ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ಮೊದಲ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ - In Pics

Sun, 22 Jul 2018-6:32 pm,

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನೂತನವಾಗಿ ರಚನೆಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಭಾನುವಾರ ಸಂಸತ್ತಿನ ಅನೆಕ್ಸ್ ಸಭಾಂಗಣದಲ್ಲಿ ನಡೆಯಿತು. 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಮತ್ತು ಮಧ್ಯಪ್ರದೇಶ, ರಾಜಸ್ಥಾನ, ಛತ್ತಿಸ್ಘರ್ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಸಭೆಯ ಪ್ರಮುಖ ವಿಷಯಗಳಾಗಿದ್ದವು.

ಸಭೆ ಅಧ್ಯಕ್ಷತೆಯನ್ನು ರಾಹುಲ್ ಗಾಂಧಿ ವಹಿಸಿದ್ದರು. ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ದೇಶದಲ್ಲಿ ದಮನಿತರ ಪರವಾಗಿ ಹೋರಾಟ ಮಾಡುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಕಾಂಗ್ರೆಸ್ 'ಭಾರತದ ಧ್ವನಿ' (ವಾಯ್ಸ್ ಆಫ್ ಇಂಡಿಯಾ). ದೇಶದ ಭೂತ, ವರ್ತಮಾನ ಹಾಗೂ ಭವಿಷ್ಯದ ನಡುವಿನ ಸೇತುವೆಯಾಗಿ ಕಾಂಗ್ರೆಸ್ ಕಾರ್ಯನಿರ್ವಹಿಸುತ್ತಿದೆ. ದೇಶದ ಅಭಿವೃದ್ಧಿಯ ಜವಾಬ್ದಾರಿ ಕಾಂಗ್ರೆಸ್ ಮೇಲಿದೆ. ಹಾಗಾಗಿ ಪಕ್ಷದ ಕಾರ್ಯಕರ್ತರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವಂತೆ ಕರೆ ನೀಡಿದರು. 

ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರವು ಭಾರತದಲ್ಲಿ ಪ್ರಜಾಪ್ರಭುತ್ವವನ್ನು ರಾಜಿಮಾಡಿಕೊಳ್ಳುತ್ತಿದ್ದು, ಈ ಅಪಾಯಕಾರಿ ಆಡಳಿತದಿಂದ ನಮ್ಮ ಜನರನ್ನು ರಕ್ಷಿಸಬೇಕಾಗಿದೆ. ಮೋದಿ ಅವರ ಮಾತುಗಳ ಅವರ ಹತಾಶೆಯನ್ನು ತೋರಿಸುತ್ತದೆ. ಇದರಿಂದ ಮೋದಿ ಸರ್ಕಾರದ ಹಿನ್ನಡೆಗೆ ಕ್ಷಣಗಣನೆ ಆರಂಭವಾದಂತಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಭಾರತದ ಸಾಮಾಜಿಕ ಸಾಮರಸ್ಯ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಪುನಃಸ್ಥಾಪಿಸಲು ಈ ಸಮಯದ ಅವಶ್ಯಕತೆ ಇದೆ. ರಾಹುಲ್ ಗಾಂಧಿಯವರ ಪ್ರಯತ್ನಕ್ಕೆ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೇಳಿದರು.

ನೂತನವಾಗಿ ರಚನೆಯಾಗಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (ಸಿಡಬ್ಲ್ಯೂಸಿ) 23 ಸದಸ್ಯರನ್ನು, 19 ಶಾಶ್ವತ ಆಹ್ವಾನಿತರು ಮತ್ತು 9 ವಿಶೇಷ ಆಹ್ವಾನಿತರನ್ನು ಒಳಗೊಂಡಿದೆ. ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್, ಓಮನ್ ಚಾಂಡಿ(ಕೇರಳ), ತರುಣ್ ಗೊಗೋಯಿ(ಅಸ್ಸಾಂ), ಸಿದ್ಧರಾಮಯ್ಯ(ಕರ್ನಾಟಕ) ಮತ್ತು ಹರೀಶ್ ರಾವತ್(ಉತ್ತರಾಖಂಡ್) ಅವರನ್ನೂ ಸಮಿತಿ ಒಳಗೊಂಡಿದೆ. 

ಸಮಿತಿಯ ಶಾಶ್ವತ ಆಹ್ವಾನಿತರಾಗಿ ಶೀಲಾ ದೀಕ್ಷಿತ್‌, ಪಿ.ಚಿದಂಬರಂ, ಜ್ಯೋತಿರಾಧಿತ್ಯ ಸಿಂಧಿಯಾ, ಬಾಳಾಸಾಹೇಬ್‌ ತೋರಟ್‌, ತಾರಿಖ್‌ ಹಮೀದ್‌ ಖಾರ್ರಾ, ಪಿ.ಸಿ. ಚಾಕೋ, ಜಿತೇಂದ್ರ ಸಿಂಗ್‌, ಆರ್‌ಪಿಎನ್‌ಸಿಂಗ್‌, ಪಿ.ಎಲ್‌. ಪುನಿಯಾ, ರಣದೀಪ್‌ ಸುರ್ಜೆವಾಲಾ, ಆಶಾ ಕುಮಾರಿ, ರಜನಿ ಪಾಟೀಲ್‌, ರಾಮಚಂದ್ರ ಕುಂಟಿಯಾ, ಅನುಗ್ರಹ ನಾರಾಯಣ ಸಿಂಗ್‌, ರಾಜೀವ್‌ ವಿ. ಸಾತವ್‌, ಶಕ್ತಿಸಿನ್ಹಾ ಗೋಹಿಲ್‌, ಗೌರವ್‌ ಗಗೋಯಿ, ಡಾ.ಎ.ಚೆಲ್ಲ ಕುಮಾರ್‌ ಸಮಿತಿಯಲ್ಲಿದ್ದಾರೆ. ವಿಶೇಷ ಆಹ್ವಾನಿತರಾಗಿ ವಿಶೇಷ ಆಹ್ವಾನಿತರು: ಕೆ.ಎಚ್‌.ಮುನಿಯಪ್ಪ, ಅರುಣ್‌ ಯಾದವ್‌, ದಿಪೇಂದರ್‌ ಹೂಡಾ, ಜಿತಿನ್‌ ಪ್ರಸಾದ್‌, ಕುಲದೀಪ್‌ ವಿಷ್ಣೋಯಿ ಹಾಗೂ ಐಎನ್‌ಟಿಯುಸಿ, ಸೇವಾ ದಳ, ಯುವ ಕಾಂಗ್ರೆಸ್‌, ಮಹಿಳಾ ಕಾಂಗ್ರೆಸ್‌, ಎನ್‌ಎಸ್‌ಯುಐ ಘಟಕಗಳ ಮುಖ್ಯಸ್ಥರಿಗೆ ಸ್ಥಾನ ನೀಡಲಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link