1000 ವರ್ಷಗಳಿಂದ ಅಡಿಪಾಯವೇ ಇಲ್ಲದೆ ನಿಂತಿರುವ ಈ ಶಿವನ ದೇವಾಲಯ ವಿಜ್ಞಾನಿಗಳಿಗೂ ಸವಾಲ್!
ಭಾರತವು ಹಲವು ಸಂಸ್ಕೃತಿಗಳ ತಾಯ್ನಾಡು. ಪ್ರಾಚೀನ ಕಾಲದಿಂದಲೂ ಭಾರತದ ಸಂಸ್ಕೃತಿಗೆ ಇಲ್ಲಿನ ದೇವಾಲಯಗಳು, ಕೋಟೆಗಳು, ಸ್ಮಾರಕಗಳು ಸಾಕ್ಷಿಯಾಗಿವೆ. ಅವುಗಳಲ್ಲಿ ಕೆಲವು ದೇವಾಲಯಗಳಂತೂ ರಹಸ್ಯಮಯವಾಗಿದ್ದು, ವಿಜ್ಞಾನಿಗಳೂ ಸಹ ಅವುಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಅಂತಹ ದೇವಾಲಯಗಳಲ್ಲಿ 1000 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಬೃಹದೀಶ್ವರ ದೇವಾಲಯವೂ ಕೂಡ ಒಂದು.
ಸ್ಥಳೀಯ ಭಾಷೆಯಲ್ಲಿ 'ಪೆರುವುಟೈಯಾರ್ ಕೋವಿಲ್' ಎಂದೂ ಕರೆಯಲ್ಪಡುವ ಬೃಹದೀಶ್ವರ/ವೃಹದೀಶ್ವರ ದೇವಾಲಯವು ತಮಿಳುನಾಡಿನ ತಂಜಾವೂರು ನಗರದಲ್ಲಿ ನೆಲೆಗೊಂಡಿದೆ. ಚೋಳ ರಾಜವಂಶದ ಮಹಾನ್ ದೊರೆ ರಾಜರಾಜ I ಈ ಶಿವನ ಮಂದಿರವನ್ನು 1003 ರಿಂದ 1010 ರ ಸುಮಾರಿಗೆ ನಿರ್ಮಿಸಿದ್ದಾನೆ ಎಂದು ಹೇಳಲಾಗುತ್ತದೆ. ಆದರೆ, ಈ ದೇವಾಲಯಕ್ಕೆ ಅಡಿಪಾಯವೇ ಇಲ್ಲ ಎಂದು ಹೇಳಲಾಗುತ್ತದೆ.
ಹೌದು, ಸುಮಾರು ಸಾವಿರ ವರ್ಷಗಳ ಹಿಂದೆ ನಿರ್ಮಾಣವಾಗಿರುವ ಈ ಶಿವನ ಮಂದಿರಕ್ಕೆ ಅಡಿಪಾಯವೇ ಇಲ್ಲ ಎಂದು ಹೇಳಲಾಗುತ್ತದೆ. ಆದಾಗ್ಯೂ, ಇದುವರೆಗೂ ಈ ದೇವಾಲಯ ಒಂದಿಂಚು ಸಹ ಅಲುಗಾಡಿಲ್ಲ. ನೋಡಲು ಪಿರಮಿಡ್ ನಂತೆ ಕಾಣುವ ಈ ದೇವಸ್ಥಾನದ ಎತ್ತರ ಸುಮಾರು 66 ಮೀಟರ್, ಇದು 15 ಅಂತಸ್ತಿನ ಕಟ್ಟಡಕ್ಕೆ ಸಮಾನವಾಗಿದೆ. ಇದರ ಪ್ರತಿ ಮಹಡಿಯೂ ಕೂಡ ಆಯತಾಕಾರದಲ್ಲಿದ್ದು, ಮಧ್ಯದಲ್ಲಿ ಟೊಳ್ಳಾಗಿರಿಸಲಾಗಿದೆ. ದೇವಸ್ಥಾನದ ನಿರ್ಮಾಣಕ್ಕೆ ಗ್ರಾನೈಟ್ ಕಲ್ಲುಗಳನ್ನು ಬಳಸಲಾಗಿದ್ದು ಇದರ ಒಟ್ಟು ತೂಕ ಸುಮಾರು 1.3 ಲಕ್ಷ ಟನ್ ಎಂದು ತಿಳಿದುಬಂದಿದೆ.
ಬೃಹದೀಶ್ವರ ದೇವಸ್ಥಾನ/ಪೆರುವುಟೈಯಾರ್ ಕೋವಿಲ್ ದೇವಸ್ಥಾನದ ನಿರ್ಮಾಣಕ್ಕೆ ಗ್ರಾನೈಟ್ ಕಲ್ಲುಗಳನ್ನು ಬಳಸಲಾಗಿದ್ದು ಇದರ ಒಟ್ಟು ತೂಕ ಸುಮಾರು 1.3 ಲಕ್ಷ ಟನ್ ಎಂದು ತಿಳಿದುಬಂದಿದೆ. ದೇವಾಲಯದ 100 ಕಿ.ಮೀ ವ್ಯಾಪ್ತಿಯಲ್ಲಿ ಗ್ರಾನೈಟ್ ಕ್ವಾರಿಯೇ ಇಲ್ಲ ಎಂದು ಹೇಳಲಾಗುತ್ತದೆ. ಆದರೆ, ಯಾವುದೇ ಆಧುನಿಕ ತಂತ್ರಜ್ಞಾನವಿಲ್ಲದಂತಹ ಆ ಕಾಲದಲ್ಲಿ ಇಷ್ಟು ತೂಕದ ಕಲ್ಲುಗಳನ್ನು ಹೇಗೆ ಸಾಗಿಸಿದರೂ ಎಂಬ ಪ್ರಶ್ನೆಗೂ ಕೂಡ ಕುತೂಹಲ ಮೂಡಿಸಿದೆ.
ಇನ್ನೊಂದು ವಿಶೇಷವೆಂದರೆ ಈ ದೇವಾಲಯ ನಿರ್ಮಾಣಕ್ಕೆ ಜೆಲ್ಲಿಕಲ್ಲು ಅಥವಾ ಸಿಮೆಂಟ್ ಅನ್ನು ಬಳಸಲಾಗಿಲ್ಲ. ಅದರ ಬದಲಿಗೆ ಕಲ್ಲುಗಳ ಚಡಿಗಳನ್ನು ಕತ್ತರಿಸಿ ಜೋಡಿಸಲಾಗಿದೆ. ಬೃಹದೀಶ್ವರ ದೇವಸ್ಥಾನ ಗುಮ್ಮಟದ ತೂಕವು ಸುಮಾರು 88 ಟನ್‌ಗಳು, ಇದು ಕೇವಲ ಏಕ ಕಲ್ಲಿನಿಂದ ಮಾಡಲ್ಪಟ್ಟಿದೆ. ಗುಮ್ಮಟದ ಮೇಲೆ ಸುಮಾರು 12 ಅಡಿ ಚಿನ್ನದ ಕಲಶವನ್ನು ಇರಿಸಲಾಗಿದೆ.
ಒಟ್ಟಾರೆಯಾಗಿ ಈ ಬೃಹದೀಶ್ವರ ದೇವಸ್ಥಾನ/ಪೆರುವುಟೈಯಾರ್ ಕೋವಿಲ್ ದೇವಸ್ಥಾನದ ಅಡಿಪಾಯವಿಲ್ಲದೆ ಹೇಗೆ ಸಾವಿರಾರು ವರ್ಷಗಳಿಂದ ಅಲುಗಾಡದೆ ನಿಂತಿದೆ, ದೇವಾಲಯದ ನಿರ್ಮಾಣದಲ್ಲಿ ಬಳಸಲಾಗಿರುವ ಗ್ರಾನೈಡ್ ಗಳನ್ನು ಆ ಕಾಲದಲ್ಲಿ ಹೇಗೆ ಸಾಗಿಸಲಾಯಿತು. ಸುಮಾರು 88 ಟನ್‌ಗಳಷ್ಟು ಭಾರವಾದ ಗುಮ್ಮಟದ ಕಲ್ಲನ್ನು ದೇವಾಲಯದ ಮೇಲಿನ ತುದಿಗೆ ಹೇಗೆ ಕೊಂಡೊಯ್ಯಲಾಗಿದೆ ಎಂಬಿತ್ಯಾದಿ ರಹಸ್ಯಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಮಾಹಿತಿಗಳನ್ನು ಕಂಡು ಹಿಡಿಯುವುದು ವಿಜ್ಞಾನಿಗಳಿಗೂ ಕೂಡ ದೊಡ್ಡ ಸವಾಲಾಗಿದೆ ಎಂತಲೇ ಹೇಳಲಾಗುತ್ತಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.