ವಿಚ್ಛೇದಿತೆ ಮೇಲೆ ಲವ್… ಕಾನೂನು ಹೋರಾಟ ಮಾಡಿ ಆಕೆಯ ಪುತ್ರಿಯನ್ನೇ ದತ್ತು ಪಡೆದ ಟೀಂ ಇಂಡಿಯಾದ ಸ್ಟಾರ್ ಸ್ಪಿನ್ ಮಾಂತ್ರಿಕನೀತ!
ಅನಿಲ್ ಕುಂಬ್ಳೆ ಮದುವೆಯಾಗಿದ್ದು ವಿಚ್ಛೇದಿತ ಮಹಿಳೆಯನ್ನು. ಅದರಲ್ಲೂ ಆ ವಿವಾಹವಾಗಲು ಆಕೆಯ ಒಪ್ಪಿಗೆ ಮಾತ್ರವಲ್ಲದೆ, ಆಕೆಯ ಮಗಳ ಬೆಂಬಲವೂ ಅಗತ್ಯವಾಗಿ ಬೇಕಿತ್ತು. ಇದೇ ಕಾರಣದಂದ ಕಾನೂನು ಹೋರಾಟ ನಡೆಸಿ, ಸುಖಾಂತ್ಯ ಕಂಡು ಇದೀಗ ಮೂರು ಮಕ್ಕಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
1970 ರಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಜನಿಸಿದ ಅನಿಲ್ ಕುಂಬ್ಳೆ ಎಂಜಿನಿಯರಿಂಗ್ ಪದವಿ ಪಡೆದರು, ಆದರೆ ಕ್ರಿಕೆಟ್ ಅವರ ಮೊದಲ ಪ್ರೀತಿಯಾಗಿದ್ದರಿಂದ ಹೆಚ್ಚಿನ ಗಮನ ಅತ್ತ ಕಡೆಗೇ ಹರಿಸಿದರು.
ಅನಿಲ್ ಕುಂಬ್ಳೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 17 ಅಕ್ಟೋಬರ್ 1970 ರಂದು ಕೃಷ್ಣ ಸ್ವಾಮಿ ಮತ್ತು ಸರೋಜ ದಂಪತಿಯ ಪುತ್ರನಾಗಿ ಜನಿಸಿದರು. ಅವರ ಮೂಲ ಹೆಸರು ರಾಧಾಕೃಷ್ಣ ಕುಂಬ್ಳೆ, ವ್ಯಾಸಂಗದ ಜೊತೆಗೆ ಕ್ರಿಕೆಟ್ ಮೇಲೆ ಅನಿಲ್’ಗೆ ವಿಶೇಷ ಪ್ರೀತಿ ಇತ್ತು. 1990 ರಲ್ಲಿ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಸ್ಪಿನ್ ಬೌಲಿಂಗ್ ಸಹಾಯದಿಂದ ಕ್ರಿಕೆಟ್ ಜಗತ್ತಿನಲ್ಲಿ ಕುತೂಹಲಕಾರಿ ಪ್ರಯಾಣ ಪ್ರಾರಂಭಿಸಿದರು. ಆದರೆ ವ್ಯಾಸಂಗ ಬಿಟ್ಟಿರಲಿಲ್ಲ.
1992 ರಲ್ಲಿ ರಾಷ್ಟ್ರೀಯ ವಿದ್ಯಾಲಯ ಕಾಲೇಜ್ ಆಫ್ ಎಂಜಿನಿಯರಿಂಗ್’ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ಆದರೆ ಅವರ ಮೊದಲ ಗಮನವಿದ್ದದ್ದು ಕ್ರಿಕೆಟ್ ಕಡೆಗೆ. ಈ ಕಾರಣಕ್ಕಾಗಿಯೇ ಕ್ರಿಕೆಟ್ ಬಿಟ್ಟು ಬೇರೆ ವೃತ್ತಿಯನ್ನು ಮಾಡಲು ಯೋಚಿಸಲಿಲ್ಲ.
ಸ್ಪಿನ್ ಬೌಲರ್ ಆಗಿ ವೃತ್ತಿ ಜೀವನ ಆರಂಭಿಸಿದ ಕುಂಬ್ಳೆ ಟೀಂ ಇಂಡಿಯಾ ನಾಯಕನೂ ಆಗಿದ್ದರು. ನಿವೃತ್ತಿಯ ನಂತರ ಭಾರತ ತಂಡದ ಕೋಚ್ ಆಗಿಯೂ ಉಳಿದರು. ಕುಂಬ್ಳೆ ತಮ್ಮ 18 ವರ್ಷಗಳ ವೃತ್ತಿ ಜೀವನದಲ್ಲಿ ಯಾವತ್ತೂ ಯಾವುದೇ ವಿವಾದದಲ್ಲಿ ಭಾಗಿಯಾಗಿಲ್ಲ. ಇದು ಅವರ ಸಭ್ಯತೆಗೆ ಉದಾಹರಣೆಯಾಗಿದೆ.
ಇನ್ನು ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಭಾರತೀಯ ಕ್ರಿಕೆಟ್’ನಲ್ಲಿ 'ಜಂಬೋ' ಎಂದು ಕರೆಯಲ್ಪಡುವ ಅನಿಲ್ ಕುಂಬ್ಳೆ ಅವರ ಪತ್ನಿಯ ಹೆಸರು ಚೇತನಾ ರಾಮತೀರ್ಥ. ಅಂದಹಾಗೆ ಚೇತನಾಗೆ ಇದು 2ನೇ ಮದುವೆ. 1986 ರಲ್ಲಿ ಚೇತನಾ, ಮೈಸೂರಿನ ಅಂಗಡಿಯ ದಲ್ಲಾಳಿಯೊಬ್ಬರನ್ನು ವಿವಾಹವಾದರು. ಅದಾದ ಬಳಿಕ ಅನಿಲ್ ಕುಂಬ್ಳೆ ಅವರನ್ನು ಒಂದೊಮ್ಮೆ ಚೇತನಾ ಭೇಟಿಯಾದಾಗ, ಮೊದಲ ನೋಟದಲ್ಲೇ ಪರಸ್ಪರ ಸ್ನೇಹ ಬೆಳೆಸಿಕೊಂಡರು. ಸ್ನೇಹ ಮುಂದುವರೆದಂತೆ, ಚೇತನಾ ಕೂಡ ಕುಂಬ್ಳೆ ಸಂಬಂಧದಲ್ಲಿ ವಿಶ್ವಾಸ ಹೆಚ್ಚಿಸಿಕೊಂಡರು.
ಅದಾದ ನಂತರ 1998ರಲ್ಲಿ ತನ್ನ ಗಂಡನ ಜೊತೆಗಿನ ಸಂಬಂಧವನ್ನು ಮುರಿದುಕೊಂಡ ಚೇತನಾ ಅನಿಲ್ ಬೆಂಬಲದಿಂದ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅಷ್ಟೇ ಅಲ್ಲದೆ, ಅನಿಲ್ ಮತ್ತು ಚೇತನಾ 1999 ರಲ್ಲಿ ವಿವಾಹವಾದರು. ಆದರೆ ಚೇತನಾ ತನ್ನ ಮಗಳನ್ನು ತನ್ನೊಂದಿಗೆ ಇರಿಸಿಕೊಳ್ಳಲು ಬಯಸಿದ್ದರೂ ಸಹ, ಆಕೆಯ ಮಾಜಿ ಪತಿ ಅದನ್ನು ವಿರೋಧಿಸಿದನು. ಕಾನೂನು ಹೋರಾಟದ ನಂತರ ಅನಿಲ್ ಕುಂಬ್ಳೆ ಮತ್ತು ಚೇತನಾ ಮಗಳ ಬೆಂಬಲವನ್ನು ಗೆದ್ದರು.
ಇದೀಗ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ತಮ್ಮ ಪತ್ನಿ ಚೇತನಾ ಮತ್ತು ಮೂವರು ಮಕ್ಕಳೊಂದಿಗೆ (ಅರುಣಿ, ಮಾಯಾ ಮತ್ತು ಸ್ವಸ್ತಿ) ಸಂತೋಷದ ಜೀವನ ನಡೆಸುತ್ತಿದ್ದಾರೆ.
ಅನಿಲ್ ಕುಂಬ್ಳೆ ಆಗಾಗ ತಮ್ಮ ಕುಟುಂಬದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಂದಹಾಗೆ ಕುಂಬ್ಳೆ ಅತ್ಯಂತ ಸರಳ ಜೀವನ ನಡೆಸುತ್ತಿದ್ದಾರೆ.