ಬೇಸಿಗೆಯಲ್ಲಿ ಕಾಡುವ ತುರಿಕೆಯ ಸಮಸ್ಯೆಗೆ ಇಲ್ಲಿದೆ ಮನೆಮದ್ದು
ಅಲೋವೆರಾ ಜೆಲ್ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಔಷಧವಾಗಿದೆ. ಚರ್ಮದ ಸಮಸ್ಯೆಗಳಿಂದ ಪರಿಹಾರ ಪಡೆಯಲು ಅಲೋವೆರಾವನ್ನು ಆಯುರ್ವೇದ ಮತ್ತು ಮನೆಮದ್ದುಗಳಲ್ಲಿ ಬಳಸಲಾಗುತ್ತದೆ. ಅಲೋವೆರಾ ಅಥವಾ ಅಲೋವೆರಾ ಜೆಲ್ ಚರ್ಮದ ಸೋಂಕುಗಳು ಮತ್ತು ತುರಿಕೆಯಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ತುರಿಕೆಯಿಂದ ಬಳಲುತ್ತಿರುವ ಜನರು ಅಲೋವೆರಾದ ತಾಜಾ ಎಲೆಗಳಿಂದ ಜೆಲ್ ಅನ್ನು ತೆಗೆದು ಹಚ್ಚಿಕೊಳ್ಳಬಹುದು. ಇದರಿಂದ ತುರಿಕೆ ಸಮಸ್ಯೆ ಕಡಿಮೆಯಾಗುತ್ತದೆ.
ತೆಂಗಿನ ಎಣ್ಣೆ ಚರ್ಮವನ್ನು ತಂಪಾಗಿಸುವ ಮೂಲಕ ಚರ್ಮದ ಸೋಂಕುಗಳು ಮತ್ತು ಅಲರ್ಜಿಯ ಪ್ರತಿಕ್ರಿಯೆಗಳಿಂದ ಪರಿಹಾರವನ್ನು ನೀಡುತ್ತದೆ. ತೆಂಗಿನೆಣ್ಣೆಯು ಲಾರಿಕ್ ಆಸಿಡ್ ಎಂಬ ಅಂಶದಿಂದ ಸಮೃದ್ಧವಾಗಿದೆ. ಇದು ಚರ್ಮದಲ್ಲಿ ಅಡಗಿರುವ ಬ್ಯಾಕ್ಟೀರಿಯಾ ಮತ್ತು ಸೋಂಕುಗಳಿಂದ ಪರಿಹಾರ ನೀಡುತ್ತದೆ.
ಚರ್ಮಕ್ಕೆ ಪ್ರಯೋಜನಕಾರಿಯಾದ ತುಳಸಿ ಎಲೆಗಳಲ್ಲಿ ಬ್ಯಾಕ್ಟೀರಿಯಾ ನಿವಾರಕ ಅಂಶಗಳು ಕಂಡುಬರುತ್ತವೆ. ತುರಿಕೆ ಸಮಸ್ಯೆ ಇದ್ದಲ್ಲಿ ತುಳಸಿ ಎಲೆಗಳನ್ನು ಪೇಸ್ಟ್ ಮಾಡಿ ಚರ್ಮಕ್ಕೆ ಮಸಾಜ್ ಮಾಡುವುದರಿಂದ ಸ್ವಲ್ಪ ಸಮಯದ ನಂತರ ತುರಿಕೆ ಕಡಿಮೆಯಾಗುತ್ತದೆ.
ಎಲ್ಲಾ ರೀತಿಯ ಚರ್ಮದ ಸಮಸ್ಯೆಗಳಿಗೆ ಬೇವು ಉಪಯುಕ್ತವಾಗಿದೆ. ಬೇವಿನ ಎಲೆಗಳಲ್ಲಿ ಆ್ಯಂಟಿ ಫಂಗಲ್, ಆ್ಯಂಟಿ ವೈರಲ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಅಂಶಗಳಿದ್ದು, ಇದು ಬ್ಯಾಕ್ಟೀರಿಯಾ ಮತ್ತು ಸೋಂಕಿನ ಸಮಸ್ಯೆಯಿಂದ ಪರಿಹಾರ ನೀಡುತ್ತದೆ.