ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ... ದೀಪಾವಳಿಗೆ ಭರ್ಜರಿ ಬೋನಸ್ ಘೋಷಿಸಿದ ಸರ್ಕಾರ: ವೇತನದ ಜೊತೆಗೆ ಕೈಸೇರಲಿದೆ ಇಷ್ಟು ಮೊತ್ತದ ʼದೀಪಾವಳಿ ಗಿಫ್ಟ್ʼ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿಯೊಂದು ಬಂದಿದೆ. 2023-24ನೇ ಸಾಲಿಗೆ ವಿಶೇಷ ದೀಪಾವಳಿ ಬೋನಸ್ ಘೋಷಿಸಲಾಗಿದೆ. ನಾನ್ ಪ್ರೊಡಕ್ಟಿವಿಟಿ ಲಿಂಕ್ಡ್ ಅಥವಾ ಆಡ್ ಹಾಕ್ ಬೋನಸ್ ಎಂದು ಕರೆಯಲ್ಪಡುವ ಈ ಬೋನಸ್ ಅನ್ನು ಅಕ್ಟೋಬರ್ 10 ರಂದು ಬಿಡುಗಡೆ ಮಾಡಲಾಗಿದೆ ಎಂದು ಅಧಿಕೃತ ಆದೇಶವು ಬಹಿರಂಗಪಡಿಸಿದೆ. ಈ ಬೋನಸ್ ಲೆಕ್ಕ ಹೇಗೆ? ಇದಕ್ಕೆ ಯಾರು ಅರ್ಹರು? ಎಂಬುದನ್ನು ಮುಂದೆ ಈ ವರದಿಯಲ್ಲಿ ತಿಳಿಯೋಣ.
ಈ ಬೋನಸ್ ಗ್ರೂಪ್ ಸಿ ಉದ್ಯೋಗಿಗಳಿಗೆ ಮತ್ತು ಗೆಜೆಟೆಡ್ ಅಲ್ಲದ ಗುಂಪು ಬಿ ಉದ್ಯೋಗಿಗಳಿಗೆ ನೀಡಲಾಗುತ್ತದೆ. ಕೇಂದ್ರ ಸರ್ಕಾರದ ವೇತನ ಶ್ರೇಣಿಯನ್ನು ಅನುಸರಿಸುವ ಕೇಂದ್ರ ಅರೆ ಮಿಲಿಟರಿ ಪಡೆಗಳು, ಸಶಸ್ತ್ರ ಪಡೆಗಳ ಸಿಬ್ಬಂದಿ ಮತ್ತು ಕೇಂದ್ರಾಡಳಿತ ಪ್ರದೇಶಗಳ ಉದ್ಯೋಗಿಗಳಿಗೂ ಈ ಬೋನಸ್ ಅನ್ವಯವಾಗುತ್ತದೆ.
ಕೇಂದ್ರ ಸರ್ಕಾರಿ ನೌಕರರಿಗೆ 30 ದಿನಗಳ ವೇತನಕ್ಕೆ ಸಮಾನವಾದ ಬೋನಸ್ ಅನ್ನು ನೀಡಲಾಗುತ್ತದೆ. ಇನ್ನು ಬೋನಸ್ ಲೆಕ್ಕಾಚಾರಕ್ಕೆ ಬಳಸಲಾಗುವ ಗರಿಷ್ಠ ಮಾಸಿಕ ವೇತನವನ್ನು 7,000 ರೂ.ಗೆ ನಿಗದಿಪಡಿಸಲಾಗಿದೆ.
ಇದರ ಜೊತೆಗೆ ದೀಪಾವಳಿ ಬೋನಸ್ ಪಡೆಯಲು ಸರ್ಕಾರಿ ನೌಕರರು ಕೆಲವು ಅರ್ಹತೆಗಳನ್ನು ಹೊಂದಿರಬೇಕು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಅವುಗಳೆಂದರೆ, ಉದ್ಯೋಗಿಗಳು 31 ಮಾರ್ಚ್ 2024 ರೊಳಗೆ ಸೇವೆಯಲ್ಲಿರಬೇಕು. ಆರ್ಥಿಕ ವರ್ಷದಲ್ಲಿ ಕನಿಷ್ಠ 6 ತಿಂಗಳ ಕಾಲ ನಿರಂತರ ಸೇವೆಯನ್ನು ಮಾಡಿರಬೇಕು.
ಪೂರ್ಣ ವರ್ಷಕ್ಕಿಂತ ಕಡಿಮೆ ಕೆಲಸ ಮಾಡಿದ ಉದ್ಯೋಗಿಗಳಿಗೆ, ಅನುಪಾತದ ಆಧಾರದ ಮೇಲೆ ಬೋನಸ್ ನೀಡಲಾಗುತ್ತದೆ. ಅಂದರೆ ಅವರು ಎಷ್ಟು ತಿಂಗಳು ಕೆಲಸ ಮಾಡಿದ್ದಾರೆ ಎಂಬುದರ ಆಧಾರದ ಮೇಲೆ ಆ ಉದ್ಯೋಗಿಗಳಿಗೆ ಬೋನಸ್‌ನ ಭಾಗವನ್ನು ನೀಡಲಾಗುತ್ತದೆ.
ಸತತ ಮೂರು ವರ್ಷಗಳಿಂದ ವರ್ಷದಲ್ಲಿ ಕನಿಷ್ಠ 240 ದಿನ ಕೆಲಸ ಮಾಡಿದ ನಿಯಮಿತ ಕೆಲಸಗಾರರು ಸಹ ಬೋನಸ್‌ಗೆ ಅರ್ಹರಾಗಿರುತ್ತಾರೆ. ಅವರ ಬೋನಸ್ ತಿಂಗಳಿಗೆ ರೂ. 1,200 ಎಂದು ಲೆಕ್ಕ ಹಾಕಲಾಗಿದೆ.
ಇನ್ನು ಬೋನಸ್ ಮೊತ್ತವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದನ್ನು ನೋಡುವುದಾದರೆ, ಸರಾಸರಿ ಇಮೋಲ್ಯುಮೆಂಟ್‌ಗಳನ್ನು 30.4 ರಿಂದ ಭಾಗಿಸಿ, ನಂತರ ಅದನ್ನು 30 ದಿನಗಳಿಂದ ಗುಣಿಸಿ ಲೆಕ್ಕಹಾಕಲಾಗುತ್ತದೆ. ಉದಾಹರಣೆಗೆ ತಿಂಗಳಿಗೆ ರೂ 7000 ಸಂಬಳ ಪಡೆಯುವ ವ್ಯಕ್ತಿಗೆ ದೀಪಾವಳಿ ಬೋನಸ್ 7000*30.4=ರೂ. 6,908 ಆಗಿರುತ್ತದೆ.
ಸದ್ಯ ಕೇಂದ್ರ ಸರ್ಕಾರ ಘೋಷಿಸಿರುವ ಬೋನಸ್, ನೌಕರರಿಗೆ ದೀಪಾವಳಿಯ ಕೊಡುಗೆ ನೀಡಿದಂತಾಗುತ್ತದೆ. ಅಷ್ಟೇ ಅಲ್ಲದೆ, ಇದು ಹೆಚ್ಚುವರಿ ಆರ್ಥಿಕ ಭದ್ರತೆಯೊಂದಿಗೆ ಉದ್ಯೋಗಿಗಳಿಗೆ ಹಬ್ಬದ ಋತುವನ್ನು ಆನಂದಿಸಲು ಸಹಾಯ ಮಾಡುತ್ತದೆ.