ಯೋಗಿ 2.0ನಲ್ಲಿ ‘ಮಹಿಳಾ ಶಕ್ತಿ’: ಐವರಿಗೆ ಸಚಿವ ಸ್ಥಾನ

Fri, 25 Mar 2022-8:55 pm,

ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಆಗ್ರಾ ಗ್ರಾಮಾಂತರ ಪ್ರದೇಶದಿಂದ ಬೇಬಿ ರಾಣಿ ಮೌರ್ಯ ಹೊಸದಾಗಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಇವರಿಗೆ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಬೋಧಿಸುವ ಮೂಲಕ ದಲಿತರು ಮತ್ತು ಮಹಿಳೆಯರಿಬ್ಬರನ್ನೂ ಒಟ್ಟಿಗೆ ಸೇರಿಸುವ ಉಪಕ್ರಮವನ್ನು ಪಕ್ಷ ತೆಗೆದುಕೊಂಡಿದೆ. ಬೇಬಿ ರಾಣಿ ಈ ಹಿಂದೆ ಉತ್ತರಾಖಂಡದ ರಾಜ್ಯಪಾಲರಾಗಿದ್ದರು ಮತ್ತು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರೂ ಆಗಿದ್ದರು. ಇವರು ರಾಜ್ಯ ಮಕ್ಕಳ ಆಯೋಗ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರೂ ಆಗಿದ್ದಾರೆ. ಇವರು ಜಾತವ್ ಸಮುದಾಯದಿಂದ ಬಂದಿದ್ದು, ಮಾಯಾವತಿಯವರಿಗೆ ಮುಂದಿನ ದಿನಗಳಲ್ಲಿ  ಟಕ್ಕರ್ ಕೊಡಬಹುದು ಎಂದು ಹೇಳಲಾಗುತ್ತಿದೆ.

ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಶಹಾಬಾದ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಿಂದ ರಜನಿ ತಿವಾರಿ ಮತ್ತೊಮ್ಮೆ ಶಾಸಕರಾಗಿದ್ದಾರೆ. ಇದಕ್ಕೂ ಮುನ್ನ ರಜನಿ ತಿವಾರಿ ಅವರು 2017ರಲ್ಲಿ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಆಸಿಫ್ ಖಾನ್ ಅವರನ್ನು ಸೋಲಿಸಿದ್ದರು. ರಜನಿ ತಿವಾರಿ ಅವರ ಪತಿ ಉಪೇಂದ್ರ ತಿವಾರಿ ಅವರು ಬಿಲ್ಗ್ರಾಮ್ ಕ್ಷೇತ್ರದ ಶಾಸಕರಾಗಿದ್ದರು. ಅವರ ಮರಣಾ ನಂತರ ಉಪಚುನಾವಣೆಯಲ್ಲಿ ರಜನಿ ತಿವಾರಿ ಈ ಸ್ಥಾನದಿಂದ ಶಾಸಕರಾಗಿ ಆಯ್ಕೆಯಾದರು. ರಜನಿ ತಿವಾರಿ ಈ ಬಾರಿ 4ನೇ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿ ದಾಖಲೆ ಬರೆದಿದ್ದಾರೆ.

ವಿಜಯ್ ಲಕ್ಷ್ಮಿ ಗೌತಮ್ ಅವರು ಯೋಗಿ ಸರ್ಕಾರದಲ್ಲಿ ರಾಜ್ಯ ಸಚಿವರಾಗಿದ್ದಾರೆ. ಇವರು ಸೇಲಂಪುರ ವಿಧಾನಸಭಾ ಕ್ಷೇತ್ರದ ಶಾಸಕಿ. 1992ರಿಂದ ರಾಜಕೀಯ ಆರಂಭಿಸಿದ ಇವರು ಬಿಜೆಪಿ ಮಹಿಳಾ ಮೋರ್ಚಾದ ದಿಯೋರಿಯಾ ನಗರ ಅಧ್ಯಕ್ಷರಾಗಿದ್ದರು. ಇದಲ್ಲದೇ ಬಿಜೆಪಿ ನಗರ ಉಪಾಧ್ಯಕ್ಷೆ, ಜಿಲ್ಲಾ ಮಹಿಳಾ ಮೋರ್ಚಾದ 2 ಬಾರಿ ಅಧ್ಯಕ್ಷೆ, ಬಿಜೆಪಿ ಜಿಲ್ಲಾ ಸಚಿವೆ, ಬಿಜೆಪಿ ಗೋರಖ್‌ಪುರ ಕ್ಷೇತ್ರದ ಸಚಿವೆ ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.                          

2022ರ ವಿಧಾನಸಭಾ ಚುನಾವಣೆಯಲ್ಲಿ ಕಾನ್ಪುರ ದೇಹತ್‌ನಿಂದ ಪ್ರತಿಭಾ ಶುಕ್ಲಾ ಅವರು ಬಿಜೆಪಿ ಟಿಕೆಟ್‌ನಲ್ಲಿ 3ನೇ ಬಾರಿಗೆ ಶಾಸಕರಾಗಿದ್ದಾರೆ. ಎಸ್ಪಿಯ ನೀರಜ್ ಸಿಂಗ್ ಅವರನ್ನು ಸೋಲಿಸುವ ಮೂಲಕ ಅವರು ಗೆಲವು ಸಾಧಿಸಿದ್ದಾರೆ. 2007ರಲ್ಲಿಯೂ ಶಾಸಕಿಯಾಗಿದ್ದ ಅವರು, ನಂತರ 2017ರ ವಿಧಾನಸಭೆ ಚುನಾವಣೆಯಲ್ಲಿ 2ನೇ ಬಾರಿಗೆ ಹಾಗೂ 2022ರಲ್ಲಿ 3ನೇ ಬಾರಿಗೆ ಗೆಲುವು ಸಾಧಿಸಿದರು. ಇವರ ಪತಿ ಅನಿಲ್ ಶುಕ್ಲಾ ಅವರು ಬಿಎಸ್‌ಪಿಯಿಂದ ಸಂಸದ ಮತ್ತು ಶಾಸಕರಾಗಿದ್ದರು. ಬಳಿಕ ಅವರು ಬಿಜೆಪಿ ಸೇರಿದರು. ಪ್ರತಿಭಾ ಶುಕ್ಲಾ ಅವರು 2007-2009ರಿಂದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸದಸ್ಯರಾಗಿದ್ದರು. ನಂತರ ಅವರು 2009ರಿಂದ 2012ರವರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಜಂಟಿ ಸಮಿತಿಯ ಸದಸ್ಯರಾಗಿದ್ದರು.

ಚಂದೌಸಿ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದ ಗುಲಾಬ್ ದೇವಿ ಅವರನ್ನು ಯೋಗಿ ಸರ್ಕಾರದಲ್ಲಿ ಸ್ವತಂತ್ರ ಉಸ್ತುವಾರಿ ಸಚಿವರನ್ನಾಗಿ ಮಾಡಲಾಗಿದೆ. ಗುಲಾಬ್ ದೇವಿ ಅವರು ಹಿಂದಿನ ಸರ್ಕಾರದಲ್ಲಿ ರಾಜ್ಯ ಸಚಿವರಾಗಿದ್ದರು. ಅವರು 1991ರಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಮೊದಲ ಬಾರಿಗೆ ಶಾಸಕರಾದರು. ಅವರು 1996ರಲ್ಲಿ ಮರು ಚುನಾವಣೆಯಲ್ಲಿ ಗೆದ್ದರು. 5 ಬಾರಿ ಶಾಸಕರಾಗಿದ್ದ ಅವರು ಬಿಜೆಪಿ ಸರ್ಕಾರದಲ್ಲಿ ಪ್ರೌಢ ಶಿಕ್ಷಣ ಸಚಿವೆ ಆಗಿಯೂ ಕಾರ್ಯನಿರ್ವಹಿಸಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link