ಬೆಕ್ಕಿನಂತೆ ಕಾಣುತ್ತೆ ಬೆಕ್ಕಲ್ಲ.. ಈ ಕಾಡುಪ್ರಾಣಿಯ ಮಲದಿಂದ ತಯಾರಾಗುತ್ತೆ ಜಗತ್ತಿನ ಅತಿ ದುಬಾರಿ ಕಾಫಿ! ಯಾವುದು ಆ ಪ್ರಾಣಿ?
ಅನೇಕ ಜನರು ತಮ್ಮ ದಿನವನ್ನು ಕಾಫಿಯೊಂದಿಗೆ ಪ್ರಾರಂಭಿಸುತ್ತಾರೆ. ಕೆಲವರಿಗೆ ಕಾಫಿ ಚಟ ಎಷ್ಟಿದೆ ಎಂದರೆ, ಇದರ ಚಟಕ್ಕೆ ಬಿದ್ದವರು ಒಂದು ಕಪ್ ಕಾಫಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಲು ಸಿದ್ಧರಿರುತ್ತಾರೆ.
ಆದರೆ ವಿಶ್ವದ ಅತ್ಯಂತ ರುಚಿಕರವಾದ ಕಾಫಿ ಯಾವುದು ಗೊತ್ತಾ? ಇದು ಬಲು ದುಬಾರಿ, ಜೊತೆಗೆ ಇದರ ತಯಾರಿ ಬಗೆಯನ್ನು ಕಂಡರೆ, ಕುಡಿಯೋದು ಭಾರೀ ಕಷ್ಟ. ವಿಶ್ವದ ಅತ್ಯಂತ ರುಚಿಕರವಾದ ಮತ್ತು ದುಬಾರಿ ಕಾಫಿಯ ಬಗ್ಗೆ ನಾವು ಇಂದು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.
'ಕೋಪಿ ಲುವಾಕ್' ವಿಶ್ವದ ಅತ್ಯಂತ ದುಬಾರಿ ಕಾಫಿಯ ಹೆಸರು. ಇದನ್ನು ಸಿವೆಟ್ ಕಾಫಿ ಎಂದೂ ಸಹ ಕರೆಯಲಾಗುತ್ತದೆ. ಇದನ್ನು ಸಿವೆಟ್ ಅಥವಾ ಪುನುಗು ಬೆಕ್ಕಿನ ಮಲದಿಂದ ತಯಾರಿಸಲಾಗುತ್ತದೆ.
ಅನೇಕರು ಒಂದು ಕಪ್ ಸಿವೆಟ್ ಕಾಫಿಗೆ ಸಾವಿರಾರು ರೂ. ಖರ್ಚು ಮಾಡಿ ಬಹಳ ಸಂತೋಷದಿಂದ ಕುಡಿಯುತ್ತಾರೆ. ಏಕೆಂದರೆ ಇದು ರುಚಿಕರವಾಗಿರುವುದರ ಜೊತೆಗೆ ತುಂಬಾ ಪೌಷ್ಟಿಕಯುತವಾಗಿದೆ.
ಪ್ರಾಣಿಗಳ ಮಲದಲ್ಲಿ ಪೌಷ್ಟಿಕಾಂಶ ಹೇಗೆ ಇರುತ್ತದೆ ಎಂದು ನೀವು ಆಶ್ಚರ್ಯ ಪಡುತ್ತಿರಬೇಕು? ಹಾಗಾದರೆ ಇದಕ್ಕೆ ಉತ್ತರ ತಿಳಿಯಬೇಕಾದರೆ ‘ಕೋಪಿ ಲುವಾಕ್’ ಮಾಡುವ ವಿಧಾನವನ್ನು ಅರ್ಥ ಮಾಡಿಕೊಳ್ಳಬೇಕು.
ಸಿವೆಟ್ ಬೆಕ್ಕುಗಳು ಕಾಫಿ ಬೀಜಗಳನ್ನು ತಿನ್ನಲು ಇಷ್ಟಪಡುತ್ತವೆ. ಆದರೆ ಬೆಕ್ಕುಗಳು ಚೆರ್ರಿ ತಿರುಳನ್ನು ಸಂಪೂರ್ಣವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವುಗಳ ಕರುಳುಗಳು ಇದಕ್ಕೆ ಜೀರ್ಣಕಾರಿ ಕಿಣ್ವಗಳನ್ನು ಹೊಂದಿಲ್ಲ. ಹೀಗಾಗಿ, ಕಾಫಿಯ ಆ ಭಾಗವು ಬೆಕ್ಕಿನ ಮಲದೊಂದಿಗೆ ಹೊರಬರುತ್ತದೆ. ನಂತರ ಅದನ್ನು ಶುದ್ಧೀಕರಿಸಲಾಗುತ್ತದೆ.
ಎಲ್ಲಾ ರೀತಿಯ ಸೂಕ್ಷ್ಮಜೀವಿಗಳಿಂದ ಮುಕ್ತಗೊಳಿಸಿದ ನಂತರ ಮತ್ತಷ್ಟು ಸಂಸ್ಕರಣೆ ನಡೆಯುತ್ತದೆ. ಆ ಬೀಜಗಳನ್ನು ತೊಳೆದು ಹುರಿದ ನಂತರ ಕಾಫಿ ಸಿದ್ಧವಾಗುತ್ತದೆ.
ಈ ಕಾಫಿಯನ್ನು ಭಾರತದಲ್ಲಿ ಕರ್ನಾಟಕ (ಕೊಡಗು) ಜಿಲ್ಲೆಯಲ್ಲಿ ತಯಾರಿಸಲಾಗುತ್ತದೆ. ಏಷ್ಯಾದ ದೇಶಗಳಲ್ಲಿ, ಇಂಡೋನೇಷ್ಯಾದಲ್ಲಿ ಇದನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ. ಈ ಕಾಫಿ ಕೆಜಿಗೆ 20 ರಿಂದ 25 ಸಾವಿರ ರೂ. ಇದೆ.
ಅಮೆರಿಕದಲ್ಲಿ ಇದರ ಒಂದು ಕಪ್’ಗೆ ಸುಮಾರು 6 ಸಾವಿರ ರೂಪಾಯಿ ಇದೆ. ವಿಶೇಷವೆಂದರೆ ಸೌದಿ ಅರೇಬಿಯಾ, ದುಬೈ, ಅಮೆರಿಕ, ಯುರೋಪ್ ಮೊದಲಾದ ದೇಶಗಳಲ್ಲಿ ಸಿವೆಟ್ ಕಾಫಿಗೆ ಹೆಚ್ಚಿನ ಬೇಡಿಕೆ ಇದೆ.