Photo Gallery: ನೀವು ಮಲಗಿದ್ದಾಗ ಅಫ್ಘಾನಿಸ್ತಾನದಲ್ಲಿ ಏನಾಯಿತು ನೋಡಿ…

Wed, 18 Aug 2021-3:03 pm,

ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ವಶಪಡಿಸಿಕೊಂಡ ಬಳಿಕ ಅನೇಕ ಬೆಳವಣಿಗಗಳು ನಡೆದಿವೆ. ನ್ಯೂಯಾರ್ಕ್ ನಗರದ ವಿಶ್ವಸಂಸ್ಥೆಯಲ್ಲಿ ಅಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ ನಡೆಯಿತು. ಅಫ್ಘಾನಿಸ್ತಾನದಲ್ಲಿನ ಸದ್ಯದ ಪರಿಸ್ಥಿತಿಗಳ ಬಗ್ಗೆ ಸುದೀರ್ಘವಾಗಿ ವಿಶ್ವದ ನಾಯಕರು ಚರ್ಚಿಸಿದ್ದಾರೆ. ಮಹಿಳೆಯರು ಸೇರಿದಂತೆ ಅಫ್ಘಾನ್ ಪ್ರಜೆಗಳ ರಕ್ಷಣೆಗೆ ಮುಂದೇನು ಮಾಡಬೇಕೆಂಬುದರ ಬಗ್ಗೆ ಮಾತುಕತೆ ನಡೆದಿದೆ.

ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಕುರಿತು ದೇಶವನ್ನುದ್ದೇಶಿಸಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮಾತನಾಡಿದರು. ಅಫ್ಘಾನಿಸ್ತಾನದಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಸರಿಯಾಗಿದೆ ಅಂತಾ ಬಿಡೆನ್ ಸಮರ್ಥಿಸಿಕೊಂಡಿದ್ದಾರೆ. ಅಫ್ಘಾನ್ ಪಡೆಗಳು ತಮಗಾಗಿ ಹೋರಾಡಲು ಸಿದ್ಧರಿಲ್ಲದ ಈ ಯುದ್ಧದಲ್ಲಿ ಅಮೆರಿಕದ ಸೈನಿಕರು ಸಾಯಬಾರದು. ಅಫ್ಘಾನಿಸ್ತಾನದಲ್ಲಿರುವ ಅಮೆರಿಕದ ಸೇನಾಸಿಬ್ಬಂದಿಗೆ ಏನಾದರೂ ತೊಂದರೆ ನೀಡಿದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದು ಬಿಡೆನ್ ಎಚ್ಚರಿಕೆ ನೀಡಿದ್ದಾರೆ.  

ಹದಗೆಡುತ್ತಿರುವ ಅಫ್ಘಾನಿಸ್ತಾನ ಪರಿಸ್ಥಿತಿಯ ಕುರಿತು ಮಾತನಾಡಿರುವ ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್, ತಾಲಿಬಾನ್‌ ಉಗ್ರರ ಭಯದಿಂದ ನೆರೆಯ ದೇಶಗಳಿಗೆ ಪಲಾಯನ ಮಾಡುವ ಅಫ್ಘಾನ್ ಪ್ರಜೆಗಳಿಗೆ ಸಾಕಷ್ಟು ಮಾನವೀಯ ನೆರವಿನ ಅಗತ್ಯವಿದೆ. ಅವರು ಯುರೋಪ್‌ಗೆ ವಲಸೆ ಬಂದರೆ 2015ರ ವಲಸಿಗರ ಬಿಕ್ಕಟ್ಟಿನ ಪರಿಸ್ಥಿತಿ ಪುನರಾವರ್ತನೆಯಾಗುತ್ತದೆ ಅಂತಾ ಎಚ್ಚರಿಸಿದ್ದಾರೆ. ತಾಲಿಬಾನ್ ಉಗ್ರರಿಂದ ಕಾಬೂಲ್ ಪತನವಾಗಿರುವುದು ಕಹಿ ಬೆಳವಣಿಗೆ ಅಂತಾ ಹೇಳಿದ್ದಾರೆ.  

ಕಾಬೂಲ್ ಪತನದ ನಂತರ ಅಫ್ಘಾನಿಸ್ತಾನದ ಪರಿಸ್ಥಿತಿಯ ಕುರಿತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಅವರೊಂದಿಗೆ ಮಾತನಾಡಿದ್ದಾರೆ. ಬ್ಲಿಂಕನ್ ಅವರು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜೊತೆಗೂಡಿ ಅಫ್ಘಾನ್ ಬಿಕ್ಕಟ್ಟಿನ ಕುರಿತು ಚರ್ಚೆ ನಡೆಸಿದ್ದಾರೆ.

ಇಟಲಿ ರಾಜತಾಂತ್ರಿಕರು ಮತ್ತು ಅವರ ಅಫ್ಘಾನ್ ಸಹಾಯಕರನ್ನು ಹೊತ್ತ ಮೊದಲ ವಿಮಾನವು ಅಫ್ಘಾನ್ ರಾಜಧಾನಿಯಿಂದ ರೋಮ್‌ಗೆ ಬಂದಿಳಿದಿದೆ. ತಾಲಿಬಾನ್ ಭಯೋತ್ಪಾದಕರು ಕಾಬೂಲ್‌ಗೆ ನುಗ್ಗಿದ ಬಳಿಕ ರೋಮ್‌ಗೆ ಹಾರಿದ ಮಿಲಿಟರಿ ವಿಮಾನದಲ್ಲಿ ಸುಮಾರು 70 ಜನರು ಇದ್ದರು.

ತಾಲಿಬಾನ್ ಭಯೋತ್ಪಾದಕರು ಕಾಬೂಲ್ ಅನ್ನು ವಶಪಡಿಸಿಕೊಳ್ಳುತ್ತಿದ್ದಂತೆ ಅನೇಕ ದೇಶಗಳು ತಮ್ಮ ರಾಜತಾಂತ್ರಿಕರು ಮತ್ತು ಸಿಬ್ಬಂದಿಯನ್ನು ವಾಪಸ್ ತಾಯ್ನಾಡಿಗೆ ಕರೆಸಿಕೊಳ್ಳಲು ವಿಶೇಷ ವಿಮಾನಗಳ ವ್ಯವಸ್ಥೆ ಮಾಡಿದ್ದವು. ಅದರಂತೆ ಕಾಬೂಲ್ ನಿಂದ ಹಾರಿದ ಮೊದಲ ಬ್ರಿಟಿಷ್ ವಿಮಾನವು ಆಕ್ಸ್‌ ಫರ್ಡ್‌ಶೈರ್‌ನ RAF ಬ್ರೈಜ್ ನಾರ್ಟನ್‌ನಲ್ಲಿ ಬಂದಿಳಿಯಿತು.

ಅಫ್ಘಾನಿಸ್ತಾನದಲ್ಲಿನ ಮಾನವೀಯ ಬಿಕ್ಕಟ್ಟಿನ ಕುರಿತು ಮಾತನಾಡಿದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸಫ್ ಜಾಯ್, ದೇಶದ ಪರಿಸ್ಥಿತಿ, ವಿಶೇಷವಾಗಿ ಮಹಿಳೆಯರು ಮತ್ತು ಬಾಲಕಿಯರ ಸುರಕ್ಷತೆಯ ಬಗ್ಗೆ ತೀವ್ರ ಆತಂಕಗೊಂಡಿರುವುದಾಗಿ ಹೇಳಿದ್ದಾರೆ. ಅಫ್ಘಾನಿಸ್ತಾನದ ಪರಿಸ್ಥಿತಿ, ಅಲ್ಲಿನ ಮಹಿಳೆಯರು ಮತ್ತು ಬಾಲಕಿಯರ ಸುರಕ್ಷತೆ ಬಗ್ಗೆ ವಿಶ್ವದ ನಾಯಕರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಆಗಸ್ಟ್ 15ರಂದು ತಾಲಿಬಾನ್ ಉಗ್ರರು ಕಾಬೂಲ್ ನಲ್ಲಿರುವ ಅಫ್ಘಾನ್ ಅಧ್ಯಕ್ಷರ ಅರಮನೆಯ ಮೇಲೆ ಹಿಡಿತ ಸಾಧಿಸಿದರು. ತಾಲಿಬಾನ್ ನಾಯಕರು ಈಗ ದೋಹಾದಲ್ಲಿ ಸರ್ಕಾರ ರಚಿಸುವ ಬಗ್ಗೆ ಚರ್ಚಿಸುತ್ತಿದ್ದಾರೆಂದು ತಿಳಿದುಬಂದಿದೆ. ಭವಿಷ್ಯದಲ್ಲಿ ತಾಲಿಬಾನ್ ಸರ್ಕಾರ ರಚಿಸುವುದು, ಕಾನೂನು ಜಾರಿಗೊಳಿಸುವುದು, ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳು ಹೀಗೆ ಪ್ರತಿಯೊಂದರ ಬಗ್ಗೆಯೂ ತಾಲಿಬಾನ್ ನಾಯಕರು ಮಾತುಕತೆ ನಡೆಸುತ್ತಿದ್ದಾರಂತೆ. ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಲು ಉಗ್ರರು ಅಂತಾರಾಷ್ಟ್ರೀಯ ಸಮುದಾಯ ಮತ್ತು ಅಫ್ಘಾನ್ ಒಳಗಿನ ಪಕ್ಷಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link