PHOTOS: ಭಾರೀ ಮಳೆಗೆ ತತ್ತರಿಸಿದ ಮುಂಬೈ, ಪೊಲೀಸ್ ಠಾಣೆ ಒಳಗೂ ನುಗ್ಗಿದ ನೀರು
ಮುಂಬೈನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜನಸಾಮಾನ್ಯರು ಮಾತ್ರವಲ್ಲ, ಪೊಲೀಸರು ಕೂಡ ಪರದಾಡುವಂತಾಗಿದೆ. ಮುಂಬೈನ ಸಾಂತಾ ಕ್ರೂಜ್ ಪ್ರದೇಶದಲ್ಲಿ ಇರುವ ವಕೋಲಾ ಪೊಲೀಸ್ ಠಾಣೆಯಲ್ಲಿ ನೀರು ತುಂಬಿದೆ.
ಪೊಲೀಸ್ ಠಾಣೆ ನೀರಿನಲ್ಲಿ ಮುಳುಗುತ್ತಿರುವ ಹಿನ್ನೆಲೆಯಲ್ಲಿ ಅನೇಕ ಕಡತ(ಫೈಲ್)ಗಳು ನಾಶವಾಗಿವೆ ಎಂದು ನಂಬಲಾಗಿದೆ. ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳು ನೀರಿನೊಂದಿಗೆ ಹೇಗೆ ಹೆಣಗಾಡುತ್ತಿದ್ದಾರೆ ಎಂಬುದನ್ನು ಚಿತ್ರಗಳಲ್ಲಿ ನೋಡಬಹುದು.
ಮುಂಬೈನ ಸಾಂತಾ ಕ್ರೂಜ್ ಪ್ರದೇಶದಲ್ಲಿ ನೆಲೆಗೊಂಡಿರುವ ವಕೋಲಾ ಪೊಲೀಸ್ ಠಾಣೆಯಲ್ಲಿ ನೀರು ತುಂಬಿದ್ದು, ಪೊಲೀಸರೇ ಪರದಾಡುವಂತಾಗಿದೆ. ನೀರು ತೆಗೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದು ಪೊಲೀಸ್ ಠಾಣೆಯ ಉಸ್ತುವಾರಿ ಹೇಳುತ್ತಾರೆ. ಪೊಲೀಸ್ ಠಾಣೆಯಲ್ಲಿ ನೀರಿನ ಒಳನುಸುಳುವಿಕೆಯಿಂದ ಅನೇಕ ಫೈಲ್‌ಗಳು ಹಾಳಾಗಿರಬಹುದು ಎಂದು ಅವರು ಹೇಳಿದ್ದಾರೆ.
ಮುಂಬೈನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಸ್ತೆ ತುಂಬಾ ನೀರು ತುಂಬಿದ್ದು, ಸಂಚಾರಕ್ಕೆ ತೊಂದರೆ ಉಂಟಾಗಿದೆ. ರೈಲ್ವೆ ಹಳಿಗಳಲ್ಲಿ ನೀರು ತುಂಬಿದ್ದು ಸೆಂಟ್ರಲ್ ಹಾರ್ವರ್‌ನ ಸ್ಥಳೀಯ ರೈಲು ಮತ್ತು ಪಶ್ಚಿಮ ಮುಂಬೈನ ಮೂರು ಮಾರ್ಗಗಳಲ್ಲಿ ರೈಲುಗಳು ನಿಗದಿತ ಸಮಯಕ್ಕಿಂತ ತಡವಾಗಿ ಚಲಿಸುತ್ತಿವೆ. ಇದಲ್ಲದೆ, ಗೋಚರತೆ ಕಡಿಮೆ ಇರುವುದರಿಂದ, ವಿಮಾನ ಹಾರಾಟದ ಮೇಲೂ ಪರಿಣಾಮ ಬೀರಿದೆ.
ಹವಾಮಾನ ಇಲಾಖೆಯ ಪ್ರಕಾರ ಮುಂಬೈನಲ್ಲಿ ಮುಂದಿನ 48 ಗಂಟೆಗಳ ವರೆಗೆ ಭಾರೀ ಮಳೆಯಾಗುವ ಸಂಭವವಿದೆ. ಈ ಸಂದರ್ಭದಲ್ಲಿ ಜನಸಾಮಾನ್ಯರು ಮನೆಯಿಂದ ಹೊರ ಬರದಂತೆ ಪೊಲೀಸ್ ಇಲಾಖೆ ವತಿಯಿಂದ ಮನವಿ ಮಾಡಲಾಗಿದೆ.