ಹೇರ್ ಡೈ ಹಾಕುವ ಅಗತ್ಯವಿಲ್ಲ: ಅಕಾಲಿಕ ಬಿಳಿ ಕೂದಲಿನ ಸಮಸ್ಯೆಗೆ ಈ ರೀತಿ ಪಡೆಯಿರಿ ಸುಲಭ ಪರಿಹಾರ
ಒತ್ತಡ ಭರಿತ ಜೀವನಶೈಲಿಯಿಂದಾಗಿ ಅಕಾಲಿಕ ಬಿಳಿ ಕೂದಲಿನ ಸಮಸ್ಯೆ ಸಾಮಾನ್ಯವಾಗಿದ್ದರು ಕೂಡ ನಮ್ಮ ಜೀವನ ಶೈಲಿಯನ್ನು ಬದಲಾಯಿಸುವ ಮೂಲಕ, ಕೆಲವು ಕೆಟ್ಟ ಅಭ್ಯಾಸಗಳಿಂದ ಅಂತರ ಕಾಯ್ದುಕೊಳ್ಳುವ ಮೂಲಕ ನೀವು ಸುಲಭವಾಗಿ ಅಕಾಲಿಕ ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ ಪಡೆಯಬಹುದು.
ಹೆಚ್ಚಾಗಿ ಎಣ್ಣೆಯುಕ್ತ, ಫಾಸ್ಟ್, ಜಂಕ್ ಮತ್ತು ಸ್ಟ್ರೀಟ್ ಫುಡ್ ತಿನ್ನುವ ನಿಮ್ಮ ಅಭ್ಯಾಸವು ನಿಮ್ಮ ಕೂದಲಿನ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇವುಗಳು ರುಚಿಕರವಾಗಿದ್ದರೂ ಸಹ ನಮ್ಮ ದೇಹಕ್ಕೆ ಹಾನಿಕಾರಕ. ನಿಮ್ಮ ಕೂದಲಿನ ಆರೋಗ್ಯಕ್ಕೂ ಮಾರಕ ಎಂಬುದನ್ನು ನೆನಪಿನಲ್ಲಿಡಿ. ಸಾಧ್ಯವಾದಷ್ಟು ಅನಾರೋಗ್ಯಕರ ಆಹಾರಗಳಿಂದ ಅಂತರ ಕಾಯ್ದುಕೊಳ್ಳಿ.
ಉತ್ತಮ ಆರೋಗ್ಯಕ್ಕೆ ದೈಹಿಕ ಚಟುವಟಿಕೆಯೂ ಬಹಳ ಮುಖ್ಯ. ಹಾಗಾಗಿ, ತಪ್ಪದೇ ನಿಮ್ಮ ದಿನಚರಿಯಲ್ಲಿ ವ್ಯಾಯಾಮ, ವಾಕಿಂಗ್, ಜಾಗಿಂಗ್ ನಂತಹ ದೈಹಿಕ ಚಟುವಟಿಕೆಯನ್ನು ರೂಢಿಸಿಕೊಳ್ಳಿ. ಇದು ನಿಮ್ಮ ಕೂದಲಿನ ಆರೋಗ್ಯಕ್ಕೂ ಕೂಡ ತುಂಬಾ ಮುಖ್ಯ.
ಚಿಂತೆಯೇ ಚಿತೆಗೆ ಕಾರಣ ಎಂಬ ಮಾತಿದೆ. ನಿಮ್ಮ ಕೂದಲಿನ ಸಮಸ್ಯೆಗೂ ಕೂಡ ಒತ್ತಡವೇ ಕಾರಣ. ಇದನ್ನು ತಪ್ಪಿಸಲು ಸಾಧ್ಯವಾದಷ್ಟು ಯೋಗ, ಧ್ಯಾನದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ.
ಸಿಗರೇಟ್ ಮತ್ತು ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ನಿಮಗೆ ತಿಳಿದೇ ಇದೆ. ಇದು ನಿಮ್ಮ ಕೂದಲಿನ ಆರೋಗ್ಯದ ಮೇಲೂ ಕೂಡ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಅತಿಯಾದ ಸಿಗರೇಟ್ ಮತ್ತು ಮದ್ಯಪಾನದಿಂದಾಗಿ ತಲೆಬುರುಡೆಯಲ್ಲಿ ರಕ್ತಸಂಚಾರ ಸರಿಯಾಗಿ ಆಗುವುದಿಲ್ಲ. ಇದರಿಂದಾಗಿ ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗಲು ಪ್ರಾರಂಭಿಸುತ್ತದೆ. ಇದನ್ನು ತಪ್ಪಿಸಲು ಸಿಗರೇಟ್ ಮತ್ತು ಮದ್ಯಪಾನದಿಂದ ಅಂತರ ಕಾಯ್ದುಕೊಳ್ಳಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.