ಬೇಗ ಬೇಗನೆ ತಿನ್ನುವುದರಿಂದ ದೇಹ ತೂಕ ಹೆಚ್ಚುತ್ತದೆ..!
ನೀವು ಸಹ ತೂಕ ಇಳಿಸಿಕೊಳ್ಳಲು ಬಯಸುವುದಾದರೆ, ಆಹಾರವನ್ನು ನಿಧಾನವಾಗಿ ಜಗಿದು ತಿನ್ನಿ. ಹೀಗೆ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ದೇಹವು ಪೋಷಕಾಂಶಗಳನ್ನು ಚೆನ್ನಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ. ತಿಂದ ಆಹಾರದ ಬಗ್ಗೆ ನಮಗೂ ತೃಪ್ತಿ ಇರುತ್ತದೆ.
ಅಮೆರಿಕದ ಆರೋಗ್ಯ ವೆಬ್‌ಸೈಟ್ ಹೆಲ್ತ್ ಲೈನ್ ಡಾಟ್ ಕಾಮ್ ಪ್ರಕಾರ, ಬೇಗ ಬೇಗನೆ ಆಹಾರವನ್ನು ತಿನ್ನುವ ಜನರು ಸ್ಥೂಲಕಾಯಕ್ಕೆ ಒಳಗಾಗುತ್ತಾರೆ ಎನ್ನುವುದಕ್ಕೆ ಬಲವಾದ ಅಂಕಿಅಂಶಗಳಿವೆಯಂತೆ. 8 ವರ್ಷಗಳ ಕಾಲ ನಡೆಸಿದ ಅಧ್ಯಯನದ ಪ್ರಕಾರ, ನಿಧಾನವಾಗಿ ತಿನ್ನುವವರಿಗೆ ಹೋಲಿಸಿದರೆ, ಹೆಚ್ಚು ವೇಗವಾಗಿ ತಿನ್ನುವವರಲ್ಲಿ ದೇಹ ತೂಕ ಹೆಚ್ಚುವ ಅಪಾಯ ಜಾಸ್ತಿಯಾಗಿರುತ್ತದೆ.
ನಮ್ಮ ಹಸಿವು ಮತ್ತು ನಾವು ಎಷ್ಟು ಕ್ಯಾಲೊರಿಗಳನ್ನು ಸೇವಿಸುತ್ತೇವೆ ಎಂಬುದು ಹಾರ್ಮೋನುಗಳಿಗೆ ಸಂಬಂಧಿಸಿರುವ ವಿಚಾರವಾಗಿದೆ. ಹಸಿವನ್ನು ನಿಯಂತ್ರಿಸುವ ಘ್ರೆಲಿನ್ ಎಂಬ ಹಾರ್ಮೋನ್ ಊಟದ ನಂತರ ಕರುಳನ್ನು ನಿಗ್ರಹಿಸುತ್ತದೆ ಮತ್ತು ಹೊಟ್ಟೆಯನ್ನು ತುಂಬುವ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಈ ಪ್ರಕ್ರಿಯೆಯು 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇದರಿಂದ ನಮ್ಮ ಹೊಟ್ಟೆ ತುಂಬಿದೆ ಎಂಬ ವಿಚಾರವು ನಮ್ಮ ಮೆದುಳಿಗೆ ತಿಳಿಯುತ್ತದೆ. ಆದರೆ ಬೇಗ ಬೇಗನೆ ಅವಸರವಸರವಾಗಿ ನಾವು ತಿಂದರೆ ಹೊಟ್ಟೆ ತುಂಬಿದೆ ಎಂಬ ಮಾಹಿತಿ ಮೆದುಳಿಗೆ ತಲುಪುವುದೇ ಇಲ್ಲ. ಹೀಗಾಗಿ ನಾವು ಓವರ್ ಈಟಿಂಗ್ ಮಾಡುವ ಸಂಭವವೂ ಇರುತ್ತದೆ.
ಆಹಾರವನ್ನು ನುಂಗುವ ಮೊದಲು ನೀವು ಚೆನ್ನಾಗಿ ಅಗಿಯುವಾಗ, ಕ್ಯಾಲೊರಿಗಳ ಸೇವನೆಯು ಕಡಿಮೆಯಾಗುತ್ತದೆ ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಧಿಕ ತೂಕ ಹೊಂದಿರುವ ಜನರು ತಮ್ಮ ಆಹಾರವನ್ನು ಸರಿಯಾಗಿ ಅಗಿಯದೇ ತಿನ್ನುತ್ತಾರೆ ಎನ್ನುವುದು ಅನೇಕ ಅಧ್ಯಯನಗಳಲ್ಲಿ ಸಾಬೀತಾಗಿದೆ.
ಅಧ್ಯಯನದ ಪ್ರಕಾರ, ಪ್ರತಿ ತುತ್ತನ್ನು 30 ಸೆಕೆಂಡುಗಳ ಕಾಲ ಅಗಿದು ತಿನ್ನಬೇಕು. ಹೀಗೆ ಮಾಡಿದರೆ, ಆಹಾರದ ರುಚಿಯೂ ಸಿಗುತ್ತದೆ. ಹೊಟ್ಟೆಯೂ ತುಂಬುತ್ತದೆ. ಅಲ್ಲದೆ ಅನಾವಶ್ಯಕವಾಗಿ ಮತ್ತೆ ಮತ್ತೆ ಹಾಲು ಮೂಳು ತಿಂಡಿಗಳನ್ನು ತಿನ್ನುವ ಅವಶ್ಯಕತೆ ಇರುವುದಿಲ್ಲ. ಆದ್ದರಿಂದ, ನಿಮ್ಮ ಆಹಾರದ ತುತ್ತನ್ನು ಕನಿಷ್ಠ 15 ಸೆಕೆಂಡುಗಳ ಕಾಲ ಅಗಿಯಿರಿ ಮತ್ತು 20 ನಿಮಿಷಗಳ ಮೊದಲು ಆಹಾರವನ್ನು ತಿಂದು ಮುಗಿಸುವ ಅಭ್ಯಾಸ ಬೇಡ.