ಕಪ್ಪತ್ತಗುಡ್ಡದಲ್ಲಿ ಹೆಚ್ಚಿದ ವನ್ಯಜೀವಿಗಳ ಸಂತತಿ
ಕಪ್ಪತ್ತಗುಡ್ಡದಲ್ಲಿ ವನ್ಯ ಜೀವಿಗಳ ಸಂತತಿಯಲ್ಲಿ ಹೆಚ್ಚಳವಾಗಿದೆ ಎಂದು ಅರಣ್ಯ ಇಲಾಖೆ ತನ್ನ ಸಮೀಕ್ಷೆಯಲ್ಲಿ ಬಹಿರಂಗಪಡಿಸಿದೆ.
ಅರಣ್ಯ ಇಲಾಖೆ 2023ರ ಮೇ 07ರಿಂದ ಜುಲೈ 15ರವರೆಗೆ ಕಪ್ಪತ್ತಗುಡ್ಡ ವನ್ಯಜೀವಿಧಾಮದಲ್ಲಿ ಸರ್ವೆ ನಡೆಸಿತ್ತು.
ಸೈನ್ ಸರ್ವೆ ವಿಧಾನದಲ್ಲಿ ಕಪ್ಪತಗುಡ್ಡದಲ್ಲಿ 128 ಕಿ.ಮೀ. ಸಂಚರಿಸಿ ಸಮೀಕ್ಷೆ ನಡೆಸಲಾಗಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ಮೂರು ವಿಧಾನಗಳಿಂದ ಪ್ರಾಣಿಗಳ ಸಂತತಿ ಸಂಖ್ಯೆ, ಅವುಗಳ ನೆಲೆ ಹಾಗೂ ಆಹಾರ ಪದ್ಧತಿಯನ್ನು ಅಧ್ಯಯನ ನಡೆಸಲಾಗಿದೆ.
ಅರಣ್ಯ ಇಲಾಖೆ ಸಮೀಕ್ಷೆಯಲ್ಲಿ ಪ್ರಾಣಿಗಳ ಮಲದ ನಮೂನೆ, ಪ್ರಾಣಿಗಳು ಪರಚಿದ ಗುರುತುಗಳ ವೀಕ್ಷಣೆ, ಲೈನ್ಸ್ ಟ್ರಾನ್ಸಕ್ಟ್ ವಿಧಾನದಲ್ಲಿ ಪ್ರಾಣಿಗಳ ಸಂಚಾರ ಮಾರ್ಗವನ್ನೂ ಕೂಡ ಪರಿಶೀಲನೆ ಮಾಡಲಾಗಿದೆ.
ಕ್ಯಾಮೆರಾ ಟ್ರ್ಯಾಪ್ ವಿಧಾನದಲ್ಲಿ ಕಪ್ಪತ್ತಗುಡ್ಡದಲ್ಲಿ 98 ಕ್ಯಾಮೆರಾ ಅಳವಡಿಸಿ 30 ದಿನಗಳ ಕಾಲ ನಿರಂತರ ವೀಕ್ಷಣೆ ನಡೆಸಲಾಗಿದೆ.
ಈ ಸಮೀಕ್ಷೆಯಲ್ಲಿ ಕಪ್ಪತ್ತಗುಡ್ಡದಲ್ಲಿ ಅಪರೂಪದ ಪ್ರಾಣಿಗಳಾದ ಚಿಂಕಾರ ಹಾಗೂ ರೆಸ್ಟಿ ಸ್ಪಾಟೆಡ್ ಬೆಕ್ಕುಗಳು ಕಂಡು ಬಂದಿವೆ.
ಇದಲ್ಲದೆ, ಕತ್ತೆಕಿರುಬ, ಚಿರತೆ, ನರಿ, ತೋಳ, ಕಾಡುಬೆಕ್ಕು, ಚುಕ್ಕೆ ಜಿಂಕೆ, ಕೃಷ್ಣಮೃಗಗಳು ಕೂಡ ಪತ್ತೆಯಾಗಿವೆ.
ಅಷ್ಟೇ ಅಲ್ಲ, ಕಪ್ಪತಗುಡ್ಡದಲ್ಲಿ ನಡೆಸಿದ ಈ ಸಮೀಕ್ಷೆಯಲ್ಲಿ ಮೂರು ಜಾತಿಯ ಹುಲ್ಲೆಗಳು ಕೂಡ ಕಂಡು ಬಂದಿವೆ.
ಇದಲ್ಲದೆ, ನೂರಾರು ಜಾತಿಯ ಪ್ರಾಣಿಗಳು ಹಾಗೂ ಪಕ್ಷಿಗಳು, ಸರಿಸೃಪಗಳ ಸಂತತಿ ಹೆಚ್ಚಾಗಿರುವುದು ಕಂಡು ಬಂದಿದೆ.