ಒಪ್ಪೊತ್ತಿನ ಊಟಕ್ಕೂ ಪರದಾಡಿದ್ದ ಆತ ಇಂದು ಕ್ರಿಕೆಟ್ ಲೋಕಕ್ಕೇ ಲೆಜೆಂಡ್! ರೌಡಿಗಳ ಕೊಂಪೆಯಲ್ಲೇ ಬೆಳದರೂ ಸ್ಟಾರ್ ಆಗಿ ಮೆರೆದ ಕ್ರಿಕೆಟಿಗನೀತ
ವೆಸ್ಟ್ ಇಂಡೀಸ್ ಸೂಪರ್ ಆಲ್’ರೌಂಡರ್ ಕೀರಾನ್ ಪೊಲಾರ್ಡ್ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದಾರೆ. ಟಿ20 ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್’ಗಳಲ್ಲಿ ಒಬ್ಬರಾದ ಪೊಲಾರ್ಡ್ ಜೀವನ ಹಿನ್ನೆಲೆ ಎಂಥವರಿಗೂ ಸ್ಪೂರ್ತಿಯಾಗುವುದರಲ್ಲಿ ಎರಡು ಮಾತಿಲ್ಲ.
ಟಿ20 ಕ್ರಿಕೆಟ್’ನಲ್ಲಿ ಒಂದು ಶತಕ ಮತ್ತು 56 ಅರ್ಧಶತಕಗಳನ್ನು ಗಳಿಸಿದ ದಾಖಲೆಯನ್ನು ಕೀರಾನ್ ಪೊಲಾರ್ಡ್ ಹೊಂದಿದ್ದಾರೆ. ಕೀರನ್ ಪೊಲಾರ್ಡ್ ಇಂದು ವಿಶ್ವ ಕ್ರಿಕೆಟ್’ನಲ್ಲಿ ಲೆಜೆಂಡ್ ಆಗಿ ಮೆರೆಯುತ್ತಿದ್ದು, ಅಂತಹ ಶ್ರೇಷ್ಠ ಕ್ರಿಕೆಟಿಗನಾಗಲು ಅವರು ಪಟ್ಟ ಪಾಡು ಅಂತಿಂಥದಲ್ಲ.
ಕೀರಾನ್ ಪೊಲಾರ್ಡ್ ಹುಟ್ಟಿದ ನಂತರ ಇವರ ತಂದೆ-ತಾಯಿ ವಿಚ್ಛೇದನ ಪಡೆದುಕೊಂಡರು. ಅದಾದ ಬಳಿಕ ತಾಯಿಯ ಜೊತೆಯೇ ಬೆಳೆದ ಕೀರಾನ್, ಒಂದೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಎದುರಿಸಿದರು.
ಪೋರ್ಟ್ ಆಫ್ ಸ್ಪೇನ್’ನ ಟಕರಿಗುವಾ ಪ್ರದೇಶದಲ್ಲಿ ವಾಸಿಸುತ್ತಿದ್ದ ಪೊಲಾರ್ಡ್, ರೌಡಿಗಳ ಕೊಂಪೆಯಲ್ಲೇ ಬೆಳದರು. ಆ ಪ್ರದೇಶದಲ್ಲಿ ಕೊಲೆ, ದರೋಡೆ, ಡ್ರಗ್ಸ್ ಮತ್ತು ಗಾಂಜಾ ಇತ್ಯಾದಿಗಳಿಗೆ ಸಂಬಂಧಿಸಿದ ಅಪರಾಧಗಳು ನಡೆಯುತ್ತಿದ್ದವು. ಆದರೆ ಪೊಲಾರ್ಡ್ ತನ್ನತನವನ್ನು ಬಿಟ್ಟುಕೊಡದೆ, ಯಶಸ್ವಿ ಕ್ರಿಕೆಟಿಗರಾದರು.
ಸ್ವತಃ ಪೊಲಾರ್ಡ್ ತಮ್ಮ ಸಂದರ್ಶನವೊಂದರಲ್ಲಿ ಇದನ್ನು ಬಹಿರಂಗಪಡಿಸಿದ್ದಾರೆ. “ನನ್ನ ಸುತ್ತಲೂ ಅಪರಾಧಗಳನ್ನು ಕಂಡರೂ ನನ್ನ ಗಮನವು ವಿಚಲಿತವಾಗಲಿಲ್ಲ. ನಾನು 15 ನೇ ವಯಸ್ಸಿನಿಂದ ಕ್ರಿಕೆಟ್ ಆಡಲು ಶ್ರಮಿಸಲು ಪ್ರಾರಂಭಿಸಿದೆ” ಎಂದು ಪೊಲಾರ್ಡ್ ಹೇಳಿದ್ದರು