ಪಾಕ್’ಗೆ ಸಿಂಹಸ್ವಪ್ನವಾಗಿ ಕಾಡಿದ USA ಕ್ರಿಕೆಟಿಗ ಸೌರಭ್ ಯಾರು ಗೊತ್ತಾ? ಈತ ಟೀಂ ಇಂಡಿಯಾದ ಮಾಜಿ ಪ್ಲೇಯರ್.. KL ರಾಹುಲ್ ಸಹ ಆಟಗಾರನೂ!
2024ರ ಟಿ20 ವಿಶ್ವಕಪ್‌ನ 11ನೇ ಪಂದ್ಯದಲ್ಲಿ ಆತಿಥೇಯ ಅಮೇರಿಕಾ, ಪಾಕ್ ವಿರುದ್ಧ ಗೆಲುವಿನ ಶುಭಾರಂಭ ಮಾಡಿದೆ.
ಈ ಪಂದ್ಯದಲ್ಲಿ ಮೊನಾಂಕ್ ಪಟೇಲ್ ನೇತೃತ್ವದ ಅಮೆರಿಕ ಕ್ರಿಕೆಟ್ ತಂಡ ಸೂಪರ್ ಓವರ್’ನಲ್ಲಿ ಪಾಕಿಸ್ತಾನವನ್ನು 5 ರನ್‌ಗಳಿಂದ ಸೋಲಿಸಿತು. ಅಂದಹಾಗೆ ಸೌರಭ್ ನೇತ್ರವಾಲ್ಕರ್ ಅಮೆರಿಕದ ಗೆಲುವಿನ ಹೀರೋ ಆಗಿ ಹೊರಹೊಮ್ಮಿದರು.
ಸೂಪರ್ ಓವರ್’ನಲ್ಲಿ ಪಾಕಿಸ್ತಾನದ ಗೆಲುವಿಗೆ 19 ರನ್’ಗಳ ಅಗತ್ಯವಿತ್ತು, ಆದರೆ ಬಲಿಷ್ಠ ಬ್ಯಾಟ್ಸ್‌ಮನ್‌ಗಳಿಂದ ತುಂಬಿದ್ದ ಪಾಕಿಸ್ತಾನ ತಂಡಕ್ಕೆ ಈ ಗುರಿ ತಲುಪಲು ಸೌರಭ್ ನೇತ್ರವಾಲ್ಕರ್ ಅವಕಾಶ ನೀಡಲಿಲ್ಲ. ಸೌರಭ್ ನೇತ್ರವಲ್ಕರ್ ಸೂಪರ್ ಓವರ್‌ನಲ್ಲಿ 13 ರನ್ ನೀಡಿ ಇಫ್ತಿಕರ್ ಅಹ್ಮದ್ ವಿಕೆಟ್ ಪಡೆದರು.
ಸೌರಭ್ ಅವರ ಮೊದಲ ಎಸೆತವೇ ಡಾಟ್ ಆಗಿತ್ತು. ಎರಡನೆಯದು ವೈಡ್, ಮುಂದಿನ ಎಸೆತದಲ್ಲಿ ಇಫ್ತಿಕರ್ ವಿಕೆಟ್ ಪಡೆದರು. ಮೂರನೇ ಎಸೆತ ಕೂಡ ವೈಡ್ ಆಗಿತ್ತು. ಮುಂದಿನ ಎಸೆತದಲ್ಲಿ ಶಾದಾಬ್ ಖಾನ್ ಲೆಗ್-ಬೈನಿಂದ 4 ರನ್ ಗಳಿಸಿದರು. ಐದನೇ ಎಸೆತದಲ್ಲಿ ಶಾದಾಬ್ 2 ರನ್ ಗಳಿಸಿದರು.
ಕೊನೆಯ ಎಸೆತದಲ್ಲಿ ಪಾಕಿಸ್ತಾನ ಗೆಲ್ಲಲು 7 ರನ್‌ಗಳ ಅಗತ್ಯವಿತ್ತು, ಆದರೆ ಶಾದಾಬ್ ಕೇವಲ ಒಂದು ರನ್ ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಯಾರೊಬ್ಬರೂ ನಿರೀಕ್ಷಿಸದಿದ್ದನ್ನು ಅಮೆರಿಕ ಮಾಡಿದೆ.
ಅಮೆರಿಕದ ಐತಿಹಾಸಿಕ ವಿಜಯದ ನಂತರ, ಸೌರಭ್ ನೇತ್ರವಾಲ್ಕರ್ ಸದ್ಯ ಸುದ್ದಿಯಲ್ಲಿದ್ದಾರೆ. ಅಂದಹಾಗೆ ಇವರು ಜನಿಸಿದ್ದು ಮುಂಬೈನಲ್ಲಿ. ಅಷ್ಟೇ ಅಲ್ಲದೆ, ಐಸಿಸಿ ಅಂಡರ್-19 ವಿಶ್ವಕಪ್’ನಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸಿದ್ದಾರೆ.
ಎಡಗೈ ವೇಗದ ಬೌಲರ್ ಸೌರಭ್ ನೇತ್ರವಾಲ್ಕರ್ 16 ಅಕ್ಟೋಬರ್ 1991 ರಂದು ಮುಂಬೈನಲ್ಲಿ ಜನಿಸಿದರು. 2010 ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್’ನಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಅದಾದ ಬಳಿಕ ಸೌರಭ್ 2013ರಲ್ಲಿ ಕರ್ನಾಟಕ ವಿರುದ್ಧದ ಏಕೈಕ ರಣಜಿ ಪಂದ್ಯದಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದರು. KL ರಾಹುಲ್, ಮಯಾಂಕ್ ಅಗರ್ವಾಲ್, ಹರ್ಷಲ್ ಅವರ ಮಾಜಿ ಸಹ ಆಟಗಾರ ಕೂಡ ಹೌದು.
ಭಾರತದಲ್ಲಿ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಲು ಅವಕಾಶ ಸಿಗಲಿಲ್ಲ ಎಂಬ ಕಾರಣಕ್ಕೆ 2015 ರಲ್ಲಿ ಸೌರಭ್ ಯುಎಸ್ಎಗೆ ತೆರಳಿದರು. ಸುಮಾರು 9 ವರ್ಷಗಳ ನಂತರ ಸೌರಭ್ ನೇತ್ರವಾಲ್ಕರ್ ಅಮೇರಿಕನ್ ತಂಡದಲ್ಲಿ ಸ್ಥಾನ ಪಡೆದರು. ಅದಾದ ಬಳಿಕ ಫೆಬ್ರವರಿ 2019 ರಲ್ಲಿ ನಾಯಕರಾಗಿ ಆಯ್ಕೆಯಾದರು.
ಸೌರಭ್ 2022 ರಲ್ಲಿ ಜಿಂಬಾಬ್ವೆಯಲ್ಲಿ ನಡೆದ ICC ಪುರುಷರ T20 ವಿಶ್ವಕಪ್ ಗ್ಲೋಬಲ್ ಕ್ವಾಲಿಫೈಯರ್ B ಪಂದ್ಯಾವಳಿಯಲ್ಲಿ ಭಾಗವಹಿಸಿದರು. ಆ ಪಂದ್ಯಾವಳಿಯ 1 ಪಂದ್ಯದಲ್ಲಿ 5 ವಿಕೆಟ್ ಪಡೆದರು. ಟ್ವೆಂಟಿ-20 ಕ್ರಿಕೆಟ್’ನಲ್ಲಿ 5 ವಿಕೆಟ್ ಪಡೆದ ಮೊದಲ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸೌರಭ್ ಪ್ರತಿಭಾವಂತ ಸಾಫ್ಟ್‌ವೇರ್ ಇಂಜಿನಿಯರ್ ಕೂಡ ಹೌದು. ಅವರು ಒರಾಕಲ್’ನಲ್ಲಿ ಪ್ರಧಾನ ಇಂಜಿನಿಯರ್ ಆಗಿ ಕೆಲಸ ಮಾಡುತ್ತಾರೆ.