ಟೆಸ್ಟ್ ಕ್ರಿಕೆಟ್ ಚರಿತ್ರೆಯಲ್ಲಿ ಒಂದೇ ಒಂದು ಬಾರಿಯೂ ಔಟ್ ಆಗಿಲ್ಲ ಈ ನಾಲ್ವರು ಆಟಗಾರರು! ಯಾರವರು ಗೊತ್ತಾ?
ಟಿ20 ಮತ್ತು ಏಕದಿನ ಕ್ರಿಕೆಟ್’ಗಳ ಅಬ್ಬರದ ನಡುವೆಯೂ ಟೆಸ್ಟ್ ತನ್ನ ಹಿರಿಮೆಯನ್ನೂ ಇಂದಿಗೂ ಉಳಿಸಿಕೊಂಡು ಬಂದಿದೆ. ಐದು ದಿನಗಳ ಅವಧಿಯಲ್ಲಿ ಆಟಗಾರನ ಕೌಶಲ್ಯ ಮತ್ತು ವರ್ತನೆಯನ್ನು ಪರೀಕ್ಷಿಸುವ ದೊಡ್ಡ ಸ್ವರೂಪದ ಕ್ರಿಕೆಟ್ ಅಂದರೆ ಅದು ಟೆಸ್ಟ್ ಮಾದರಿ
ನಾವಿಂದು ಈ ವರದಿಯಲ್ಲಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಒಂದು ಬಾರಿಯೂ ಔಟ್ ಆಗದ ನಾಲ್ವರು ಕ್ರಿಕೆಟಿಗರ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಜಾನ್ ಚೈಲ್ಡ್ಸ್: ಗ್ಲೌಸೆಸ್ಟರ್ ಶೈರ್ ಮತ್ತು ಎಸೆಕ್ಸ್ ಪರ ಕೌಂಟಿ ಕ್ರಿಕೆಟ್ ಆಡಿರುವ ಜಾನ್ ಚೈಲ್ಡ್ಸ್ 36ನೇ ವಯಸ್ಸಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್’ಗೆ ಪಾದಾರ್ಪಣೆ ಮಾಡಿದರು. ಚೈಲ್ಡ್ಸ್ ಆಡಿದ 2 ಪಂದ್ಯಗಳಲ್ಲಿ 86 ಓವರ್’ಗಳಿಂದ ಕೇವಲ ಮೂರು ವಿಕೆಟ್’ಗಳನ್ನು ಪಡೆದಿದ್ದಾರೆ. ವೆಸ್ಟ್ ಇಂಡೀಸ್ ಬೌಲರ್’ಗಳ ಪ್ರಾಬಲ್ಯವಿದ್ದ ಆ ಸರಣಿಯಲ್ಲಿ, ಚೈಲ್ಡ್ಸ್ ಬ್ಯಾಟಿಂಗ್ ಮಾಡಿದ 4 ಬಾರಿಯೂ ಔಟಾಗದೆ ಉಳಿಯುವಲ್ಲಿ ಯಶಸ್ವಿಯಾಗಿದ್ದರು. ಪಂದ್ಯ: 2, ಇನ್ನಿಂಗ್ಸ್: 4, ರನ್: 2, ಗರಿಷ್ಠ ಸ್ಕೋರ್: 2
ಟಿನು ಯೋಹನ್ನನ್: ಈತ ಕೇರಳದ ಮೊದಲ ಕ್ರಿಕೆಟಿಗನಾಗಿದ್ದು, ಟೆಸ್ಟ್ ಮತ್ತು ODIಗಳಲ್ಲಿ ಭಾರತದ ಪರ ಆಡಿದ್ದರು. ಯೋಹಾನನ್ ಡಿಸೆಂಬರ್ 2001 ರಲ್ಲಿ ಇಂಗ್ಲೆಂಡ್ ವಿರುದ್ಧ ಸ್ಮರಣೀಯ ಟೆಸ್ಟ್ ಚೊಚ್ಚಲ ಪಂದ್ಯವನ್ನು ಆಡಿದ್ದರು, ಇದರಲ್ಲಿ ಇಬ್ಬರು ಆಂಗ್ಲ ಆರಂಭಿಕರನ್ನು ಔಟ್ ಮಾಡಿದ್ದಲ್ಲದೆ, ಒಟ್ಟು 4 ವಿಕೆಟ್ ಪಡೆದರು. ಅದಾದ ಬಳಿಕ ಆಡಿದ ಮುಂದಿನ ಎರಡು ಟೆಸ್ಟ್ ಪಂದ್ಯಗಳಲ್ಲಿ, ತಲಾ ಒಂದೊಂದು ವಿಕೆಟ್ ಪಡೆದು, 51.20 ಸರಾಸರಿಯೊಂದಿಗೆ ಒಟ್ಟು ಆರು ವಿಕೆಟ್’ಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದರು. ಇನ್ನು ತಮ್ಮ ವೃತ್ತಿಜೀವನದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ, ಯೋಹಾನನ್ ನಾಲ್ಕು ಬಾರಿ ಬ್ಯಾಟಿಂಗ್ ಮಾಡಿದ್ದರು. ಆ ನಾಲ್ಕು ಇನ್ನಿಂಗ್ಸ್’ಗಳಲ್ಲಿ, ಔಟಾಗದೆ ಉಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪಂದ್ಯಗಳು: 3, ಇನ್ನಿಂಗ್ಸ್: 4, ರನ್: 13, ಗರಿಷ್ಠ ಸ್ಕೋರ್: 8*
ಅಫಾಕ್ ಹುಸೇನ್: ಬಲಗೈ ಆಫ್ ಬ್ರೇಕ್ ಬೌಲರ್ ಮತ್ತು ಕೆಳ ಕ್ರಮಾಂಕದ ಬಲಗೈ ಬ್ಯಾಟ್ಸ್‌ಮನ್ ಅಫಾಕ್ ಹುಸೇನ್ 67 ಪಂದ್ಯಗಳಲ್ಲಿ 1448 ರನ್ ಮತ್ತು 214 ವಿಕೆಟ್’ಗಳೊಂದಿಗೆ ಉತ್ತಮ ಪ್ರಥಮ ದರ್ಜೆ ದಾಖಲೆಯನ್ನು ಹೊಂದಿದ್ದಾರೆ. ಇವೆಲ್ಲದರ ಹೊರತಾಗಿಯೂ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ಪರ ಕೇವಲ ಎರಡು ಟೆಸ್ಟ್’ಗಳನ್ನು ಆಡಿದ್ದರು. ಔಟಾಗದೆ ಅತಿ ಹೆಚ್ಚು ಟೆಸ್ಟ್ ರನ್ (66) ಗಳಿಸಿದ ಹುಸೇನ್ ಟೆಸ್ಟ್ ಕ್ರಿಕೆಟ್’ನಲ್ಲಿ ವಿಶಿಷ್ಟ ದಾಖಲೆ ಹೊಂದಿದ್ದಾರೆ. 1961 ರಲ್ಲಿ ಇಂಗ್ಲೆಂಡ್ ವಿರುದ್ಧದ ಅವರ ಮೊದಲ ಟೆಸ್ಟ್ ಪಂದ್ಯದಲ್ಲಿ 10* ಮತ್ತು 35* ರನ್ ಗಳಿಸಿದರು. ಮೂರು ವರ್ಷಗಳ ನಂತರ 1964 ರಲ್ಲಿ, ಆಸ್ಟ್ರೇಲಿಯಾ ವಿರುದ್ಧ ಆಡುವ ಅವಕಾಶವನ್ನು ಪಡೆದರು, ಅಲ್ಲಿ 8* ಮತ್ತು 13* ರನ್ ಗಳಿಸಿದರು.
ಐಜಾಜ್ ಚೀಮಾ: ಈತ ಪಾಕಿಸ್ತಾನದ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗ. ಜಿಂಬಾಬ್ವೆ ವಿರುದ್ಧ 31 ನೇ ವಯಸ್ಸಿನಲ್ಲಿ ಚೊಚ್ಚಲ ಪ್ರವೇಶ ಮಾಡಿದ ಚೀಮಾ, ಕ್ವೈಡ್-ಎ-ಅಜಮ್ ಟ್ರೋಫಿಯಲ್ಲಿ 8 ಪಂದ್ಯಗಳಲ್ಲಿ 57 ವಿಕೆಟ್’ಗಳನ್ನು ಕಬಳಿಸುವ ಮೂಲಕ ಸದ್ದು ಮಾಡಿದ್ದರು. ಅಷ್ಟೇ ಅಲ್ಲದೆ, ಜಿಂಬಾಬ್ವೆ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ ಎಂಟು ವಿಕೆಟ್’ಗಳನ್ನು ಪಡೆದರು. ಸೆಪ್ಟೆಂಬರ್ 2011 ಮತ್ತು ಜೂನ್ 2012 ರ ನಡುವೆ ಅವರು ಆಡಿದ ಏಳು ಪಂದ್ಯಗಳಲ್ಲಿ, ಐದು ಸಂದರ್ಭಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದರು. ಈ ಎಲ್ಲಾ ಸಂದರ್ಭದಲ್ಲೂ ಅವರು ಪ್ರತಿ ಬಾರಿಯೂ ಔಟಾಗದೆ ಉಳಿದರು. ಆದರೆ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಅವರು ಗಳಿಸಿದ್ದು ಕೇವಲ 1 ರನ್, ಅದೂ ಕೂಡ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ. ಪಂದ್ಯಗಳು: 7, ಇನ್ನಿಂಗ್ಸ್: 5, ರನ್: 1, ಗರಿಷ್ಠ ಸ್ಕೋರ್: 1*