Rishab Shetty: ಪ್ರಶಾಂತ್ ಶೆಟ್ಟಿ ಎಂಬ ಕುಂದಾಪುರದ ಕುವರ ರಿಷಬ್ ಶೆಟ್ಟಿ ಆಗಿದ್ದು ಹೇಗೆ?
ಪ್ರಶಾಂತ್ ಶೆಟ್ಟಿ ಅಂದ್ರೆ ಯಾರಿಗೂ ಗೊತ್ತಾಗಲಿಕ್ಕಿಲ್ಲ. ಆದರೆ ರಿಷಬ್ ಶೆಟ್ಟಿ ಹೆಸರು ಇಡೀ ಭಾರತೀಯ ಸಿನಿರಂಗಕ್ಕೆ ಪರಿಚಿತವಾಗಿದೆ. ಪ್ರಶಾಂತ್ ಶೆಟ್ಟಿ ರಿಷಬ್ ಶೆಟ್ಟಿ ಅವರ ಮೂಲ ಹೆಸರು. 1983ರಲ್ಲಿ ಜುಲೈ 7 ರಂದು ಕುಂದಾಪುರದ ಕೆರಾಡಿ ಎಂಬ ಪುಟ್ಟ ಗ್ರಾಮದಲ್ಲಿಭಾಸ್ಕರ್ ಶೆಟ್ಟಿ ಹಾಗೂ ರತ್ನಾವತಿ ಶೆಟ್ಟಿ ಎಂಬ ದಂಪತಿಗೆ ಮಗನೊಬ್ಬ ಜನಿಸಿದ. ಮಧ್ಯಮ ವರ್ಗದಲ್ಲಿ ಹುಟ್ಟಿದ ಪ್ರಶಾಂತ್ ಶೆಟ್ಟಿಯೇ ಈ ದಂಪತಿಯ ಕೊನೆಯ ಮಗ.
ಕಲೆಯಲ್ಲಿ ನಿಪುಣರಾಗಿರುವ ರಿಷಬ್, 5 ನೇ ತರಗತಿ ಫೇಲ್ ಆಗಿದ್ದರಂತೆ. ತುಂಟಾಟ, ಬಡತನ, ಕಂಬಳ, ಕೋಲ ಇತ್ಯಾದಿ ತುಳುನಾಡ ಸಿರಿಯಲ್ಲೇ ಪ್ರಶಾಂತ್ ಎಂಬ ಶೆಟ್ರು ಹುಡಗನ ಬಾಲ್ಯ ಕಳೆಯಿತು.
ಬಾಲ್ಯದಿಂದಲೂ ಡಾ. ರಾಜ್‌ಕುಮಾರ್ ಎಂದರೆ ಅಭಿಮಾನ. ಅಣ್ಣಾವ್ರ ಸಿನಿಮಾಗಳನ್ನ ನೋಡುತ್ತ ಬೆಳೆದ ಪ್ರಶಾಂತ್ ಅವರಿಗೆ ಕುಂದಾಪುರದವರೇ ಆಗಿರುವ ಉಪೇಂದ್ರ ಅಚ್ಚುಮೆಚ್ಚಂತೆ. ಹೀಗೆ ಅವರ ಬಾಲ್ಯದಲ್ಲಿಯೇ ಸಿನಿಮಾ ಬಗ್ಗೆ ಕೊಂಚ ಒಲವಿತ್ತು.
ಕಾಲೇಜು ದಿನಗಳಲ್ಲಿ ಅಕ್ಕನೊಂದಿಗೆ ಬೆಂಗಳೂರಿಗೆ ಶಿಫ್ಟ್ ಆದ ಪ್ರಶಾಂತ್, ವಿಲ್ಸನ್ ಗಾರ್ಡನ್ ಬಳಿ ಮನೆ ಮಾಡಿಕೊಂಡಿದ್ದರಂತೆ. ಕೆಆರ್‌ಪುರಂ ನಲ್ಲಿ ಕೆಲಸ ಮಾಡುತ್ತಿದ್ದ ಅಕ್ಕನನ್ನು ಬೆಳಗ್ಗೆ ಬೈಕ್‌ನಲ್ಲಿ ಆಫೀಸ್‌ಗೆ ಬಿಟ್ಟು, ಅಲ್ಲಿಂದ ಹೇಸರಘಟ್ಟದಲ್ಲಿರುವ ಸಿನಿಮಾ ಇನ್ಸ್‌ಸ್ಟಿಟ್ಯೂಟ್‌ಗೆ ಹೋಗುತ್ತಿದ್ದರಂತೆ. ತಮ್ಮ ಸಿನಿಮಾ ಕ್ಲಾಸ್ ಮುಗಿಸಿ, ಸಂಜೆ ಅಕ್ಕನನ್ನು ಮರಳಿ ಆಫೀಸ್‌ನಿಂದ ಕರೆದುಕೊಂಡು ಬರುತ್ತಿದ್ದರಂತೆ.
ಜೀವನೋಪಾಯಕ್ಕಾಗಿ ಮನೆ ಮನೆಗೆ ವಾಟರ್ ಬಾಟಲಿ ಸಪ್ಲೈ ಮಾಡುತ್ತಿದ್ದರಂತೆ. ವಾಟರ್ ಸಪ್ಲೈ ಕೆಲಸ ಮಧ್ಯ ರಾತ್ರಿವರೆಗೂ ನಡೆಯುತ್ತಿತ್ತು. ಸೈನೈಡ್, ಗಂಡ ಹೆಂಡತಿ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಕ್ಲಾಪ್ ಬಾಯ್ ಆಗಿ, ಇತರೇ ಸಹಾಯಕ ಕೆಲಸಗಾರನಾಗಿ ರಿಷಬ್ ಶೆಟ್ಟಿ ದುಡಿದಿದ್ದಾರೆ.
ನಾಟಕ, ಶಾರ್ಟ್ ಮೂವಿ, ಸಿನಿಮಾಗಳಲ್ಲೆಲ್ಲ ಪ್ರಶಾಂತ್ ಶೆಟ್ಟಿ ಆಗಾಗ್ಗೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ ಅದ್ಯಾವುದೂ ಒಲಿಯಲಿಲ್ಲ. ನಟನಾಗಬೇಕು ಎಂದು ಬಂದವರು, ಬಣ್ಣದ ಲೋಕದಲ್ಲಿ ಅವಕಾಶಕ್ಕಾಗಿ ಅಲೆದಾಡಿ ಚಪ್ಪಲಿ ಸವೆಸಿಕೊಂಡಿದ್ದಾರೆ. ಕೆಲವು ಸಿನಿಮಾಗಳಲ್ಲಿ ನಟನಾಗುವ ಅವಕಾಶ ಸಿಕ್ಕರೂ ಮುಹೂರ್ತಕ್ಕೂ ಮುನ್ನವೇ ಪ್ರಾಜೈಕ್ಟ್ ಡ್ರಾಪ್ ಆಗುತ್ತಿತ್ತಂತೆ. ಹೀಗೆ ಕುಗ್ಗಿದಗಲೆಲ್ಲ ಪ್ರಶಾಂತ್ ಗೆ ಆತ್ಮಸ್ಥೈರ್ಯ ತುಂಬುತ್ತಿದ್ದವರು ತಂದೆ.
ಎಷ್ಟೇ ಪ್ರಯತ್ನ ಪಟ್ಟರೂ ಯಾವುದೂ ಕೈ ಹಿಡಿಯದಿದ್ದಾಗ ಜ್ಯೋತಿಷ್ಯದಲ್ಲಿ ನಿಪುಣರಾಗಿದ್ದ ತಂದೆ ಭಾಸ್ಕರ್ ಶೆಟ್ಟಿ ಅವರ ಸಲಹೆಯಂತೆ ಹೆಸರು ಬದಲಿಸಲು ನಿರ್ಧರಿಸಿದರು. ಆ ಕಾಲದಲ್ಲಿ ರಾಜ್‌ಕುಮಾರ್, ರಜಿನಿಕಾಂತ್ ಅವರಂತೆ R ಅಕ್ಷರದಿಂದ ಹೆಸರು ಇಟ್ಟುಕೊಳ್ಳುವಂತೆ ತಂದೆ ತಿಳಿಸಿದಾಗ, ಹೊಳೆದಿದ್ದೆ ರಿಷಬ್ ಹೆಸರು. ಅಂದಿನಿಂದ ಅವರ ಹೆಸರು ರಿಷಬ್ ಶೆಟ್ಟಿ ಎಂದು ಬದಲಾಯಿತು.
2016ರಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಹರಿಪ್ರಿಯಾ ಅಭಿನಯದ ರಿಕ್ಕಿ ಎಂಬ ಸಿನಿಮಾಗೆ ರಿಷಬ್ ಶೆಟ್ಟಿ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದರು. ರಿಕ್ಕಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡದಿದ್ದರೂ, ವಿಮರ್ಶಕರ ಪ್ರಶಂಸೆಗೆ ಪಾತ್ರವಾಯಿತು. ನಂತರ ಬಂದ ಕಿರಿಕ್ ಪಾರ್ಟಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿತು. ಇದರಿಂದ ರಿಷಬ್ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿದರು. ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಡಿ ನ್ಯಾಷನಲ್ ಅವಾರ್ಡ್ ಪಡೆದರು. ಬೆಲ್ ಬಾಟಂ ನಿಂದ ಸಿನಿಪ್ರಿಯರ ಮನಗೆದ್ದರು. ಇದೀಗ ಕಾಂತಾರ ಸಿನಿಮಾ ಮೂಲಕ ರಿಷಬ್ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ.