ಜರ್ಮನಿಯಲ್ಲಿ ಮರಣ ಮೃದಂಗ ಭಾರಿಸಿದ ಮಹಾಪ್ರವಾಹ: 160ಕ್ಕೂ ಹೆಚ್ಚು ಮಂದಿ ಸಾವು!

Wed, 21 Jul 2021-4:58 pm,

ಜರ್ಮನಿಯ ನೆರೆಯ ದೇಶ ಬೆಲ್ಜಿಯ ಕೂಡ ಪ್ರವಾಹದ ಹೊಡೆತಕ್ಕೆ ನಲುಗಿಹೋಗಿದೆ. ಬೆಲ್ಜಿಯಂನಲ್ಲಿಯೂ 31ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಅಪಾರ ಪ್ರಮಾಣದ ಆಸ್ತಿ-ಪಾಸ್ತಿಗೆ ಹಾನಿಯುಂಟಾಗಿದೆ. ಜರ್ಮನಿ ಮತ್ತು ಬೆಲ್ಜಿಯಂ ಎರಡೂ ದೇಶಗಳಲ್ಲಿ ಇದುವರೆಗೆ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವುದು ವರದಿಯಾಗಿದೆ.

ಜರ್ಮನಿಯಲ್ಲಿ ಸಂಭವಿಸಿರುವ ಭೀಕರ ಪ್ರವಾಹಕ್ಕೆ 160ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಹಲವರು ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಜರ್ಮನಿ ಚಾನ್ಸಲರ್ ಎಂಜೆಲಾ ಮಾರ್ಕೆಲ್ ಮತ್ತು ಮಂತ್ರಿಗಳು ಸುಮಾರು 400 ಮಿಲಿಯನ್ ಯುರೋಗಳಷ್ಟು(472 ಮಿಲಿಯನ್ ಅಮೆರಿಕನ್ ಡಾಲರ್) ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ. ಇದರಲ್ಲಿ ಅರ್ಧದಷ್ಟು ಹಣವನ್ನು ಫೆಡರಲ್ ಸರ್ಕಾರವು ಮತ್ತು ಅರ್ಧದಷ್ಟು ಜರ್ಮನಿಯ ರಾಜ್ಯ ಸರ್ಕಾರಗಳು ನೀಡುವ ನಿರೀಕ್ಷೆ ಇದೆ. ಪ್ರವಾಹದ ಬಳಿಕ ಉಂಟಾಗಿರುವ ಕಷ್ಟ-ನಷ್ಟಗಳಿಗೆ ಈ ತುರ್ತು ನಿಧಿಯನ್ನು ಬಳಕೆ ಮಾಡಲಾಗುತ್ತದೆ.  

ಸುಮಾರು 60 ವರ್ಷಗಳಲ್ಲಿಯೇ ಜರ್ಮನಿಯಲ್ಲಿ ಸಂಭವಿಸಿದ ಅತ್ಯಂತ ಭೀಕರ ನೈಸರ್ಗಿಕ ವಿಕೋಪ ಇದಾಗಿದೆ. ಅಪಾರ ಪ್ರಮಾಣದ ಹಾನಿಯಾಗಿರುವುದರಿಂದ ಇದರ ಆರ್ಥಿಕ ವೆಚ್ಚವು ಮುಂಬರುವ ಸರ್ಕಾರದ ಮೇಲೆ ಹೆಚ್ಚಿನ ಹೊರೆಯಾಗಲಿದೆ.  

ವರುಣನ ಆರ್ಭಟಕ್ಕೆ ಜರ್ಮನಿ ತತ್ತರಿಸಿ ಹೋಗಿದ್ದು, ಪ್ರವಾಹ ಪರಿಸ್ಥಿತಿಯಿಂದ ಅಪಾರ ಪ್ರಮಾಣದ ಆಸ್ತಿ-ಪಾಸ್ತಿಗೆ ಹಾನಿಯುಂಟಾಗಿದೆ. ಮಳೆಪ್ರವಾಹಕ್ಕೆ ಸಾವಿರಾರು ಮನೆಗಳು ಕುಸಿತ ಕಂಡಿದ್ದು, ಅನೇಕರು ಬೀದಿಪಾಲಾಗಿದ್ದಾರೆ. ಒಂದು ಅಂದಾಜಿನ ಪ್ರಕಾರ ಭೀಕರ ಪ್ರವಾಹದಿಂದ ಜರ್ಮನಿಯಲ್ಲಿ ಲೆಕ್ಕಕ್ಕೆ ಸಿಗದಷ್ಟು ಆಸ್ತಿ-ಪಾಸ್ತಿಗೆ ಹಾನಿಯುಂಟಾಗಿದೆ ಎಂದು ಹೇಳಲಾಗಿದೆ.  ಯುರೋಪಿಯನ್ ಒಕ್ಕೂಟದಿಂದ ಆರ್ಥಿಕ ನೆರವು ಪಡೆಯುವ ಭರವಸೆಯನ್ನು ಜರ್ಮನಿ ಸರ್ಕಾರ ಹೊಂದಿದೆ.  

ಜರ್ಮನಿ ರಾಷ್ಟ್ರೀಯ ಚುನಾವಣೆಗಳಿಗೆ ಕೇವಲ 10 ವಾರ ಮಾತ್ರ ಬಾಕಿ ಇದೆ. ಈ ನಡುವೆ ಮಹಾಪ್ರವಾಹವು ಜರ್ಮನಿ ನಾಯಕರನ್ನು ದೊಡ್ಡ ಇಕ್ಕಟ್ಟಿಗೆ ಸಿಲುಕಿದೆ. ಆಡಳಿತ ಸರ್ಕಾರ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸೋತಿದೆ ಎಂದು ಪ್ರತಿಪಕ್ಷ ನಾಯಕರು ಆರೋಪಿಸಿದ್ದಾರೆ. ಅಲ್ಲದೆ ಪ್ರವಾಹದಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರವಾಹದಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಜರ್ಮನಿ ಚಾನ್ಸಲರ್ ಎಂಜೆಲಾ ಮಾರ್ಕೆಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.       

ZEENEWS TRENDING STORIES

By continuing to use the site, you agree to the use of cookies. You can find out more by Tapping this link