ಇದು ದೇಶದಲ್ಲೇ ಅತಿ ಹೆಚ್ಚು ದೇವಾಲಯಗಳನ್ನು ಹೊಂದಿರುವ ರಾಜ್ಯ... ಇಲ್ಲಿವೆ ಬರೋಬ್ಬರಿ 3,90,615 ದೇವಸ್ಥಾನಗಳು! ನಿತ್ಯ ನಡೆಯುತ್ತೆ ಪೂಜೆ-ಪುನಸ್ಕಾರ
ಭಾರತದಲ್ಲಿ ಅನೇಕ ಧರ್ಮಗಳ ಜನರು ವಾಸಿಸುತ್ತಿದ್ದಾರೆ. ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್, ಜೈನ್, ಪಾರ್ಸಿ ಮತ್ತು ಇತರ ಧರ್ಮಗಳನ್ನು ಒಳಗೊಂಡಿರುವ ಭಾರತದಲ್ಲಿ ಸುಮಾರು 97 ಕೋಟಿ ಹಿಂದೂ ಧರ್ಮದ ಜನರು ವಾಸಿಸುತ್ತಿದ್ದಾರೆ. ಇದು ಭಾರತದ ಒಟ್ಟು ಜನಸಂಖ್ಯೆಯ 79%ದಷ್ಟು. ಇದೇ ಕಾರಣದಿಂದ ಭಾರತದಲ್ಲಿ ಅನೇಕ ಹಿಂದೂ ದೇಗುಲಗಳನ್ನು ಕಾಣಬಹುದು.
ಭಾರತದಲ್ಲಿರುವ ಸಾವಿರಾರು ದೇಗುಲಗಳಲ್ಲಿ, ಕೆಲವು ಶತಮಾನಗಳಷ್ಟು ಹಳೆಯವು. ಇದು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಕೆಲವು ಹೊಸ ದೇವಾಲಯಗಳನ್ನು ಸಹ ನಿರ್ಮಿಸಲಾಗುತ್ತಿದೆ. ಅಂದಹಾಗೆ ಭಾರತದ ಯಾವ ರಾಜ್ಯವು ಅತಿ ಹೆಚ್ಚು ದೇವಾಲಯಗಳನ್ನು ಹೊಂದಿದೆ? ಆ ರಾಜ್ಯದಲ್ಲಿ ಒಟ್ಟು ಎಷ್ಟು ದೇವಾಲಯಗಳಿವೆ ಎಂಬುದನ್ನು ತಿಳಿಯೋಣ.
ದೇಶದ ಇತರ ಭಾಗಗಳಿಗೆ ಹೋಲಿಸಿದರೆ ದಕ್ಷಿಣ ಭಾರತದ ಜನರು ತುಂಬಾ ಧಾರ್ಮಿಕ ಸ್ವಭಾವದವರು. ದಕ್ಷಿಣ ಭಾರತದ ಆಂಧ್ರಪ್ರದೇಶದಲ್ಲಿರುವ ತಿರುಪತಿ ಬಾಲಾಜಿ ದೇವಸ್ಥಾನವು ಹಿಂದೂಗಳಿಗೆ ಬಹಳ ಮುಖ್ಯವಾದ ಪೂಜಾ ಸ್ಥಳವಾಗಿದೆ. ಈ ಪವಿತ್ರ ಸ್ಥಳಕ್ಕೆ ಕೋಟಿಗಟ್ಟಲೆ ಭಕ್ತರು ಆಗಮಿಸುತ್ತಾರೆ. ಇನ್ನು ಈ ದೇವಾಲಯವು ಭಾರತದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ.
ಇನ್ನು ದಕ್ಷಿಣ ಭಾರತದ ರಾಜ್ಯವಾದ ತಮಿಳುನಾಡು ಅತಿ ಹೆಚ್ಚು ದೇವಾಲಯಗಳನ್ನು ಹೊಂದಿದೆ. ಒಂದು ಅಂದಾಜಿನ ಪ್ರಕಾರ ತಮಿಳುನಾಡಿನಲ್ಲಿ ಸುಮಾರು 33,000 ಪುರಾತನ ದೇವಾಲಯಗಳಿವೆ. ಅಷ್ಟೇ ಅಲ್ಲದೆ, ತಮಿಳುನಾಡು ಹಿಂದೂ ದತ್ತಿ ಮಂಡಳಿಯು ರಾಜ್ಯದಲ್ಲಿ 38,615 ದಿಂದ 3,90,615 ದೇವಾಲಯಗಳಿವೆ ಎಂದು ಅಂದಾಜಿಸಿದೆ.
ತಮಿಳುನಾಡಿನಲ್ಲಿ ಅನೇಕ ಪ್ರಸಿದ್ಧ ದೇವಾಲಯಗಳಿವೆ. ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇನ್ನು ಇಲ್ಲಿನ ಮಧುರೈನಲ್ಲಿರುವ ಮೀನಾಕ್ಷಿ ದೇವಸ್ಥಾನವು ಸಾಕಷ್ಟು ಪ್ರಸಿದ್ಧವಾಗಿದೆ. ಈ ದೇವಾಲಯದ ಇತಿಹಾಸವು ಸರಿಸುಮಾರು 3,500 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ಈ ದೇವಾಲಯವು ಶಿವ ಮತ್ತು ತಾಯಿ ಪಾರ್ವತಿಯ ದೇವಾಲಯವಾಗಿದೆ.
ರಾಮೇಶ್ವರಂನಲ್ಲಿರುವ ರಾಮನಾಥ ಸ್ವಾಮಿ ದೇವಾಲಯವು ಭಕ್ತರಿಗೆ ವಿಶೇಷ ಮಹತ್ವವನ್ನು ಹೊಂದಿದೆ. ಇದು 12 ಜ್ಯೋತಿರ್ಲಿಂಗಗಳಲ್ಲಿ ಒಂದು. ಇದರೊಂದಿಗೆ ಚಿದಂಬರಂನಲ್ಲಿರುವ ನಟರಾಜ ದೇವಾಲಯ ಮತ್ತು ಚೆನ್ನೈನಲ್ಲಿರುವ ಕಪಾಲೇಶ್ವರ ದೇವಾಲಯವು ಭಕ್ತರ ಪ್ರಮುಖ ಶ್ರದ್ಧಾ ಕೇಂದ್ರಗಳಾಗಿವೆ.