14 ವರ್ಷಗಳ ವೃತ್ತಿಜೀವನಕ್ಕೆ ಕಣ್ಣೀರಿನ ವಿದಾಯ: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ ಭಾರತದ ಸ್ಪಿನ್ ಮಾಂತ್ರಿಕ ಆರ್. ಅಶ್ವಿನ್
ಭಾರತದ ಹಿರಿಯ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಬ್ರಿಸ್ಬೇನ್ ಟೆಸ್ಟ್ ಡ್ರಾ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದು, "ಇದು ನನಗೆ ತುಂಬಾ ಭಾವನಾತ್ಮಕ ಸಮಯ" ಎಂದು ಅಶ್ವಿನ್ ಹೇಳಿದ್ದಾರೆ.
ಆಸ್ಟ್ರೇಲಿಯ ಪ್ರವಾಸದಲ್ಲಿ ಅಶ್ವಿನ್ ಒಂದೇ ಒಂದು ಪಂದ್ಯ ಆಡುವ ಅವಕಾಶ ಪಡೆದಿದ್ದರು. ಅಡಿಲೇಡ್‌ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಆಡಿದ್ದ ಅಶ್ವಿನ್, ಎರಡು ಇನ್ನಿಂಗ್ಸ್‌ಗಳಲ್ಲಿ ಕೇವಲ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಪರ್ತ್ ಮತ್ತು ಬ್ರಿಸ್ಬೇನ್‌ನಲ್ಲಿ ನಡೆದ ಪಂದ್ಯಗಳಲ್ಲಿ ಆಡಲು ಸಾಧ್ಯವಾಗಲಿಲ್ಲ. ಬ್ರಿಸ್ಬೇನ್‌ನಲ್ಲಿ ಅಶ್ವಿನ್ ಬದಲಿಗೆ ರವೀಂದ್ರ ಜಡೇಜಾಗೆ ಅವಕಾಶ ಸಿಕ್ಕಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಉಳಿದಿರುವ ಮೆಲ್ಬೋರ್ನ್ ಮತ್ತು ಸಿಡ್ನಿ ಟೆಸ್ಟ್‌ಗಳಲ್ಲಿ ಆಡುವುದು ಅವರಿಗೆ ಕಷ್ಟಕರವಾಗಿದೆ. ಆ ಬಳಿಕ ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ನೇರವಾಗಿ ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, 38 ವರ್ಷದ ಅಶ್ವಿನ್ ನಿವೃತ್ತರಾಗದ್ದಾರೆ.
ಅಶ್ವಿನ್ 2011 ರಿಂದ ಭಾರತಕ್ಕಾಗಿ 106 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಏಕಾಂಗಿಯಾಗಿ ಹಲವು ಪಂದ್ಯಗಳಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ಕೀರ್ತಿ ಇವರದ್ದು. ಟೆಸ್ಟ್ ಪಂದ್ಯಗಳಲ್ಲಿ 537 ವಿಕೆಟ್‌ಗಳನ್ನು ಪಡೆದಿರುವ ಅಶ್ವಿನ್, ಈ ಅವಧಿಯಲ್ಲಿ, 37 ಬಾರಿ ಇನ್ನಿಂಗ್ಸ್‌ನಲ್ಲಿ 5 ಅಥವಾ ಹೆಚ್ಚಿನ ವಿಕೆಟ್‌ಗಳನ್ನು ಪಡೆದ ದಾಖಲೆಯನ್ನು ಹೊಂದಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ವಿಶ್ವದ ಎರಡನೇ ಕ್ರಿಕೆಟಿಗ.
ಇನ್ನು ಏಕದಿನ ಕ್ರಿಕೆಟ್‌ನಲ್ಲೂ ಮೋಡಿ ಮಾಡಿರುವ ಅಶ್ವಿನ್, 116 ಪಂದ್ಯಗಳಲ್ಲಿ 707 ರನ್ ಗಳಿಸಿದ್ದಾರೆ. ಈ ಸ್ವರೂಪದಲ್ಲೂ 156 ವಿಕೆಟ್ಗಳನ್ನು ಪಡೆದಿರುವ ಅಶ್ವಿನ್ ಭಾರತ ಪರ 65 ಟಿ20 ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಈ ಅವಧಿಯಲ್ಲಿ ಅವರು 72 ವಿಕೆಟ್ ಪಡೆದಿದ್ದಾರೆ. 2011ರಲ್ಲಿ ಏಕದಿನ ವಿಶ್ವಕಪ್ ಹಾಗೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡದಲ್ಲಿ ಅಶ್ವಿನ್ ಕೂಡ ಸೇರ್ಪಡೆಗೊಂಡಿದ್ದರು.