ಗೃಹಲಕ್ಷ್ಮಿ ಯೋಜನೆ: ಮಹಿಳೆಯರಿಗೆ ಶಾಕ್! 2 ಲಕ್ಷ ಮಹಿಳೆಯರಿಗಿಲ್ಲ ಹಣ, ನಿಮ್ಮ ಹೆಸರೂ ಇದ್ಯಾ?
ಎರಡ್ಮೂರು ತಿಂಗಳಿಂದ ಗೃಹಲಕ್ಷ್ಮೀ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಪಾವತಿಯಾಗಿಲ್ಲ. ಏಕೆ ತಡವಾಗುತ್ತಿರಬಹುದು ಎಂಬ ಕುರಿತು ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಅದರ ನಡುವೆ ಈಗ ಈ ಮಹತ್ವದ ಯೋಜನೆಯಿಂದ 2 ಲಕ್ಷಕ್ಕೂ ಹೆಚ್ಚು ಮಹಿಳೆಯರ ಹೆಸರನ್ನು ಕೈಬಿಡಲಾಗುತ್ತದೆ ಎಂಬ ವಿಷಯ ಕೇಳಿಬರುತ್ತಿದೆ.
ಗ್ರಾಮೀಣ ಮಹಿಳೆಯರ, ಮನೆ ಕೆಲಸದಲ್ಲೇ ನಿರತರಾಗಿದ್ದವರ, ಹಣಕ್ಕಾಗಿ ಪುರುಷರ ಮೇಲೆ ಅವಲಂಬಿತವಾಗಿದ್ದ ಮಹಿಳೆಯರ ಗೃಹಲಕ್ಷ್ಮೀ ಯೋಜನೆಯ ಹಣಕ್ಕೆ ಕತ್ತರಿ ಹಾಕುತ್ತಿರುವುದು ರಾಜ್ಯ ಸರ್ಕಾರವಲ್ಲ, ಆದಾಯ ತೆರಿಗೆ ಇಲಾಖೆ.
ಸುಮಾರು 2 ಲಕ್ಷ ಮಹಿಳೆಯರು ಇಲ್ಲಿಯವರೆಗೆ ಗೃಹಲಕ್ಷ್ಮಿ ಯೋಜನೆಯಿಂದ ಎಷ್ಟು ಹಣ ಪಡೆದ್ದಿದ್ದಾರೋ ಅದೇ ಅವರ ಪಾಲಿಗೆ 'ಪಂಚಾಮೃತ'. ಇದೀಗ ಆದಾಯ ತೆರಿಗೆ ಹಾಗೂ ಜಿಎಸ್‌ಟಿ ಸಂಖ್ಯೆ ಹೊಂದಿರುವ ಮಹಿಳೆಯರನ್ನು ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಪಟ್ಟಿಯಿಂದ ಕೈಬಿಡಲಾಗುತ್ತದೆ.
ಈಗಾಗಲೇ ಐಟಿ - ಜಿಎಸ್‌ಟಿ ಪಾವತಿದಾರರ ಪಟ್ಟಿ ಸಿದ್ಧವಾಗಿದ್ದು ಅದರ ಪ್ರಕಾರ 2 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ.
ರಾಜ್ಯದಲ್ಲಿ 1.28 ಕೋಟಿ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿದ್ದಾರೆ. ಇದರಲ್ಲಿ ಸುಮಾರು 2 ಲಕ್ಷ ಮಹಿಳೆಯರು ಆದಾಯ ತೆರಿಗೆ ಪಾವತಿಸುತ್ತಿದ್ದಾರೆ ಮತ್ತು ಕೆಲವರು ಕೆಲವು ವ್ಯವಹಾರಗಳನ್ನು ಮಾಡುತ್ತಾ ಜಿಎಸ್‌ಟಿ ಪಾವತಿ ಸಂಖ್ಯೆಯನ್ನು ಹೊಂದಿದ್ದಾರೆ. ಅಂತಹ ಮಹಿಳೆಯರನ್ನು ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಪಟ್ಟಿಯಿಂದ ಕೈಬಿಡಲಾಗಿದೆ.
ಅರ್ಹರಿಗೆ ಮಾತ್ರವೇ ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯವಾಗಬೇಕು ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗಿದೆ ಎನ್ನಲಾಗುತ್ತಿದೆ.
ಐಟಿ ಮತ್ತು ಜಿಎಸ್‌ಟಿ ಪಾವತಿದಾರ ಮಹಿಳೆಯರು ತಮಗೆ ಗೃಹಲಕ್ಷ್ಮೀ ಯೋಜನೆಯ ಹಣ ಬಂದಿಲ್ಲವೆಂದು ಅಲೆದಾಡುವುದು ಬೇಡ. ನಿಮಗೆ ಗೃಹಲಕ್ಷ್ಮೀ ಯೋಜನೆ ಸೌಲಭ್ಯ ಸಿಗುವುದಿಲ್ಲ ಎಂದು ಅಧಿಕೃತವಾಗಿ ಹಿಂಬರಹ ನೀಡಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
2-3 ತಿಂಗಳಿಂದ ಗೃಹಲಕ್ಷ್ಮೀ ಯೋಜನೆಯ ಹಣ ಪಾವತಿಯಾಗಿಲ್ಲದಿದ್ದರೆ ಇವತ್ತು - ನಾಳೆ ಹಣ ಬರಬಹುದು ಎಂದು ನಿರೀಕ್ಷೆ ಇಟ್ಟುಕೊಳ್ಳುವುದು ಬೇಡ. ಬ್ಯಾಂಕ್‌ಗಳಿಗೆ ಪದೇಪದೆ ಅಲೆಯುವುದು ಬೇಡ. ಸ್ಥಳೀಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಾಲಯದಲ್ಲಿ ವಿಚಾರಿಸಿ.
ಆಧಾರ್ ಲಿಂಕ್, ಬ್ಯಾಂಕ್ ಖಾತೆ ಜೋಡಣೆ ಮೊದಲಾದ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆ ಕಾರಣದಿಂದ ಯೋಜನೆ ಹಣ ಬರದಿದ್ದರೆ ಅಪ್‌ಡೇಟ್ ಮಾಡಿಸಿಕೊಂಡ ಹಾಗೂ ಸಮಸ್ಯೆ ಬಗೆಹರಿದ ಕೂಡಲೇ ಅರ್ಹ ಫಾಲಾನುಭವಿಗಳ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗಲಿದೆ.