ಐಎಎಸ್ ಕೆಲಸಕ್ಕೆ ಗುಡ್ ಬೈ ಹೇಳಿ 14 ಸಾವಿರ ಕೋಟಿ ಮೌಲ್ಯದ ಕಂಪನಿ ಕಟ್ಟಿದ ಸಾಧಕ..!

Thu, 19 Aug 2021-3:54 pm,

ರೋಮನ್ ಸೈನಿ 16ನೇ ವಯಸ್ಸಿನಲ್ಲಿ ಏಮ್ಸ್ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದ ಅತ್ಯಂತ ಕಿರಿಯ ವ್ಯಕ್ತಿ. 18ನೇ ವಯಸ್ಸಿನಲ್ಲಿ ಅವರು ಪ್ರತಿಷ್ಠಿತ ವೈದ್ಯಕೀಯ ಮ್ಯಾಗಜೀನ್ ನಲ್ಲಿ ಸಂಶೋಧನಾ ಪ್ರಬಂಧವನ್ನು ಬರೆದಿದ್ದರು. ಎಂಬಿಬಿಎಸ್ ಮುಗಿಸಿದ ನಂತರ ಯುವಕ ರೋಮನ್ ಸೈನಿ ಏಮ್ಸ್ ನಲ್ಲಿ ನ್ಯಾಷನಲ್ ಡ್ರಗ್ ಡಿಪೆಂಡೆನ್ಸ್ ಟ್ರೀಟ್ಮೆಂಟ್ ಸೆಂಟರ್(ಎನ್ ಡಿಡಿಟಿಸಿ) ನಲ್ಲಿ ಕೆಲಸ ಮಾಡಿದರು. ಬಹುತೇಕರು ಇಂತಹ ಪ್ರತಿಷ್ಠಿತ ಕೆಲಸವನ್ನು ತುಂಬಾ ಇಷ್ಟಪಡುತ್ತಾರೆ. ಆದರೆ ರೋಮನ್‌ ವೈದ್ಯರಾಗಿ ಕೇವಲ 6 ತಿಂಗಳು ಮಾತ್ರ ಸೇವೆ ಸಲ್ಲಿಸಿದರು. ಮುಂದಿನ ಅವರ ಕನಸು ಐಎಎಸ್ ಅಧಿಕಾರಿಯಾಗುವುದಾಗಿತ್ತು. 

22ನೇ ವಯಸ್ಸಿನಲ್ಲಿ ರೋಮನ್ ಸೈನಿ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದರು.  ಸಣ್ಣ ವಯಸ್ಸಿನಲ್ಲಿಯೇ ಅವರಿಗೆ ಜನರ ಸೇವೆ ಮಾಡುವ ಹಂಬಲವಿತ್ತು. ‘ನಾನು ಎಂಬಿಬಿಎಸ್ ಓದುತ್ತಿದ್ದಾಗ ಹರಿಯಾಣ ದಯಾಳ್‌ಪುರ್ ಹಳ್ಳಿಗೆ ನೇಮಕಗೊಂಡಿದ್ದೆ. ಜನರು ಹೇಗೆ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಎಂಬುದನ್ನು ನೋಡಿದೆ. ಆಗ ನಾನು ರಾಷ್ಟ್ರಸೇವೆ ಮಾಡಲು ನಿರ್ಧರಿಸಿದೆ’ ಅಂತಾ ಸ್ವತಃ ಸೈನಿ ಹೇಳಿಕೊಂಡಿದ್ದರು. ರೋಮನ್ ತಮ್ಮ 22ನೇ ವಯಸ್ಸಿನಲ್ಲಿ ಐಎಎಸ್ ಪರೀಕ್ಷೆ ಉತ್ತೀರ್ಣರಾಗಿದ್ದರು. ಭಾರತದ ಅತ್ಯಂತ ಕಿರಿಯ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರಾಗಿದ್ದರು ಮತ್ತು ಅವರನ್ನು ಮಧ್ಯಪ್ರದೇಶಕ್ಕೆ ಕಲೆಕ್ಟರ್ ಆಗಿ ನೇಮಿಸಲಾಗಿತ್ತು.

ಐಎಎಸ್ ಅಧಿಕಾರಿಯಾಗಿ ಸೈನಿ ಅಲ್ಪಾವಧಿ ಸೇವೆ ಸಲ್ಲಿಸಿದರು. ಕೈತುಂಬಾ ಸಂಬಳ ಬರುತ್ತಿದ್ದ ಪ್ರತಿಷ್ಠಿತ ಸರ್ಕಾರಿ ಕೆಲಸಕ್ಕೆ ಗುಡ್ ಬೈ ಹೇಳಿದರು. ಬಳಿಕ ಸ್ನೇಹಿತ ಗೌರವ್ ಮುಂಜಾಲ್ ಜೊತೆಗೂಡಿ 2013ರಲ್ಲಿ ಅನ್ಅಕಾಡೆಮಿ ಸ್ಥಾಪಿಸಿದರು. ಇದು ಇಂದು ಸಾವಿರಾರು ಐಎಎಸ್ ಆಕಾಂಕ್ಷಿಗಳಿಗೆ ಯುಪಿಎಸ್‌ಸಿ ಪರೀಕ್ಷೆಗಳಿಗೆ ತಯಾರಿ ಮಾಡಲು ಸಹಾಯ ಮಾಡುತ್ತಿದೆ. ಅಲ್ಲದೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿದೆ. ಯುಪಿಎಸ್‌ಸಿ ಕೋಚಿಂಗ್ ತರಗತಿಗಳಿಗೆ ವೇದಿಕೆಯನ್ನು ಒದಗಿಸುವುದು ಅನ್ಅಕಾಡೆಮಿಯ ಸ್ಥಾಪಿಸುವುದರ ಹಿಂದಿನ ಆಲೋಚನೆಯಾಗಿತ್ತು. ಇಲ್ಲಿ ಕೋಚಿಂಗ್ ಪಡೆಯಲು ವಿದ್ಯಾರ್ಥಿಗಳು ಲಕ್ಷಾಂತರ ರೂ. ಖರ್ಚು ಮಾಡುವ ಅಗತ್ಯವಿಲ್ಲ.

2010ರಲ್ಲಿ ಗೌರವ್ ಮುಂಜಾಲ್ ಅನ್ಅಕಾಡೆಮಿ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದರು.  2015ರಲ್ಲಿ ಈ ಕಂಪನಿಯನ್ನು ಅಧಿಕೃತವಾಗಿ  ಮುಂಜಾಲ್, ಸೈನಿ ಮತ್ತು ಅವರ 3ನೇ ಸಹ ಸಂಸ್ಥಾಪಕ ಹೇಮೇಶ್ ಸಿಂಗ್ ಸ್ಥಾಪಿಸಿದರು. 6 ವರ್ಷಗಳ ಕೆಳಗೆ 18 ಸಾವಿರ ಶಿಕ್ಷಕರ ಜಾಲವನ್ನು ಹೊಂದಿರುವ ಅನ್ಅಕಾಡೆಮಿ ಭಾರತದ ಅತಿದೊಡ್ಡ ಶಿಕ್ಷಣ ತಂತ್ರಜ್ಞಾನ ವೇದಿಕೆಗಳಲ್ಲಿ ಒಂದಾಗಿದೆ. ಕಂಪನಿಯ ಮೌಲ್ಯ 2 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು 14,830 ಕೋಟಿ ರೂ.) ಎಂದು ಅಂದಾಜಿಸಲಾಗಿದೆ. ಅನ್ಅಕಾಡೆಮಿ ಮೊಬೈಲ್ ಅಪ್ಲೀಕೇಷನ್ ಬರೋಬ್ಬರಿ 50 ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ.

ಏನಾದರೂ ಕಲಿಯಲು ಕಲಿಯುವುದು ಯಶಸ್ಸಿನ ಮೊದಲ ಹೆಜ್ಜೆ ಎಂದು ರೋಮನ್ ಸೈನಿ ನಂಬಿದ್ದಾರೆ. ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೆ ಮೊದಲು ನೀವು ಸವಾಲಿಗೆ ಸಿದ್ಧರಾಗಿರಬೇಕು. ಇಲ್ಲಿ ಯಾರೂ ಮೇಧಾವಿಗಳಾಗಿ ಹುಟ್ಟುವುದಿಲ್ಲ, ಪ್ರತಿಯೊಬ್ಬರೂ ತಮ್ಮ ಗುರಿ ಸಾಧಿಸಲು ಜ್ಞಾನ, ಪ್ರತಿಭೆ ಮತ್ತು ಗುಣ ಹೊಂದಿರುತ್ತಾರೆ. ಪ್ರತಿಯೊಬ್ಬ ಮಗು ತನ್ನ ಹೆತ್ತವರು ಅಥವಾ ಸಮಾಜದ ಆಶಯಗಳಿಗೆ ವಿರುದ್ಧ ಹೋಗುವ ಭಯವನ್ನು ಹೋಗಲಾಡಿಸುವುದು. ತನ್ನದೇಯಾದ ಹಾದಿಯಲ್ಲಿ ಅಂದುಕೊಂಡಿದ್ದನ್ನು ಸಾಧಿಸುವುದು ನಿಜವಾದ ಸಾಧಕನ ಗುರಿಯಾಗಿರಬೇಕು ಅಂತಾ ಸೈನಿ ವಿದ್ಯಾರ್ಥಿಗಳಿಗೆ, ಯುವಸಮುದಾಯಕ್ಕೆ ಸಲಹೆ ನೀಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link