ದೇವಿಯ ಯೋನಿಗೆ ಪೂಜೆ ಮಾಡುವ ಜಗತ್ತಿನ ಏಕೈಕ ದೇವಾಲಯ ಯಾವುದು ಗೊತ್ತೇ? ಇಲ್ಲಿ ವರ್ಷಕ್ಕೊಮ್ಮೆ ಋತುಮತಿಯಾಗ್ತಾಳೆ ದೇವಿ... ಭಾರತದಲ್ಲೇ ಇರೋ ಈ ದೇಗುಲಕ್ಕೆ ಪುರುಷರಿಗೆ ಪ್ರವೇಶವಿಲ್ಲ
ಭಾರತದ ಶಕ್ತಿ ಪೀಠಗಳಲ್ಲಿ ಒಂದಾದ ಅಸ್ಸಾಂನ ನೀಲಾಚಲ ಬೆಟ್ಟದ ಮೇಲಿರುವ ಕಾಮಾಖ್ಯ ದೇವಾಲಯವು ಅನೇಕ ಆಸಕ್ತಿದಾಯಕ ಸಂಗತಿಗಳನ್ನು ತನ್ನ ಒಡಲಲ್ಲಿರಿಸಿಕೊಂಡಿದೆ. ದೇಶದ ಇತರ ದೇವಾಲಯಗಳಿಗಿಂತ ಭಿನ್ನವಾಗಿ, ಕಾಮಾಖ್ಯ ದೇವಾಲಯದಲ್ಲಿ ಕಾಮಾಖ್ಯ ದೇವಿಯ ವಿಗ್ರಹವಿಲ್ಲ, ಹಾಗೆಯೇ ಇಲ್ಲಿ ಪೂಜಿಸೋದು ದೇವಿಯ ಯೋನಿಯನ್ನು.
ಕಾಮಾಖ್ಯ ದೇವಾಲಯವು 8 ನೇ ಶತಮಾನದಲ್ಲಿ ಹುಟ್ಟಿಕೊಂಡ ಎಲ್ಲಾ 108 ಶಕ್ತಿ ಪೀಠಗಳ ಪೈಕಿ ಅತ್ಯಂತ ಪುರಾತನ ದೇವಾಲಯ ಎಂದೆನಿಸಿಕೊಂಡಿದೆ. ಇದನ್ನು 16 ನೇ ಶತಮಾನದಲ್ಲಿ ಕೂಚ್ ಬೆಹಾರ್ ರಾಜ ನಾರಾ ನಾರಾಯಣನು ಪುನರ್ನಿರ್ಮಿಸಿದನು ಎಂದು ಹೇಳಲಾಗುತ್ತದೆ. ಅಂದಿನಿಂದ ಇದನ್ನು ಹಲವಾರು ಬಾರಿ ನವೀಕರಿಸಲಾಗಿದೆ.
ದೇವಿಯ ಯೋನಿ ವಿಗ್ರಹವನ್ನು ಕಾಮಾಖ್ಯ ದೇವಾಲಯದಲ್ಲಿ ಪೂಜಿಸಲಾಗುತ್ತದೆ. ಇದನ್ನು ಗುಹೆಯ ಒಂದು ಮೂಲೆಯಲ್ಲಿ ಇರಿಸಲಾಗಿದ್ದು, ಇಲ್ಲಿ ವರ್ಷಕ್ಕೊಮ್ಮೆ ದೇವಿ ಋತುಮತಿಯಾಗುತ್ತಾಳೆ ಎಂದು ಪ್ರತೀತಿ ಇದೆ. ಅಷ್ಟೇ ಅಲ್ಲದೆ, ಆ ಸಂದರ್ಭದಲ್ಲಿ ಪುರುಷರಿಗೆ ಇಲ್ಲಿ ಪ್ರವೇಶವನ್ನು ನಿಷೇಧಿಸಲಾಗುತ್ತದೆ.
ತಾಯಿಯ ಯೋನಿ ಬಿದ್ದ ಕಾಮೃಪ್ ಪ್ರದೇಶವೇ ಇಂದಿನ ಕಾಮಾಖ್ಯ ದೇಗುಲವಾಗಿದೆ. ಈ ದೇವಾಲಯವು ಅನೇಕ ರಹಸ್ಯಗಳಿಂದ ಸುತ್ತುವರಿದಿದೆ. ಜೂನ್ ತಿಂಗಳಿನಲ್ಲಿ (ಆಷಾಢ), ಕಾಮಾಖ್ಯ ಬಳಿ ಹಾದುಹೋಗುವ ಬ್ರಹ್ಮಪುತ್ರ ನದಿಯು ಕೆಂಪು ಬಣ್ಣಕ್ಕೆ ತಿರುಗುತ್ತದೆ. ತಾಯಿ ಋತುಮತಿಯಾಗುತ್ತಿರುವುದೇ ನದಿ ಕೆಂಪಾಗಲು ಕಾರಣ ಎಂಬುದು ಇಲ್ಲಿನ ನಂಬಿಜೆ. ದೇವಾಲಯದ ನಾಲ್ಕು ಗರ್ಭಗುಡಿಗಳಲ್ಲಿ 'ಗರ್ವರ್ಗಿಹ' ಸತಿಯ ಗರ್ಭಕ್ಕೆ ನೆಲೆಯಾಗಿದೆ ಎಂದು ಹೇಳಲಾಗುತ್ತದೆ.
ದಕ್ಷ ಮಹಾರಾಜನು ತನ್ನ ಮಗಳು ಸತಿಯನ್ನು ಪರಶಿವನಿಗೆ ಕೊಟ್ಟು ವಿವಾಹ ಮಾಡಲು ಸಿದ್ಧವಿರುವುದಿಲ್ಲ. ಆದರೆ ಅವನಿಚ್ಛೆಗೆ ವಿರುದ್ಧವಾಗಿ ಸತಿಯು ಶಿವನನ್ನು ವರಿಸುತ್ತಾಳೆ. ಒಂದು ದಿನ ದಕ್ಷ ಏರ್ಪಡುಪಡಿಸಿದ್ದ ಯಾಗಕ್ಕೆ ಶಿವ-ಸತಿಯನ್ನು ಆಹ್ವಾನಿಸಿರುವುದಿಲ್ಲ. ಆದರೂ ತವರಿನಲ್ಲಿ ನಡೆಯುವ ಯಾಗಕ್ಕೆ ಸತಿ ಆಗಮಿಸಲು ನಿರ್ಧರಿಸುತ್ತಾಳೆ. ಆದರೆ ಆ ಯಾಗದ ಸಂದರ್ಭದಲ್ಲಿ ಪರಶಿವನಿಗೆ ದಕ್ಷ ಅವಮಾನ ಮಾಡುತ್ತಾನೆ. ಇದರಿಂದ ದುಃಖಿತಳಾದ ಸತಿ ಅದೇ ಯಜ್ಞಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ. ಈ ವಿಷಯ ತಿಳಿದ ಶಿವನು ದುಃಖಿತನಾಗುವಿದಲ್ಲದೆ, ಕೋಪದಿಂದ ಸತಿಯನ್ನು ತನ್ನ ಮಡಿಲಲ್ಲಿಟ್ಟುಕೊಂಡು ತಾಂಡವ ನೃತ್ಯವನ್ನಾಡುತ್ತಾನೆ. ಇದರಿಂದ ಚಿಂತೆಗೀಡಾದ ದೇವತೆಗಳು ಈ ವಿಚಾರದಲ್ಲಿ ವಿಷ್ಣುವಿನ ಸಹಾಯ ಕೇಳುತ್ತಾರೆ. ನಂತರ ಮಹಾವಿಷ್ಣು ತನ್ನ ಸುದರ್ಶನ ಚಕ್ರದಿಂದ ಸತಿಯ ದೇಹವನ್ನು 108 ತುಂಡುಗಳಾಗಿ ಕತ್ತರಿಸುತ್ತಾರೆ. ಅಂದು ತುಂಡುತುಂಡಾಗಿ ಬಿದ್ದ ದೇಹದ ಭಾಗಗಳೇ ಇಂದು ಶಕ್ತಿಪೀಠಗಳಾಗಿವೆ ಎನ್ನಲಾಗುತ್ತದೆ.
ಕಾಮಾಖ್ಯ ದೇವಸ್ಥಾನವು ಅಂಬುಬಾಸಿ ಪೂಜೆ ಎಂದು ಕರೆಯಲ್ಪಡುವ ವಾರ್ಷಿಕ ಪ್ರಜನನ ಉತ್ಸವವನ್ನು ಆಯೋಜಿಸುತ್ತದೆ. ಈ ಸಮಯದಲ್ಲಿ ದೇವಿಯು ಋತುಮತಿಯಾಗುತ್ತಾಳೆ ಎಂಬುದು ನಂಬಿಕೆ. ಆ ಸಂದರ್ಭದಲ್ಲಿ ಮೂರು ದಿನಗಳ ಕಾಲ ಇಲ್ಲಿನ ಬಾಗಿಲು ಮುಚ್ಚಲ್ಪಡುತ್ತದೆ. ನಂತರ, ನಾಲ್ಕನೇ ದಿನದಂದು ಉತ್ಸವಗಳೊಂದಿಗೆ ದೇವಾಲಯವು ಪುನಃ ತೆರೆಯುತ್ತದೆ. ಈ ಹಬ್ಬದ ಸಮಯದಲ್ಲಿ ಬ್ರಹ್ಮಪುತ್ರ ನದಿಯೂ ಕೆಂಪಾಗುತ್ತದೆ ಎಂದು ಹೇಳಲಾಗುತ್ತದೆ.
ಕಾಳಿಕಾ ಪುರಾಣದ ಪ್ರಕಾರ, ಕಾಮಾಖ್ಯ ದೇವಾಲಯವು ನಾಲ್ಕು ಪ್ರಾಥಮಿಕ ಶಕ್ತಿಪೀಠಗಳಲ್ಲಿ ಒಂದಾಗಿದೆ. ಒಡಿಶಾದ ಪುರಿಯ ಜಗನ್ನಾಥ ದೇವಾಲಯದಲ್ಲಿರುವ ವಿಮಲಾ ದೇವಾಲಯ, ಒಡಿಶಾದ ಬ್ರಹ್ಮಪುರ ಬಳಿ ತಾರಾ ತಾರಿಣಿ ಮತ್ತು ಕೋಲ್ಕತ್ತಾದ ದಕ್ಷಿಣ ಕಾಳಿಕಾ ಶಕ್ತಿಪೀಠಗಳು ಇದರಲ್ಲಿ ಸೇರಿವೆ.