ಒಂದಲ್ಲ ಎರಡಲ್ಲ ಸಚಿನ್ ಅವರ 4 ವಿಶ್ವ ದಾಖಲೆಗಳನ್ನು ಬ್ರೇಕ್ ಮಾಡಲಿದ್ದಾರೆ ಈ 33 ವರ್ಷದ ಬ್ಯಾಟ್ಸ್‌ಮನ್!
ಇಂಗ್ಲೆಂಡ್‌ನ ದಿಗ್ಗಜ ಟೆಸ್ಟ್ ಬ್ಯಾಟ್ಸ್‌ಮನ್ ಜೋ ರೂಟ್ ಸಚಿನ್ ತೆಂಡೂಲ್ಕರ್ ಅವರ 3 ದಾಖಲೆಗಳನ್ನು ಮುರಿಯುವತ್ತ ವೇಗವಾಗಿ ಮುನ್ನುಗ್ಗುತ್ತಿದ್ದಾರೆ. ಈ ಮೂರೂ ದಾಖಲೆಗಳನ್ನು ಸಚಿನ್ ಅವರು ಟೆಸ್ಟ್ ಮಾದರಿಯಲ್ಲಿ ನಿರ್ಮಿಸಿದ್ದು, ಇದುವರೆಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ. ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವೆ ನಡೆದ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಜೋ ರೂಟ್ ಶತಕ ಗಳಿಸಿದ್ದು, ಸಚಿನ್ ದಾಖಲೆಯ ಹತ್ತಿರ ಬಂದಿದ್ದಾರೆ. ರೂಟ್ 2ನೇ ಇನ್ನಿಂಗ್ಸ್‌ನಲ್ಲಿ ಅಜೇಯ 103 ರನ್ ಗಳಿಸಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿಯೂ ಅವರು ಶತಕ (143) ಗಳಿಸಿ ಮಿಂಚಿದ್ದರು.
2ನೇ ಇನ್ನಿಂಗ್ಸ್‌ನಲ್ಲಿ ರೂಟ್ ಶತಕ ಗಳಿಸಿದ ನಂತರ ಅವರು ಟೆಸ್ಟ್ ಸ್ವರೂಪದಲ್ಲಿ ಇಂಗ್ಲೆಂಡ್ ಪರ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದು ರೂಟ್ ವೃತ್ತಿಜೀವನದ 34ನೇ ಟೆಸ್ಟ್ ಶತಕವಾಗಿದೆ. ಇದಕ್ಕೂ ಮೊದಲು ದೇಶದ ಪರ ಅತಿಹೆಚ್ಚು ಟೆಸ್ಟ್ ಶತಕಗಳನ್ನು ಗಳಿಸಿದ ದಾಖಲೆಯು ಅನುಭವಿ ಅಲೆಸ್ಟರ್ ಕುಕ್ ಹೆಸರಿನಲ್ಲಿತ್ತು. ಅವರು 33 ಶತಕಗಳನ್ನು ಗಳಿಸಿದ್ದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು 50 ರನ್ ಗಳಿಸಿದ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್. ತಮ್ಮ ಸುದೀರ್ಘ ವೃತ್ತಿ ಜೀವನದಲ್ಲಿ 68 ಬಾರಿ ಈ ಸಾಧನೆ ಮಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. 33 ವರ್ಷದ ರೂಟ್ ಇದುವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 64 ಬಾರಿ 50 ರನ್ ಗಳಿಸಿದ್ದಾರೆ. ಸಚಿನ್ ಅವರ ಈ ಶ್ರೇಷ್ಠ ದಾಖಲೆಯನ್ನು ಮುರಿಯಲು ಅವರು ಕೇವಲ 5 ಹೆಜ್ಜೆ ದೂರದಲ್ಲಿದ್ದಾರೆ. ರೂಟ್ ಅವರ ಪ್ರಸ್ತುತ ಫಾರ್ಮ್ ಅನ್ನು ಗಮನಿಸಿದರೆ, ಇದು ಅವರಿಗೆ ಅಸಾಧ್ಯವೇನಲ್ಲ.
ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ 50+ ರನ್ ಗಳಿಸಿದ ವಿಶ್ವದಾಖಲೆಯನ್ನೂ ಹೊಂದಿದ್ದಾರೆ. 200 ಪಂದ್ಯಗಳ ಅದ್ಭುತ ವೃತ್ತಿಜೀವನದಲ್ಲಿ, ಮಾಸ್ಟರ್ ಬ್ಲಾಸ್ಟರ್ ಈ ಸಾಧನೆಯನ್ನು 119 ಬಾರಿ ಮಾಡಿದ್ದಾರೆ. ರೂಟ್ ಇದುವರೆಗೆ 98 ಬಾರಿ 50+ ರನ್ ಗಳಿಸಿದ್ದಾರೆ. ಶೀಘ್ರವೇ ರೂಟ್ ಅವರು ಈ ದಾಖಲೆಯನ್ನು ಮುರಿಯಬಹುದು.
ಸಚಿನ್ ತೆಂಡೂಲ್ಕರ್ ಅತಿಹೆಚ್ಚು ಟೆಸ್ಟ್ ಶತಕ ಮತ್ತು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂದು ಎಲ್ಲರಿಗೂ ತಿಳಿದಿದೆ. ಅವರು 51 ಟೆಸ್ಟ್ ಶತಕಗಳನ್ನು ಬಾರಿಸುವ ಮೂಲಕ ವಿಶ್ವದಾಖಲೆ ಮಾಡಿದ್ದಾರೆ. ಅದೇ ರೀತಿ ಈ ಅನುಭವಿ ರೆಡ್ ಬಾಲ್ ಮಾದರಿಯಲ್ಲಿ 15,921 ರನ್ ಗಳಿಸಿದರು. ಈ ಎರಡೂ ದಾಖಲೆಗಳನ್ನು ಮುರಿಯಲು ಜೋ ರೂಟ್ ವೇಗದಲ್ಲಿ ಮುನ್ನಡೆಯುತ್ತಿದ್ದಾರೆ. ರೂಟ್ ಇದುವರೆಗೆ 34 ಟೆಸ್ಟ್ ಶತಕ ಮತ್ತು 12,377 ಟೆಸ್ಟ್ ರನ್ ಗಳಿಸಿದ್ದಾರೆ. ರೂಟ್ ಅವರ ಪ್ರಸ್ತುತ ಫಾರ್ಮ್ ಮುಂದಿನ ದಿನಗಳಲ್ಲಿಯೂ ಹೀಗೆ ಮುಂದುವರಿದರೆ ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಬಹುದು.