ICC WorldCup 2023: ವಿಶ್ವದಾಖಲೆ ಮುರಿಯುವ ಸನಿಹದಲ್ಲಿ ಹಿಟ್‍ಮ್ಯಾನ್ ರೋಹಿತ್ ಶರ್ಮಾ..!
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ 55ಕ್ಕೂ ಅಧಿಕ ಸರಾಸರಿಯೊಂದಿಗೆ 442 ರನ್ ಗಳಿಸಿದ್ದಾರೆ. ಅವರು ಒಂದು ಶತಕವನ್ನೂ ಗಳಿಸಿದ್ದಾರೆ. ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ 5ನೇ ಸ್ಥಾನದಲ್ಲಿದ್ದಾರೆ.
ರೋಹಿತ್ ಶರ್ಮಾ ವಿಶ್ವಕಪ್ ಇತಿಹಾಸದಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್ ಆಗಬಹುದು. ಅವರು ಈ ದಾಖಲೆ ನಿರ್ಮಿಸಲು ಕೇವಲ 5 ಸಿಕ್ಸರ್‌ಗಳ ಅಂತರದಲ್ಲಿದ್ದಾರೆ. ಈ ಪಟ್ಟಿಯ ಅಗ್ರಸ್ಥಾನದಲ್ಲಿ ವೆಸ್ಟ್ ಇಂಡೀಸ್‍ನ ದಂತಕಥೆ ಕ್ರಿಸ್ ಗೇಲ್ ಇದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ 49 ಅವರು ಸಿಕ್ಸರ್‌ಗಳನ್ನು ಬಾರಿಸಿದ್ದರೆ, ರೋಹಿತ್ 45 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಈ ಅದ್ಭುತ ಸಾಧನೆ ಮಾಡುವ ಸಾಧ್ಯತೆಯಿದೆ. ರೋಹಿತ್ ಸ್ಫೋಟಕ ಆಟದ ಮುಂದೆ 5 ಸಿಕ್ಸರ್‌ಗಳನ್ನು ಬಾರಿಸುವುದು ದೊಡ್ಡ ವಿಷಯವಲ್ಲ.
ಕಳೆದ 10 ವರ್ಷಗಳಲ್ಲಿ ಟೀಂ ಇಂಡಿಯಾ ಒಂದೇ ಒಂದು ಐಸಿಸಿ ಟ್ರೋಫಿ ಗೆದ್ದಿಲ್ಲ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಕೊನೆಯ ಬಾರಿ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದ್ದರೆ, 2011ರಲ್ಲಿ ತವರು ನೆಲದಲ್ಲಿ ಭಾರತ ಏಕದಿನ ವಿಶ್ವಕಪ್ ಗೆದ್ದುಕೊಂಡಿತ್ತು. ಈ ಬಾರಿ ಟೀಂ ಇಂಡಿಯಾದ ಫಾರ್ಮ್ ನೋಡಿದ್ರೆ ಭಾರತ ತಂಡ ಮತ್ತೊಮ್ಮೆ ವಿಶ್ವಕಪ್ ಗೆಲ್ಲುವ ಸಾಧ್ಯತೆ ದಟ್ಟವಾಗಿದೆ.