ಫೈನಲ್’ನಲ್ಲಿ ಭಾರತ-ನ್ಯೂಜಿಲೆಂಡ್ ಮುಖಾಮುಖಿಯಾದ್ರೆ ರಚಿನ್ ಅವರ ತಾತಾ ಸಪೋರ್ಟ್ ಮಾಡೋದು ಈ ತಂಡಕ್ಕೆ! ಯಾವುದದು?
ಟೀಂ ಇಂಡಿಯಾದ ದಿಗ್ಗಜರಾದ ಸಚಿನ್ ಮತ್ತು ರಾಹುಲ್ ದ್ರಾವಿಡ್ ಅವರ ಹೆಸರಿನೊಂದಿಗೆ ಸಂಬಂಧ ಹೊಂದಿರುವ ರಚಿನ್, ಸಖತ್ ಆಗಿ ಬ್ಯಾಟ್ ಬೀಸುತ್ತಿದ್ದಾರೆ. ಆದರೆ ಇವರು ಆಡುತ್ತಿರೋದು ನ್ಯೂಜಿಲೆಂಡ್ ತಂಡದ ಪರ
ಈ ಎಡಗೈ ಬ್ಯಾಟ್ಸ್‌ಮನ್ ಕಳೆದ ದಿನ ವಿಶ್ವಕಪ್’ನಲ್ಲಿ ಮೂರನೇ ಶತಕ ಗಳಿಸಿದ್ದಾರೆ. ಪಾಕಿಸ್ತಾನ ವಿರುದ್ಧ 108 ರನ್’ಗಳ ಇನ್ನಿಂಗ್ಸ್ ಆಡಿದ ಅವರು, ಅದಕ್ಕೂ ಮುನ್ನ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿದ್ದರು. ಒಂದೇ ವಿಶ್ವಕಪ್’ನಲ್ಲಿ ಮೂರು ಶತಕಗಳನ್ನು ಗಳಿಸಿದ ನ್ಯೂಜಿಲೆಂಡ್’ನ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರಚಿನ್ ಪಾತ್ರರಾಗಿದ್ದಾರೆ.
ರಚಿನ್ ರವೀಂದ್ರ ಅವರಿಗೆ ಪಾಕಿಸ್ತಾನ ತಂಡದ ವಿರುದ್ಧ ಗಳಿಸಿದ ಶತಕ ಬಹಳಷ್ಟು ವಿಶೇಷವಾಗಿತ್ತು. ಏಕೆಂದರೆ ಕಳೆದ ದಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ದಾಖಲೆ ಬರೆದಿದ್ದರು, ಇದು ರಚಿನ್ ರವೀಂದ್ರ ಅವರ ಮೂಲ ನೆಲ ಎಂಬುದು ಅವರ ಭಾವನೆಯಾಗಿತ್ತು. ಇನ್ನೊಂದೆ ವಿಚಾರವೆಂದರೆ ರಚಿನ್ ರವೀಂದ್ರ ಅವರ ತಂದೆ ರವಿ ಕೃಷ್ಣಮೂರ್ತಿ, ಕ್ರಿಕೆಟ್ ಅಭಿಮಾನಿ. ಅಷ್ಟೇ ಅಲ್ಲದೆ ನ್ಯೂಜಿಲೆಂಡ್’ಗೆ ತೆರಳುವ ಮೊದಲು ಬೆಂಗಳೂರಿನಲ್ಲಿ ಕ್ಲಬ್ ಕ್ರಿಕೆಟ್ ಆಡುತ್ತಿದ್ದರು.
ರಚಿನ್ ಅವರ ಅಜ್ಜ-ಅಜ್ಜಿಯರಾದ, ಖ್ಯಾತ ಶಿಕ್ಷಣ ತಜ್ಞ ಬಾಲಕೃಷ್ಣ ಅಡಿಗ ಮತ್ತು ಪೂರ್ಣಿಮಾ ಅಡಿಗ ಅವರು ದಕ್ಷಿಣ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಮೊಮ್ಮಗನ ಆಟ ನೋಡಲೆಂದು ಇಬ್ಬರೂ ಕೂಡ ಕ್ರೀಡಾಂಗಣಕ್ಕೆ ಆಗಮಿಸಿದ್ದದ್ದು ತುಂಬಾ ವಿಶೇಷವಾಗಿತ್ತು. ಆ ಬಳಿಕ ಮಾತನಾಡಿದ ಬಾಲಕೃಷ್ಣ ಅಡಿಗ ಅವರು, “ಸ್ಟೇಡಿಯಂನಲ್ಲಿ ಪ್ರೇಕ್ಷಕರು ರಚಿನ್ ಹೆಸರನ್ನು ಕೂಗುತ್ತಿದ್ದಾಗ ವಿಶೇಷ ಅನುಭವ ನೀಡಿತು. ಇನ್ನು ಅವನೂ ಕೂಡ ಶತಕ ಬಾರಿಸಿದ್ದು ನಮಗೆ ತುಂಬಾ ಖುಷಿ ತಂದಿದೆ” ಎಂದಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಕನ್ನಡದ ಜೊತೆ ಮಾತನಾಡಿದ ಬಾಲಕೃಷ್ಣ ಅಡಿಗ ಅವರು, ಒಂದು ವೇಳೆ ಫೈನಲ್’ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಸೆಣಸಾಡಿದರೆ, ಅದರಲ್ಲಿ ಟೀಂ ಇಂಡಿಯಾ ಗೆಲ್ಲಬೇಕು, ರಚಿನ್ ಉತ್ತಮ ಪ್ರದರ್ಶನ ನೀಡಬೇಕೆಂದು ಹೇಳಿಕೆ ನೀಡಿದ್ದಾರೆ.