ಆಹಾರಕ್ಕಾಗಿ ಬೆನ್ನತ್ತಿ ಬಂದು ಬೇಟೆ ಜೊತೆಯೇ 7 ಗಂಟೆಗಳವರೆಗೆ ಕಾಲ ಕಳೆದ ಚಿರತೆ..!
ಚಿರತೆಯೊಂದು ನಾಯಿಯನ್ನು ಬೇಟೆಯಾಡಲು ಹೋಗಿ ಬೆನ್ನಟ್ಟುತ್ತಾ ಬಂದಿದೆ. ಚಿರತೆಯಿಂದ ತನ್ನನ್ನು ರಕ್ಷಿಸಿಕೊಳ್ಳುವ ಸಲುವಾಗಿ ನಾಯಿ ಫಾರ್ಮ್ ಹೌಸಿನ ಶೌಚಾಲಯದೊಳಗೆ ಹೊಕ್ಕಿದೆ. ನಾಯಿಯನ್ನು ಬೆನ್ನಟ್ಟಿಕೊಂಡು ಬಂದ ಚಿರತೆ ಕೂಡಾ ಶೌಚಾಲದೊಳಗೆ ಹೋಗಿದೆ. ಇದನ್ನು ನೋಡಿದ ಫಾರ್ಮ್ ಹೌಸಿನ ಕೆಲಸಗಾರು ಹೊರಗಿನಿಂದ ಶೌಚಾಲಯಕ್ಕೆ ಬೀಗ ಹಾಕಿದ್ದಾರೆ.
ಇಷ್ಟಾದ ನಂತರ ಫಾರ್ಮ್ ಹೌಸಿನ ಕಾರ್ಮಿಕರು, ಶೌಚಾಲಯದೊಳಗೆ ನಾಯಿ ಮತ್ತು ಚಿರತೆಯಿರುವ ಬಗ್ಗೆ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ನಾಯಿ ಮತ್ತು ಚಿರತೆಯನ್ನು ರಕ್ಷಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಇಡೀ ಕಾರ್ಯಾಚರಣೆ ಪೂರ್ತಿಗೊಳ್ಳುವವರೆಗೆ ನಾಯಿ ಮತ್ತು ಚಿರತೆ ಸುಮಾರು 7 ಗಂಟೆಗಳ ಕಾಲ ಶೌಚಾಲಯದೊಳಗೆ ಬಂಧಿಯಾಗಿತ್ತು.
ಚಿರತೆಯನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅರಣ್ಯ ಸಿಬ್ಬಂದಿ 7 ಗಂಟೆಗಳ ಕಾಲ ಸತತ ಶ್ರಮ ವಹಿಸಿದ್ದಾರೆ. ಶೌಚಾಲಯದ ಹೊರಗಡೆ ಪಂಜರವನ್ನು ಇರಿಸಿದ್ದ ಸಿಬ್ಬಂದಿ ಸುತ್ತಲೂ ಬಲೆಯನ್ನು ಹೆಣೆದಿದ್ದರು. ಎಷ್ಟೇ ಪ್ರಯತ್ನಪಟ್ಟರೂ ಚಿರತೆ ಶೌಚಾಲಯದಿಂದ ಹೊರಬರುತ್ತಿರಲಿಲ್ಲ.
ಕೊನೆಗೆ ಅರಣ್ಯ ಸಿಬ್ಬಂದಿ ಶೌಚಾಲಯದ ಛಾವಣೆ ತೆಗೆದು ಚಿರತೆಯನ್ನುಹೊರತೆಗೆಯಲು ಯತ್ನಿಸಿದ್ದಾರೆ, ಈ ಸಂದರ್ಭದಲ್ಲಿ ಚಿರತೆ ಶೌಚಾಲಯದಿಂದ ತಪ್ಪಿಸಿಕೊಂಡು ಹೊರ ಹೋಗುವಲ್ಲಿ ಯಶಸ್ವಿಯಾಗಿದೆ. ಈ ವೇಳೆ ಯಾರಿಗೂ ಹಾನಿಯಾಗಿಲ್ಲ ಎನ್ನುವುದು ನೆಮ್ಮದಿಯ ವಿಚಾರವಾಗಿದೆ.
ಚಿರತೆ ಶೌಚಾಲಯದಿಂದ ಹೊರ ಹೋದ ನಂತರ ನಾಯಿಯನ್ನು ಕೂಡಾ ಶೌಚಾಲಯದಿಂದ ಹೊರ ತೆಗೆಯಲಾಯಿತು. ಶೌಚಾಲಯಕ್ಕೆ ಬೀಗ ಹಾಕಿದ್ದ ಕಾರಣ ಎರಡೂ ಪ್ರಾಣಿಗಳು ಭಯಭೀತಗೊಂಡಿದ್ದವು. ಈ ಕಾರಣದಿಂದ ಚಿರತೆ ಕೂಡಾ ನಾಯಿಯ ಮೇಲೆ ಹಲ್ಲೆ ನಡೆಸಿಲ್ಲ. ನಾಯಿ ಮತ್ತು ಚಿರತೆ ಎರಡೂ ಪ್ರಾಣಿಗಳು ಸುರಕ್ಷಿತವಾಗಿ ಹೊರ ಬಂದವು.