ರೋಹಿತ್ ಶರ್ಮಾ ನಿವೃತ್ತಿಯಾದ್ರೆ ಟೀಂ ಇಂಡಿಯಾದ ನಾಯಕ ಯಾರು? ಕ್ಯಾಪ್ಟನ್ ರೇಸ್‌ನಲ್ಲಿದ್ದಾರೆ ಈ ಮೂವರು!!
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಕಾಂಗರೂ ಪಡೆ ಪ್ರಸ್ತುತ 2-1 ಮುನ್ನಡೆ ಸಾಧಿಸಿದೆ. ಜನವರಿ 3ರಿಂದ ಸಿಡ್ನಿಯಲ್ಲಿ ಆರಂಭವಾಗಲಿರುವ ೫ನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಭಾರತ ಗೆಲ್ಲಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪಂದ್ಯ ಗೆದ್ದರೆ ಸರಣಿ ಸಮಬಲಗೊಳಲಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ರೇಸ್‌ನಲ್ಲಿ ಉಳಿಯಲಿದೆ. ಆದರೆ ಸದ್ಯ ಟೀಂ ಇಂಡಿಯಾದ ಫಾರ್ಮ್, ನಾಯಕ ರೋಹಿತ್ ಶರ್ಮಾ ಸೇರಿದಂತೆ ಇತರೆ ಸ್ಟಾರ್ ಆಟಗಾರರ ಫಾರ್ಮ್ ಆತಂಕಕಾರಿಯಾಗಿದೆ. ಸಿಡ್ನಿ ಟೆಸ್ಟ್ ಬಳಿಕ ರೋಹಿತ್ ಶರ್ಮಾ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸಿಡ್ನಿ ಟೆಸ್ಟ್ ಬಳಿಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಂಡಕ್ಕೆ ವಿದಾಯ ಹೇಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ರೋಹಿತ್ ನಿವೃತ್ತಿ ಘೋಷಿಸಿದರೆ ಭಾರತಕ್ಕೆ ಹೊಸ ನಾಯಕನನ್ನು ಹುಡುಕಬೇಕಾಗುತ್ತದೆ. ಪರ್ತ್ ಟೆಸ್ಟ್‌ನಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದ ವೇಗಿ ಜಸ್ಪ್ರೀತ್ ಬುಮ್ರಾ ಅವರು ಟೆಸ್ಟ್ ತಂಡದ ನಾಯಕತ್ವಕ್ಕೆ ಭರವಸೆಯಾಗಿ ಕಾಣುತ್ತಿದ್ದಾರೆ. ಸದ್ಯ ತಂಡದ ಉಪನಾಯಕರಾಗಿರುವ ಬುಮ್ರಾ ನಾಯಕತ್ವದ ರೇಸ್‌ನಲ್ಲಿ ಮುಂದಿದ್ದಾರೆ. ಆದರೆ ಬುಮ್ರಾ ಆಗಾರ ಗಾಯಗೊಂಡು ತಂಡದಿಂದ ಹೊರಬೀಳುವ ಸಾಧ್ಯತೆ ಇರೋದ್ರಿಂದ ಟೆಸ್ಟ್ ನಾಯಕತ್ವ ವಹಿಸಿಕೊಳ್ಳಲು ಇವರನ್ನ ನಂಬಿ ಕುಳಿತುಕೊಳ್ಳುವ ಸಾಧ್ಯತೆ ಕಡಿಮೆ.
ರೋಹಿತ್‌ರಂತೆ ಬುಮ್ರಾ ಟೆಸ್ಟ್ ಮತ್ತು ಏಕದಿನ ಮಾದರಿಯಲ್ಲಿ ತಂಡವನ್ನು ಮುನ್ನಡೆಸುವ ಸಾಧ್ಯತೆಯಿಲ್ಲ. ಬುಮ್ರಾರನ್ನು ಟೆಸ್ಟ್ ತಂಡದ ನಾಯಕನನ್ನಾಗಿ ಘೋಷಿಸಬಹುದು. ಒಂದು ವೇಳೆ ಬೌಲರ್ಗೆ ನಾಯಕತ್ವ ಕೊಡುವುದು ಬೇಡವೆಂದು ನಿರ್ಧಾರವಾದ್ರೆ ಕೆ.ಎಲ್.ರಾಹುಲ್ ಅಥವಾ ರಿಷಬ್ ಪಂತ್ ಇಬ್ಬರಲ್ಲಿ ಒಬ್ಬರು ನಾಯಕನಾಗುವ ಸಾಧ್ಯತೆಯಿದೆ. ಟೆಸ್ಟ್‌ನಲ್ಲಿ ಬುಮ್ರಾ ಬಿಟ್ಟು ಹೋಗುವ ಸಾಧ್ಯತೆ ತೀರಾ ಕಡಿಮೆ. ಈಗಾಗಲೇ ಪರ್ತ್ ಟೆಸ್ಟ್ ಗೆಲುವಿನೊಂದಿಗೆ ಬುಮ್ರಾ ತಮ್ಮ ನಾಯಕತ್ವದ ಕೌಶಲ್ಯವನ್ನ ತೋರಿಸಿದ್ದಾರೆ.
ಏಕದಿನ ಪಂದ್ಯಗಳಿಗೆ ಹೊಸ ನಾಯಕನನ್ನು ಹುಡುಕುವ ಸಾಧ್ಯತೆಯಿದೆ. ರೋಹಿತ್ ಏಕದಿನ ಪಂದ್ಯಗಳಿಂದ ನಿವೃತ್ತಿ ಪಡೆದಿಲ್ಲ. ಹೀಗಾಗಿ ಅವರು ಚಾಂಪಿಯನ್ಸ್ ಟ್ರೋಫಿವರೆಗೆ ಲಭ್ಯವಿರುತ್ತಾರೆ. ಆ ಬಳಿಕ ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಪೈಕಿ ಒಬ್ಬರಿಗೆ ಏಕದಿನ ನಾಯಕತ್ವ ನೀಡುವ ಸಾಧ್ಯತೆಯಿದೆ. ಈಗಾಗಲೇ ಸೂರ್ಯಕುಮಾರ್ ಯಾದವ್ ನಾಯಕನಾಗಿ ಟಿ-20ಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಅವರು ಏಕದಿನ ಮಾದರಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ.