ಚುನಾವಣಾ ಅಕ್ರಮ: 27,38 ಕೋಟಿ ನಗದು, ಚಿನ್ನ, ಮದ್ಯ, ವಸ್ತುಗಳು ಮತ್ತು ಡ್ರಗ್ಸ್ ವಶ!
ರಾಜ್ಯದಲ್ಲಿ ಚುನಾವಣಾ ನೀತಿಸಂಹಿತೆ ಜಾರಿಯಾದ ದಿನದಿಂದ ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಕೋಟಿ ಕೋಟಿ ಮೌಲ್ಯದ ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ವಾರ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 27.38 ಕೋಟಿ ರೂ. ನಗದು, 26.38 ಕೋಟಿ ರೂ. ಮೌಲ್ಯದ ಮದ್ಯ, 87.8 ಲಕ್ಷ ರೂ. ಮೌಲ್ಯದ ಡ್ರಗ್ಸ್, 9.87 ಕೋಟಿ ರೂ. ಮೌಲ್ಯದ 25.24 ಕೆಜಿ ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿವೆ ಎಂದು ಚುನಾವಣಾ ಆಯೋಗದ ಬುಲೆಟಿನ್ ತಿಳಿಸಿದೆ.
ಗುರುವಾರ ನಿಪ್ಪಾಣಿ, ಭದ್ರಾವತಿ, ಗದಗ ಮತ್ತು ನರಗುಂದದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 4.45 ಕೋಟಿ ರೂ. ನಗದು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಇದಲ್ಲದೇ ಸುಮಾರು 1.89 ಕೋಟಿ ರೂ. ಮೌಲ್ಯದ 62,826 ಲೀಟರ್ ಮದ್ಯವನ್ನು ಅಬಕಾರಿ ಇಲಾಖೆ ಜಪ್ತಿ ಮಾಡಿದೆ. ಚುನಾವಣಾ ಅಕ್ರಮಗಳಲ್ಲಿ ಭಾಗಿಯಾದ ಆರೋಪದಡಿ ನೂರಾರು ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ
ಧಾರವಾಡ ಜಿಲ್ಲೆಯಲ್ಲಿ ಸ್ಟಾಟಿಕ್ ಸರ್ವೆಲೆನ್ಸ್ ತಂಡವು ಸುಮಾರು 45 ಲಕ್ಷ ರೂ. ಮೌಲ್ಯದ 725 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡರೆ, ಫ್ಲೈಯಿಂಗ್ ಸ್ಕ್ವಾಡ್ ತಂಡವು ಬೆಂಗಳೂರು ನಗರದ ಬ್ಯಾಟರಾಯನಪುರ ಕ್ಷೇತ್ರದಲ್ಲಿ 34 ಲಕ್ಷಕ್ಕೂ ಹೆಚ್ಚು ಮೌಲ್ಯದ ಉಚಿತ ವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ.