ತಂದೆಯ ಅಂತ್ಯಸಂಸ್ಕಾರಕ್ಕೂ ಹೋಗದೇ ದೇಶಕ್ಕಾಗಿ ಕ್ರಿಕೆಟ್ ಆಡಿದ್ದ ಈತ ಇಂದು ಇಡೀ ಕ್ರಿಕೆಟ್ ಲೋಕಕ್ಕೆ ʼಅರಸʼ! ಯಾರು ಗೊತ್ತಾ ಆ ಟೀಂ ಇಂಡಿಯಾ ಕ್ರಿಕೆಟರ್?
ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವುದು ಸುಲಭದ ಮಾತಲ್ಲ. ಪಡೆದ ಅವಕಾಶವನ್ನು ಅನೇಕರು ಸದುಪಯೋಗಪಡಿಸಿಕೊಂಡರೆ, ಇನ್ನೂ ಕೆಲವರು ಅವಕಾಶ ವಂಚಿತರಾಗಿ ದೂರ ಉಳಿದಿದ್ದಾರೆ. ಆದರೆ ಇಲ್ಲೊಬ್ಬ ಕ್ರಿಕೆಟಿಗ ತನ್ನ ತಂದೆಯ ಮರಣವಾಗಿದ್ದರೂ ಸಹ, ಭಾರತಕ್ಕಾಗಿ ಕ್ರಿಕೆಟ್ ಆಡಿ, ತಂದೆಯ ಜೀವನಪರ್ಯಂತ ಶ್ರಮಕ್ಕೆ ಯಶಸ್ಸಿನ ವಿದಾಯ ಸಲ್ಲಿಸಿದ್ದರು.
ಆ ಕ್ರಿಕೆಟಿಗ ಬೇರಾರು ಅಲ್ಲ ವಿರಾಟ್ ಕೊಹ್ಲಿ. ತನ್ನ 17 ವರ್ಷ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದರು ವಿರಾಟ್. ಒಂದೊಮ್ಮೆ ಈ ವಿಚಾರದ ಬಗ್ಗೆ ಸಂದರ್ಶನವೊಂದರಲ್ಲಿ ವಿರಾಟ್ ಮನಬಿಚ್ಚಿ ಮಾತನಾಡಿದ್ದರು.
"ಆ ಸಮಯದಲ್ಲಿ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ದೆಹಲಿ ಮತ್ತು ಕರ್ನಾಟಕ ನಡುವಿನ ರಣಜಿ ಟ್ರೋಫಿ ಪಂದ್ಯವನ್ನು ಆಡುತ್ತಿದ್ದೆ. 40 ರನ್ ಗಳಿಸಿ ಅಜೇಯವಾಗಿದ್ದೆ. ಮರುದಿನ ಬ್ಯಾಟಿಂಗ್‌ಗೆ ಇಳಿಯಬೇಕಾಯಿತು. ತಂಡ ಸೋಲಿನ ಭೀತಿಯಲ್ಲಿತ್ತು. ಇಂತಹ ಪರಿಸ್ಥಿತಿಯಲ್ಲಿ ಇಡೀ ತಂಡದ ಕಣ್ಣು ನನ್ನ ಮೇಲೆ ನೆಟ್ಟಿತ್ತು. ಅಂದು ದಿನದ ಆಟ ಮುಗಿಸಿ ಹೋಟೆಲ್ ರೂಮ್ ತಲುಪಿದಾಗ ಇದ್ದಕ್ಕಿದ್ದಂತೆ ರಾತ್ರಿ 3 ಗಂಟೆಗೆ ಮನೆಯಿಂದ ಕರೆ ಬಂತು"
"ಅತ್ತ ಕಡೆಯಿಂದ, ತಂದೆ ಬ್ರೈನ್ ಸ್ಟೋಕ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಸಾಧ್ಯವಾದಷ್ಟು ಬೇಗ ಮನೆಗೆ ಬಾ ಎಂದರು. ಇದನ್ನು ಕೇಳಿ ನಾನು ತಕ್ಷಣವೇ ಮನೆಗೆ ತೆರಳಿದೆ. ಆದರೆ ಅಂತಹ ಪರಿಸ್ಥಿತಿಯಲ್ಲಿ ಕುಟುಂಬದೊಂದಿಗೆ ಇರಬೇಕೋ ಅಥವಾ ತಂಡಕ್ಕಾಗಿ ಆಡಲು ಹೋಗಬೇಕೋ ಎಂಬುದು ನನ್ನ ಮುಂದಿದ್ದ ದೊಡ್ಡ ಸವಾಲು" ಎಂದು ಭಾವುಕರಾಗಿ ಹೇಳಿದ್ದಾರೆ ಕೊಹ್ಲಿ.
"ಕೊನೆಗೂ ಆಟವಾಡಲು ನಿರ್ಧರಿಸಿದೆ. ಹೀಗಾಗಿ ಕಾರಿನಲ್ಲಿ ತೆರಳುವಾಗ, ಇಶಾಂತ್ ಶರ್ಮಾ ಕೂಡ ನನ್ನ ಜೊತೆ ಸೇರಿಕೊಂಡ. ಅಂದು ಇಶಾಂತ್ ನನ್ನ ಜೊತೆ ತಮಾಷೆ ಮಾಡುತ್ತಿದ್ದರೂ ಸುಮ್ಮನ್ನಿದ್ದೆ. ಏಕೆ ಸುಮ್ಮನಿದ್ದಿಯಾ ಎಂದು ಇಶಾಂತ್ ಕೇಳಿದಾಗ, ನಡೆದ ಘಟನೆ ಬಗ್ಗೆ ವಿವರಿಸಿದೆ. ಇದನ್ನು ಕೇಳಿದ ಇಶಾಂತ್ ಶರ್ಮಾ ಕೂಡ ಶಾಕ್ ಆದರು. ತಕ್ಷಣವೇ ಈ ಬಗ್ಗೆ ತಂಡದ ಇತರ ಸದಸ್ಯರಿಗೂ ಇಶಾಂತ್ ಮಾಹಿತಿ ನೀಡಿದ್ದರು"
ಇದಾದ ಮೇಲೆ ಎಲ್ಲರೂ ನನಗೆ ಮನೆಗೆ ಹೋಗುವಂತೆ ಸಲಹೆ ನೀಡಿದರು. ಆದರೆ ಮನೆಯ ಬದಲು ಮೈದಾನಕ್ಕೆ ಹೋಗುವುದು ಉತ್ತಮ ಎಂದು ಭಾವಿಸಿದೆ. ವಿರಾಟ್ ಮೈದಾನಕ್ಕಿಳಿದು 90 ರನ್ ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಫಾಲೋ ಆನ್ ನಿಂದ ಪಾರು ಮಾಡಿದರು. ಇದಾದ ಬಳಿಕ ವಿರಾಟ್ ಮನೆಗೆ ತೆರಳಿ ತಂದೆಯ ಅಂತ್ಯಕ್ರಿಯೆ ನೆರವೇರಿಸಿದ್ದರು.
ಅಂದು ತನ್ನ ದೇಶಕ್ಕಾಗಿ ಮತ್ತು ತಂಡಕ್ಕಾಗಿ ಮಾಡಿದ ತ್ಯಾಗ ವಿರಾಟ್ ಅವರನ್ನು ಇಂದು ಕ್ರಿಕೆಟ್ ಜಗತ್ತಿನಲ್ಲಿ ರಾಜನಂತೆ ಮೆರೆಯುವಂತೆ ಮಾಡಿದೆ. ಈ ದಿಗ್ಗಜ ತನ್ನ ಕ್ರಿಕೆಟ್ ಇತಿಹಾಸದಲ್ಲಿ ಇಂದು ಅದೆಷ್ಟೋ ದಾಖಲೆಗಳನ್ನೇ ಮಾಡಿದ್ದಾರೆ... ಮಾಡುತ್ತಿದ್ದಾರೆ.