ಹಾಕಲು ಸಹಾಯ ಮಾಡುತ್ತದೆ. ಆದರೆ ನಿರಂತರ ಸೋಂಕು ಅಸಹಜ ಕೋಶಗಳ ಬೆಳವಣಿಗೆಗೆ ಕಾರಣವಾಗಬಹುದು. ಅಲ್ಲದೆ ಅದು ನಂತರದ ದಿನಗಳಲ್ಲಿ ಕ್ಯಾನ್ಸರ್‌ ಆಗಿ ಬದಲಾಗಬಹುದು. ಅಸಹಜ ಜೀವಕೋಶಗಳು ಕ್ಯಾನ್ಸರ್‌ ಆಗಿ ಬದಲಾಗಲು 15 ರಿಂದ 20 ವರ್ಷಗಳು ಬೇಕಾಗಬಹುದು. ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲವಾಗಿರುವ ಮಹಿಳೆಯರಲ್ಲಿ ಇದು ಕೇವಲ 5 ರಿಂದ 10 ವರ್ಷದಲ್ಲಿ ಕ್ಯಾನ್ಸರ್‌ ಉಂಟಾಗುವಂತೆ ಮಾಡಬಹುದು.

ಇತ್ತೀಚಿಗೆ ತಾಯಿಯಾದವರು, ಗರ್ಭನಿರೋಧಕ ಔಷಧಿಗಳನ್ನು ಸೇವಿಸುವವರು ಮತ್ತು ಧೂಮಪಾನಿಗಳಲ್ಲಿ ಈ ಸಮಸ್ಯೆ ಹೆಚ್ಚು ಕಾಡುತ್ತಿದೆ ಎಂದು ಹೇಳಲಾಗಿದೆ. ಲೈಂಗಿಕವಾಗಿ ಹರಡುವ ಸೋಂಕುಗಳು ಗರ್ಭಕಂಠದ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಹೀಗಾಗಿ ಕಾಲಕಾಲಕ್ಕೆ ವೈದ್ಯರ ಹತ್ತಿರ ಆರೋಗ್ಯ ತಪಾಸಣೆ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link