ವಿಮಾನ ಹಾರಾಡಲು ಬಳಸುವ ಇಂಧನ ಯಾವುದು ಗೊತ್ತಾ? ಒಂದು ಲೀ.ನಲ್ಲಿ ಎಷ್ಟು ದೂರ ಚಲಿಸುತ್ತೆ? ಇದರ ಮೈಲೇಜ್ ತಿಳಿದರೆ ಶಾಕ್ ಆಗೋದು ಪಕ್ಕಾ
ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಯಾಣ ಬೆಳೆಸಬೇಕೆಂದರೆ ಸಾಮಾನ್ಯವಾಗಿ ಬಸ್ ಅಥವಾ ನಮ್ಮ ಸ್ವಂತ ವಾಹನಗಳು ಇಲ್ಲವೇ ರೈಲು ಸೇವೆಗಳನ್ನು ಬಳಸುತ್ತೇವೆ. ಆದರೆ ಅಂತರಾಜ್ಯ ಅಥವಾ ಅಂತರಾಷ್ಟ್ರಗಳಿಗೆ ಪ್ರಯಾಣಿಸಬೇಕೆಂದರೆ ಖಂಡಿತವಾಗಿಯೂ ವಿಮಾನ ಸೇವೆಯನ್ನು ಬಳಕೆ ಮಾಡುತ್ತೇವೆ. ಇದಕ್ಕೆ ಪ್ರಮುಖ ಕಾರಣ ತ್ವರಿತವಾಗಿ ಪ್ರಯಾಣಿಸಬಹುದೆಂದು.
ಇಂತಹ ವಿಚಾರಕ್ಕೆ ವಿಮಾನಯಾನ ಉತ್ತಮ ಆಯ್ಕೆ. ಆದರೆ ವಿಮಾನದಲ್ಲಿ ಪ್ರಯಾಣಿಸುವ ಅಥವಾ ಪ್ರಯಾಣಿಸಬೇಕೆಂದು ಇಚ್ಛೆ ಹೊಂದಿರುವವರು ಎಂದಾದರೂ, ವಿಮಾನ ಚಲಿಸಲು ಬಳಸುವ ಇಂಧನ ಯಾವುದು ಎಂಬುದರ ಬಗ್ಗೆ ಆಲೋಚಿಸಿದ್ದೀರಾ?
ವಿಮಾನವು ಇಂಧನದಿಂದ ಹೇಗೆ ಚಲಿಸುತ್ತದೆ? ಒಂದು ಲೀಟರ್ ಇಂಧನದಲ್ಲಿ ಎಷ್ಟು ಮೈಲೇಜ್ ನೀಡುತ್ತದೆ? ಎಂಬೆಲ್ಲಾ ವಿಚಾರದ ಬಗ್ಗೆ ನಾವಿಂದು ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
ಅಂದಹಾಗೆ ವಿಮಾನದ ಪ್ರತಿ ಲೀಟರ್ ಮೈಲೇಜ್ ಎಷ್ಟು ಎಂಬುದಕ್ಕೆ ನಿಖರ ಉತ್ತರ ನೀಡೋದು ಕಷ್ಟ. ಇದಕ್ಕೆ ಮುಖ್ಯ ಕಾರಣ "ಸರಾಸರಿ ಪ್ರಯಾಣಿಕ ವಿಮಾನ" ದ ವ್ಯಾಖ್ಯಾನ. ಮತ್ತೊಂದು ಕಾರಣವೆಂದರೆ, ಚಾಲ್ತಿಯಲ್ಲಿರುವ ಪರಿಸ್ಥಿತಿಗಳ ಆಧಾರದ ಮೇಲೆ ಇಂಧನ ಬಳಕೆಯಲ್ಲಿ ಭಾರಿ ವ್ಯತ್ಯಾಸಗಳಾಗುತ್ತವೆ. ಉದಾಹರಣೆಗೆ ವಿಮಾನದ ತೂಕ, ವಿಮಾನದ ಎತ್ತರ ಮತ್ತು ಹವಾಮಾನ ಪರಿಸ್ಥಿತಿಗಳು ಇತ್ಯಾದಿ.
ನೀವು ಕಿಮೀ ಅಥವಾ ಲೀಟರ್’ನಲ್ಲಿ ವಿಮಾನದ ಮೈಲೇಜ್ ಎಷ್ಟು ಎಂಬುದನ್ನು ಲೆಕ್ಕಾಚಾರ ಮಾಡಲು ಬಯಸಿದರೆ, ಇಲ್ಲಿ ನಿಮಗೆ ವಿವರವಾಗಿ ಮಾಹಿತಿ ನೀಡಲಿದ್ದೇವೆ. B737 ಸಾಮಾನ್ಯವಾಗಿ ಪ್ರತಿ ಇಂಜಿನ್’ಗೆ ಪ್ರತಿ ನಿಮಿಷಕ್ಕೆ 20 ಲೀಟರ್ ಇಂಧನವನ್ನು ವ್ಯಯಿಸುತ್ತದೆ. ಅಂದರೆ, ಎರಡೂ ಎಂಜಿನ್‌ಗಳು ನಿಮಿಷಕ್ಕೆ 40 ಲೀಟರ್ ಇಂಧನವನ್ನು ವ್ಯಯಿಸುತ್ತದೆ ಎಂದರ್ಥ. ವೇಗವು ಸಾಮಾನ್ಯವಾಗಿ ಗಂಟೆಗೆ 900 ಕಿಮೀ ಇರುತ್ತದೆ. ಈ ರೀತಿ ಲೆಕ್ಕ ಹಾಕಿದರೆ ಗಂಟೆಗೆ 2400 ಲೀಟರ್ ಇಂಧನ ಖರ್ಚಾಗುತ್ತದೆ.
ಇನ್ನು 384 kmpl’ ಮೈಲೇಜ್ ನೀಡುವ ವಿಮಾನವು 189 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿರುತ್ತದೆ. ವಿಮಾನವು ಉಡ್ಡಯನ ಹಂತದಲ್ಲಿ ಬಹಳಷ್ಟು ಇಂಧನವನ್ನು ಬಳಸುತ್ತದೆ. ಆದರೆ ಇದಕ್ಕೆ ವಿರುದ್ಧವಾಗಿ, ಲ್ಯಾಂಡಿಂಗ್ ಸಮಯದಲ್ಲಿ ಇಂಜಿನ್’ಗಳು ಕಡಿಮೆ ಇಂಧನವನ್ನು ಬಳಸುತ್ತವೆ.
ವಿಮಾನದ ಇಂಧನವನ್ನು ಏರ್‌ಕ್ರಾಫ್ಟ್ ಟರ್ಬೈನ್ ಫ್ಯೂಲ್ (ATF) ಎಂದು ಕರೆಯಲಾಗುತ್ತದೆ. ವಿಮಾನಗಳಲ್ಲಿ ಅವುಗಳ ಎಂಜಿನ್ ಮಾದರಿಯ ಆಧಾರದ ಮೇಲೆ, ಅವುಗಳಲ್ಲಿ ಯಾವ ರೀತಿಯ ಇಂಧನವನ್ನು ಬಳಸಲಾಗುವುದು ಎಂದು ನಿರ್ಧರಿಸಲಾಗುತ್ತದೆ.
ಸಾಮಾನ್ಯವಾಗಿ, ವಿಮಾನಗಳಲ್ಲಿ ಎರಡು ರೀತಿಯ ಇಂಧನವನ್ನು ಬಳಸಲಾಗುತ್ತದೆ. ಈ ಇಂಧನಗಳು ಜೆಟ್ ಇಂಧನ ಮತ್ತು ಅವಿಗಾಸ್. ಜೆಟ್ ಇಂಧನವನ್ನು ಜೆಟ್ ಎಂಜಿನ್‌ಗಳಿಗೆ ಶಕ್ತಿ ತುಂಬಲು ಬಳಸಲಾಗುತ್ತದೆ. ಅವಿಗಾಸ್ ಅನ್ನು ಸಣ್ಣ ಟರ್ಬೊಪ್ರಾಪ್ ವಿಮಾನಗಳಲ್ಲಿ ಎಂಜಿನ್ ಪಿಸ್ಟನ್’ಗಳನ್ನು ಓಡಿಸಲು ಬಳಸಲಾಗುತ್ತದೆ.