ಟೆಸ್ಟ್, ODI, T20... ಎಲ್ಲಾ 3 ಸ್ವರೂಪಗಳಲ್ಲಿಯೂ ಶತಕ ಬಾರಿಸಿದ ಟೀಂ ಇಂಡಿಯಾದ ಮೊದಲ ಕ್ರಿಕೆಟಗ ಯಾರು ಗೊತ್ತೇ? ಈ ದಿಗ್ಗಜ ಪ್ರೀತಿಸಿ ಮದುವೆಯಾಗಿದ್ದು ತನ್ನ ಕೋಚ್‌ನ ಮಗಳನ್ನೇ...
ಭಾರತ ಕ್ರಿಕೆಟ್ ಇತಿಹಾಸದಲ್ಲಿ ಸುರೇಶ್ ರೈನಾ ರೀತಿಯ ಆಟಗಾರ ಸಿಗುವುದು ಕಷ್ಟವೇ. ಅನೇಕ ಸಾಧನೆಗಳ ಹೊರತಾಗಿಯೂ ಅವರ ಹೆಸರನ್ನು ವಿರಳವಾಗಿ ಉಲ್ಲೇಖಿಸಲಾಗುತ್ತಿರುವುದು ವಿಪರ್ಯಾಸ. ರೈನಾ ಭಾರತದ ಅತ್ಯಂತ ಪ್ರಸಿದ್ಧ ಕ್ರಿಕೆಟಿಗರಲ್ಲಿ ಒಬ್ಬರು. ಮುರಾದ್‌ನಗರ ಎಂಬ ಪುಟ್ಟ ಹಳ್ಳಿಯಿಂದ ಬಂದ ಈ ಪ್ರತಿಭೆ, ಅಂತರರಾಷ್ಟ್ರೀಯ ಕ್ರಿಕೆಟ್‌ನ ಭವ್ಯ ಕ್ರೀಡಾಂಗಣದಲ್ಲಿ ಅದೆಷ್ಟೋ ಪ್ರತಿಭೆಗಳಿಗೆ ಸ್ಪೂರ್ತಿಯಾಗಿದವರು.
ಉತ್ತರ ಪ್ರದೇಶದ ಮುರಾದ್‌ನಗರದಲ್ಲಿ ನವೆಂಬರ್ 27, 1986 ರಂದು ಜನಿಸಿದ ರೈನಾ ಸಾಮಾನ್ಯ ಹಿನ್ನೆಲೆಯಿಂದ ಬಂದವರು. ಅವರ ತಂದೆ ತ್ರಿಲೋಕ್ ಚಂದ್ ರೈನಾ ಸೇನಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರೆ, ತಾಯಿ ಪರ್ವೇಶ್ ರೈನಾ ಗೃಹಿಣಿಯಾಗಿದ್ದರು. ಸೀಮಿತ ಸಂಪನ್ಮೂಲಗಳ ಹೊರತಾಗಿಯೂ, ರೈನಾ ಕುಟುಂಬವು ಅವರ ಕನಸನ್ನು ಸಾಕಾರಗೊಳಿಸಲು ಸಾಕಷ್ಟು ಹೋರಾಡಿತ್ತು.
ರೈನಾಗೆ ಚಿಕ್ಕಂದಿನಿಂದಲೂ ಕ್ರಿಕೆಟ್ ಬಗ್ಗೆ ಒಲವು. ಮುರಾದ್‌ನಗರದ ಧೂಳಿನ ಮೈದಾನದಲ್ಲೇ ತಮ್ಮ ಪ್ರತಿಭೆ ಪ್ರದರ್ಶಿಸಿದವರು. ಆದರೆ ಆ ಸಮಯದಲ್ಲಿ ಅನೇಕ ಸವಾಲುಗಳನ್ನು ಸಹ ಎದುರಿಸಿದ್ದರು. ಆದರೆ ಅವೆಲ್ಲವೂ ಸುರೇಶ್ ಕನಸನ್ನು ಮಂಕಾಗಿಸಲಿಲ್ಲ, ಪ್ರಯತ್ನ ಮುಂದುವರೆಸಿದರು.
ವಯೋಮಾನದ ಕ್ರಿಕೆಟ್‌ನಲ್ಲಿ ತಮ್ಮ ಅದ್ಭುತ ಪ್ರದರ್ಶನದಿಂದ ಆಯ್ಕೆದಾರರ ಗಮನ ಸೆಳೆದಾಗ ರೈನಾ ಅವರ ಯಶಸ್ಸಿನ ಬಾಗಿಲು ಅದಾಗಲೆ ತೆರೆದಾಗಿತ್ತು. ಅವರ ಅಸಾಧಾರಣ ಪ್ರತಿಭೆ ಮತ್ತು ಪರಿಶ್ರಮವು 16ನೇ ವಯಸ್ಸಿನಲ್ಲಿ ಉತ್ತರ ಪ್ರದೇಶ ರಣಜಿ ಟ್ರೋಫಿ ತಂಡದಲ್ಲಿ ಸ್ಥಾನ ಸಿಗುವಂತೆ ಮಾಡಿತ್ತು. ಬ್ಯಾಟ್ಸ್‌ಮನ್ ಮತ್ತು ಅತ್ಯುತ್ತಮ ಬೌಲರ್ ಆಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಯಶಸ್ಸಿನ ಏಣಿ ಹತ್ತಿದ್ದರು.
ಇನ್ನು ಇವೆಲ್ಲದರ ಹೊರತಾಗಿಯೂ, ರೈನಾ ಗಾಯಗಳಿಂದಾಗಿ ಒಂದಷ್ಟು ಏರುಪೇರು ಸೇರಿದಂತೆ ಹಿನ್ನಡೆಯನ್ನು ಎದುರಿಸಿದ್ದರು. ಆದರೂ ಪ್ರತಿ ಬಾರಿಯೂ ಬಲವಾದ ಪುನರಾಗಮನವನ್ನು ಮಾಡಿ, ತಂಡಕ್ಕಾಗಿ ಅನೇಕ ಪ್ರಮುಖ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ಅಥವಾ ಐಪಿಎಲ್ ಇರಲಿ, ರೈನಾ ಎಲ್ಲೆಡೆ ಪ್ರಾಬಲ್ಯ ಮೆರೆದಿದ್ದರು.
ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ ಶತಕ ಗಳಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಇವರೇ. ಇದಲ್ಲದೆ, ಐಪಿಎಲ್‌ನಲ್ಲಿ ಅವರ ಸ್ಫೋಟಕ ದಾಖಲೆಯನ್ನು ಪರಿಗಣಿಸಿ, ಅವರನ್ನು 'ಮಿಸ್ಟರ್ ಐಪಿಎಲ್' ಎಂದೂ ಸಹ ಕರೆಯಲಾಗುತ್ತದೆ.
ಸುರೇಶ್ ಅವರು ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ (ಟೆಸ್ಟ್, ODI ಮತ್ತು T20) ಶತಕ ಗಳಿಸಿದ ಭಾರತದ ಮೊದಲ ಆಟಗಾರರಾಗಿದ್ದಾರೆ. ಅಷ್ಟೇ ಅಲ್ಲದೆ, ಟಿ20 ಕ್ರಿಕೆಟ್‌ನಲ್ಲಿ 6000 ಮತ್ತು 8000 ರನ್ ಪೂರೈಸಿದ ಮೊದಲ ಭಾರತೀಯ ಕ್ರಿಕೆಟಿಗ ಕೂಡ ಇವರೇ.
ಟಿ20 ಅಂತಾರಾಷ್ಟ್ರೀಯ ಹಾಗೂ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯಗಳಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಸುರೇಶ್ ರೈನಾ. ಇವರು ಐಪಿಎಲ್‌ನಲ್ಲಿ 5000 ರನ್ ಪೂರೈಸಿದ ಮೊದಲ ಆಟಗಾರ. ಜೊತೆಗೆ ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗೆ 4 ಬಾರಿ ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅಷ್ಟೇ ಅಲ್ಲದೆ, ಚಾಂಪಿಯನ್ಸ್ ಲೀಗ್ T20 ಪಂದ್ಯಾವಳಿಯನ್ನು ಎರಡು ಬಾರಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್‌ನ ಸದಸ್ಯರಾಗಿದ್ದರು.
ಸುರೇಶ್ ರೈನಾ 18 ಟೆಸ್ಟ್ ಪಂದ್ಯಗಳಲ್ಲಿ 26.48 ಸರಾಸರಿಯಲ್ಲಿ 768 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಒಂದು ಶತಕ ಮತ್ತು 7 ಅರ್ಧ ಶತಕಗಳು ಈ ಪಟ್ಟಿಯಲ್ಲಿ ಸೇರಿವೆ. ODI ಮಾದರಿಯಲ್ಲಿ ಭಾರತಕ್ಕಾಗಿ 226 ಪಂದ್ಯಗಳನ್ನು ಆಡಿರುವ ಅವರು, ಈ ಅವಧಿಯಲ್ಲಿ, 35.31 ರ ಸರಾಸರಿಯಲ್ಲಿ ಮತ್ತು 93.51 ರ ಸ್ಟ್ರೈಕ್ ರೇಟ್‌ನಲ್ಲಿ 5615 ರನ್ ಗಳಿಸಿದ್ದರು. ಅವರ ಹೆಸರಿನಲ್ಲಿ 5 ಶತಕ ಮತ್ತು 36 ಅರ್ಧ ಶತಕಗಳಿವೆ.
ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ, ರೈನಾ ಭಾರತದ ಪರ 78 ಪಂದ್ಯಗಳಲ್ಲಿ 29.16 ಸರಾಸರಿ ಮತ್ತು 134.79 ಸ್ಟ್ರೈಕ್ ರೇಟ್‌ನಲ್ಲಿ 1604 ರನ್ ಗಳಿಸಿದರು. ಐಪಿಎಲ್‌ನಲ್ಲಿ 205 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, 5528 ರನ್‌ಗಳನ್ನು 32.52 ಸರಾಸರಿಯಲ್ಲಿ ಮತ್ತು 136.73 ಸ್ಟ್ರೈಕ್ ರೇಟ್‌ನಲ್ಲಿ ಗಳಿಸಲಾಯಿತು.
ಇನ್ನು ಸುರೇಶ್ ರೈನಾ ಅವರ ಪತ್ನಿಯ ಹೆಸರು ಪ್ರಿಯಾಂಕಾ ಚೌಧರಿ. ಇಂಜಿನಿಯರಿಂಗ್ ಪದವಿ ಪಡೆದಿರುವ ಪ್ರಿಯಾಂಕ, ಐಟಿ ವೃತ್ತಿಪರರಾಗಿ ಕೆಲಸ ಮಾಡಿದ್ದು, ಅದಾದ ಬಳಿಕ ನೆದರ್ಲ್ಯಾಂಡ್‌ಗೆ ತೆರಳಿದ್ದರು. ಅಲ್ಲಿಂದ ಭಾರತಕ್ಕೆ ಮರಳಿ ಬಂದ ಪ್ರಿಯಾಂಕಾ, ತನ್ನ ಬಾಲ್ಯದ ಗೆಳೆಯ ಸುರೇಶ್ ರೈನಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಅಂದಹಾಗೆ ಪ್ರಿಯಾಂಕ ಅವರ ತಂದೆ, ಸುರೇಶ್ ರೈನಾಗೆ ಕ್ರಿಕೆಟ್ ಕಲಿಸಿಕೊಟ್ಟ ಗುರು.